
ಬೆಂಗಳೂರು: ಫೆಬ್ರವರಿ 29 ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ 2024-25ನೇ ಸಾಲಿನ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಸತತ ನಾಲ್ಕನೇ ಬಾರಿ ಅಧಿಕಾರಿಗಳೇ ಆಯವ್ಯಯ ಮಂಡಿಸುತ್ತಿದ್ದಾರೆ.
ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ್ ಕಲಕೇರಿ ಅವರು ಇದೇ ಗುರುವಾರ ಬಜೆಟ್ ಮಂಡಿಸುತ್ತಿದ್ದು, ಈ ಬಾರಿ 12ರಿಂದ 13 ಸಾವಿರ ಕೋಟಿ ರುಪಾಯಿ ಗಾತ್ರದ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ.
ಲೋಕಸಭೆ ಚುನಾವಣಾ ವೇಳಾ ಪಟ್ಟಿ ಮಾರ್ಚ್ ಮೊದಲ ವಾರ ಪ್ರಕಟವಾಗುವುದರೊಂದಿಗೆ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಹಿನ್ನೆಲೆಯಲ್ಲಿ ಗುರುವಾರ ಬಜೆಟ್ ಮಂಡನೆಗೆ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
2023-24ನೇ ಸಾಲಿನಲ್ಲಿ 11,158 ಕೋಟಿ ರೂ. ಆದಾಯ ನಿರೀಕ್ಷೆ ಇಟ್ಟುಕೊಂಡು 11,157 ಕೋಟಿ ರೂ. ವೆಚ್ಚದ ಯೋಜನೆಗಳನ್ನು ಘೋಷಣೆ ಮಾಡಿತ್ತು. ರಾಜ್ಯ ಸರ್ಕಾರ ಇನ್ನಷ್ಟು ಅನುದಾನ ನೀಡುವುದಾಗಿ ತಿಳಿಸಿ ಪಾಲಿಕೆ ಬಜೆಟ್ ಗಾತ್ರವನ್ನು 11,885 ಕೋಟಿ ರೂ.ಗೆ ಹೆಚ್ಚಿಸಿತ್ತು. ಈ ವರ್ಷ ಹೆಚ್ಚಿನ ಆದಾಯ ನಿರೀಕ್ಷಿಸಿ ಬಜೆಟ್ ಗಾತ್ರವನ್ನು 12 ಸಾವಿರ ಕೋಟಿಯಿಂದ 13 ಸಾವಿರ ಕೋಟಿ ರೂ. ಆಸುಪಾಸಿನಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ.
ಸತತ 4ನೇ ಬಾರಿ ಅಧಿಕಾರಿಗಳಿಂದ ಬಜೆಟ್
ಬಿಬಿಎಂಪಿಯ ಚುನಾಯಿತ ಕೌನ್ಸಿಲರ್‌ಗಳ ಅವಧಿ ಅಂತ್ಯಗೊಂಡು ಮೂರೂವರೆ ವರ್ಷ ಕಳೆದಿದ್ದು, ಈವರೆಗೆ ಚುನಾವಣೆ ನಡೆಸಿಲ್ಲ. ಹಾಗಾಗಿ, ಸತತ ನಾಲ್ಕನೇ ವರ್ಷವೂ ಅಧಿಕಾರಿಗಳೇ ಆಯವ್ಯಯ ಮಂಡಿಸುತ್ತಿದ್ದಾರೆ.
Advertisement