ರೈತನಿಗೆ ನಮ್ಮ ಮೆಟ್ರೊದೊಳಗೆ ಬಿಡದ ಸಿಬ್ಬಂದಿ ವಜಾ. ಬಿಜೆಪಿ ಕಾರ್ಯಕರ್ತೆಯ ಭೀಕರ ಹತ್ಯೆ- ಈ ದಿನದ ಸುದ್ದಿ ಮುಖ್ಯಾಂಶಗಳು: 26-02-24

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕರ್ನಾಟಕದ 15 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಮೋದಿ ಶಂಕುಸ್ಥಾಪನೆ

ಕರ್ನಾಟಕದ 15 ರೈಲ್ವೇ ನಿಲ್ದಾಣ ಒಳಗೊಂಡಂತೆ ಅಮೃತ ಭಾರತ ಯೋಜನೆಯಡಿ ದೇಶದ 554 ರೈಲು ನಿಲ್ದಾಣಗಳ ಪುನಾರಾಭಿವೃದ್ಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಶಂಕುಸ್ಥಾಪನೆ ನೆರವೇರಿಸಿದರು. ವರ್ಚುವಲ್​ ಮೂಲಕ ಪ್ರಧಾನಿ ಮೋದಿಯವರು ರೈಲು ನಿಲ್ದಾಣಗಳ ಪುನಾರಾಭಿವೃದ್ಧಿಗೆ ಕಾರ್ಯಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಇಂದು ರೈಲ್ವೇಗೆ ಸಂಬಂಧಿಸಿದ 2000ಕ್ಕೂ ಹೆಚ್ಚು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಾಗಿದೆ. ಇಂದಿನ ಕಾರ್ಯಕ್ರಮ ನವಭಾರತದ ಹೊಸ ಸಂಸ್ಕೃತಿಯ ಸಂಕೇತವಾಗಿದೆ. ಭಾರತ ಇಂದು ಏನೇ ಮಾಡಿದರೂ ಅದು ಅಭೂತಪೂರ್ವ ವೇಗದಲ್ಲಿ ಮಾಡುತ್ತದೆ. ಸಣ್ಣಪುಟ್ಟ ಕನಸ್ಸುಗಳನ್ನು ನಿಲ್ಲಿಸಿ, ದೊಡ್ಡ ಕನಸ್ಸುಗಳನ್ನು ಕಾಣುತ್ತಿದ್ದೇವೆ. ಆ ಕನಸನ್ನು ಈಡೇರಿಸಲು ಹಗಲಿರುಳು ಶ್ರಮಿಸುತ್ತಿದ್ದೇವೆ. ಇದು ಅಭಿವೃದ್ಧಿ ಹೊಂದಿದ ಭಾರತದ ನಿರ್ಣಯವಾಗಿದೆ ಎಂದರು. ಅಮೃತ ಭಾರತ ನಿಲ್ದಾಣ ಯೋಜನೆಯಡಿ 372,13 ಕೋಟಿ ರೂ. ವೆಚ್ಚದಲ್ಲಿ ರಾಜ್ಯ 15 ರೈಲು ನಿಲ್ದಾಣಗಳಿಗೆ ಸ್ಮಾರ್ಟ್​ ಟಚ್​ ನೀಡಲಾಗುತ್ತಿದೆ.

ಭಾರತ ಒತ್ತಾಯಕ್ಕೆ ಮಣಿದ ರಷ್ಯಾ: ಸೇನೆಯಲ್ಲಿದ್ದ ಭಾರತೀಯರ ಬಿಡುಗಡೆ

ಭಾರತದ ಒತ್ತಾಯದ ನಂತರ ರಷ್ಯಾದ ಸೇನೆಯಲ್ಲಿ ಸಹಾಯಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ರಷ್ಯಾದ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ರಷ್ಯಾದ ಸೈನ್ಯದಿಂದ ಭಾರತೀಯ ಪ್ರಜೆಗಳನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಎಲ್ಲಾ ಸಂಬಂಧಿತ ವಿಷಯಗಳನ್ನು ಮುಂದುವರಿಸಲು ಭಾರತವು ಬದ್ಧವಾಗಿದೆ. ಇದನ್ನು 'ಹೆಚ್ಚಿನ ಆದ್ಯತೆಯ' ವಿಷಯವಾಗಿ ಪರಿಗಣಿಸಲಾಗಿದೆ ಎಂದರು. ಇನ್ನು ಕಲಬುರಗಿಯ ಯುವಕರು ಸೇರಿದಂತೆ ಹಲವು ಭಾರತೀಯರ ಯುವಕರನ್ನು ಬಲವಂತವಾಗಿ ರಷ್ಯಾ ಸೇನೆಯಲ್ಲಿ ಕೆಲಸ ಮಾಡಲು ಒತ್ತಾಯಿಸಲಾಗಿದೆ. ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಬೇಕಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.

ರೈತನಿಗೆ ನಮ್ಮ ಮೆಟ್ರೊದೊಳಗೆ ಬಿಡದ ಸಿಬ್ಬಂದಿ ವಜಾ

ಬೆಂಗಳೂರಿನ ರಾಜಾಜಿನಗರದ ಮೆಟ್ರೋ ಸ್ಟೇಷನ್‌ನಲ್ಲಿ ಬಟ್ಟೆ ಕೊಳೆಯಾಗಿದೆ ಎಂದು ವೃದ್ಧ ರೈತರೊಬ್ಬನನ್ನು ಒಳಗೆ ಬಿಡದ ಮೆಟ್ರೋ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ ಎಂದು ಎಂಡಿ ಮಹೇಶ್ವರನ್ ಹೇಳಿದ್ದಾರೆ. ರೈತನಿಗೆ ಮೆಟ್ರೋ ಪ್ರವೇಶಿಸಲು ಅವಕಾಶ ನೀಡದೆ ಅಪಮಾನ ಮಾಡಿರುವುದಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ನಮ್ಮ ಮೆಟ್ರೋ ಸಿಬ್ಬಂದಿ ಮಾನವೀಯತೆಯನ್ನೇ ಮರೆತು ದೇಶದ ಬೆನ್ನೆಲುಬಾಗಿರುವ ರೈತನಿಗೆ ಅಪಮಾನ ಮಾಡಿದ್ದಾರೆ ಎಂಬ ಆಕ್ರೋಶ ಈಗ ಭುಗಿಲೆದ್ದಿತ್ತು. ಮೆಟ್ರೋ ಸಿಬ್ಬಂದಿ ನಡೆಸಿರುವ ಈ ಅತಿರೇಕದ ವರ್ತನೆಯನ್ನು ಸಹಪ್ರಯಾಣಿಕರೊಬ್ಬರ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು.

ಮಂಗನ ಕಾಯಿಲೆ ವೃದ್ದೆ ಸಾವು

ಮಲೆನಾಡಿಗರನ್ನು ಕಂಗೆಡಿಸಿರುವ ಮಂಗನ ಕಾಯಿಲೆಗೆ ಉತ್ತರ ಕನ್ನಡ ಜಿಲ್ಲೆಯ ವೃದ್ಧೆಯೊಬ್ಬರು ಸಾವಿಗೀಡಾಗಿದ್ದು, ರಾಜ್ಯದಲ್ಲಿ ಈ ಕಾಯಿಲೆಯಿಂದ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಸಿದ್ದಾಪುರ ತಾಲ್ಲೂಕಿನ ಕೂರ್ಲಕೈ ಗ್ರಾಮದ 60 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.. ಸಂತ್ರಸ್ತೆಗೆ ಮೂರು ದಿನಗಳಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಳೆದ ರಾತ್ರಿ ಮೃತಪಟ್ಟಿದ್ದಾರೆ. ಸಿದ್ದಾಪುರ ತಾಲ್ಲೂಕಿನಲ್ಲಿಯೇ ಮಂಗನ ಕಾಯಿಲೆ ಪ್ರಕರಣಗಳ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. 103 ಸಕ್ರಿಯ ಮಂಗನ ಕಾಯಿಲೆ ಪ್ರಕರಣಗಳನ್ನು ಹೊಂದಿರುವ ರಾಜ್ಯದಲ್ಲಿ ಇದುವರೆಗೆ ನಾಲ್ವರು ಸಾವಿಗೀಡಾಗಿದ್ದಾರೆ.

ಬಿಜೆಪಿ ಕಾರ್ಯಕರ್ತೆಯ ಭೀಕರ ಹತ್ಯೆ

ಬೆಂಗಳೂರಿನ ಕೃಷ್ಣರಾಜಪುರದಲ್ಲಿ ವೃದ್ದೆಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿ, ಶವವನ್ನು ಐದು ತುಂಡುಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ತುಂಬಲಾಗಿದೆ. ಮೃತರನ್ನು 65 ವರ್ಷದ ಸುಶೀಲಮ್ಮ ಎಂದು ಗುರುತಿಸಲಾಗಿದೆ. ಸಂಜೆ 5 ಗಂಟೆ ಸುಮಾರಿಗೆ ಡ್ರಮ್‌ನಿಂದ ದುರ್ವಾಸನೆ ಬರಲಾರಂಭಿಸಿದ ಹಿನ್ನೆಲೆಯಲ್ಲಿ ಸಮೀಪದ ನಿವಾಸಿಗಳು ಅದನ್ನು ಪರಿಶೀಲಿಸಿದಾಗ ಮೃತದೇಹ ಪತ್ತೆಯಾಗಿತ್ತು. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಕೆಆರ್ ಪುರ ಠಾಣಾ ಪೊಲೀಸರು ಸದ್ಯ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬೊಲೆರೋ ವಾಹನ ಪಲ್ಟಿ: ಮೂವರ ಸಾವು

ದಾವಣಗೆರೆ ಹೊರವಲಯದ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ರಾತ್ರಿ ಟೈರ್ ಸ್ಫೋಟಗೊಂಡು ಬೋಲೆರೋ ವಾಹನ ಪಲ್ಟಿಯಾದ ಪರಿಣಾಮ ಮೂವರು ಸಾವನ್ನಪ್ಪಿದ್ದು 6 ಮಂದಿಗೆ ಗಾಯಗಳಾಗಿವೆ. ಮೃತರೆಲ್ಲರೂ ಆಂಧ್ರದ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ಸಿಂಗರಾಜನಹಳ್ಳಿ ನಿವಾಸಿಗಳು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಹುಬ್ಬಳ್ಳಿಗೆ ರವಾನಿಸಲಾಗಿದೆ. ಹಾವೇರಿಯ ಬ್ಯಾಡಿಗೆಯಿಂದ ಮೆಣಸಿನಕಾಯಿ ಖರೀದಿಗೆ ತೆರಳಿ ವಾಪಸ್ಸಾಗುವಾಗ ಈ ಅಪಘಾತ ಸಂಭವಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com