ಸೋಮಶೇಖರ್ ಅಡ್ಡಮತದಾನ, ಬಿಜೆಪಿಗೆ ಶಾಕ್. ಕಾಂಗ್ರೆಸ್ ನ 3 ಹಾಗೂ ಓರ್ವ ಬಿಜೆಪಿ ಅಭ್ಯರ್ಥಿಗೆ ಗೆಲುವು -ಈ ದಿನದ ಸುದ್ದಿ ಮುಖ್ಯಾಂಶಗಳು: 27-02-24

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರಾಜ್ಯಸಭೆ ಚುನಾವಣೆಯಲ್ಲಿ ಎಸ್ ಟಿ ಸೋಮಶೇಖರ್ ಅಡ್ಡಮತದಾನ, ಬಿಜೆಪಿ ಶಾಕ್

ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಮತದಾನದ ಮುಕ್ತಾಯಗೊಂಡಿದೆ. ಒಟ್ಟು 223 ಮತಗಳ ಪೈಕಿ 222 ಶಾಸಕರು ತಮ್ಮ ಮತದಾನ ಮಾಡಿದ್ದಾರೆ. ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಮತದಾನಕ್ಕೆ ಗೈರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶೇ.99.5ರಷ್ಟು ಮತದಾನವಾಗಿದೆ. ಕಾಂಗ್ರೆಸ್‌ ಪಕ್ಷದ 135 ಶಾಸಕರು, ಮೂವರು ಪಕ್ಷೇತರ ಶಾಸಕರು, ಬಿಜೆಪಿಯ 65 ಶಾಸಕರು, ಜೆಡಿಎಸ್‌ನ 19 ಶಾಸಕರು ಸಹ ಮತದಾನ ಮಾಡಿದ್ದಾರೆ. ಯಶವಂತಪುರ ಬಿಜೆಪಿ ಎಸ್​​ಟಿ ಸೋಮಶೇಖರ್ ಸ್ವಪಕ್ಷದ ಅಭ್ಯರ್ಥಿ ಬದಲಿಗೆ ಕಾಂಗ್ರೆಸ್​ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಇನ್ನು ಮತ್ತೋರ್ವ ಶಾಸಕ ಶಿವರಾಮ್ ಹೆಬ್ಬಾರ್​ ಮತದಾನಕ್ಕೆ ಗೈರಾಗುವ ಮೂಲಕ ಇಬ್ಬರು ಬಿಜೆಪಿ ಶಾಕ್ ಕೊಟ್ಟಿದ್ದಾರೆ. ಇನ್ನು ಈ ಇಬ್ಬರು ಶಾಸಕರ ವಿರುದ್ಧ ವಿರೋಧ ಪಕ್ಷದ ನಾಯಕ ಆರ್ ಅಶೋಕ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ 3 ಹಾಗೂ ಓರ್ವ ಬಿಜೆಪಿ ಅಭ್ಯರ್ಥಿಗೆ ಗೆಲುವು

ರಾಜ್ಯಸಭೆಯ ಸದ್ಯದ ಮತದಾನ ಪ್ರಕ್ರಿಯೆ ಗಮನಿಸಿದರೆ ಬಿಜೆಪಿ ಅಭ್ಯರ್ಥಿ ನಾರಾಯಣಸಾ ಭಾಂಡಗೆ, ಕಾಂಗ್ರೆಸ್​ನ ಅಜಯ್ ಮಕೇನ್, ನಾಸೀರ್ ಹುಸೇನ್ ಹಾಗೂ ಚಂದ್ರಶೇಖರ್​ ಗೆಲ್ಲುವು ಸಾಧಿಸಿದ್ದಾರೆ. ಇನ್ನು ಐದನೇ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎನ್​ಡಿಎ ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಸೋಲಾಗಿದೆ. ಕಾಂಗ್ರೆಸ್ ಶಾಸಕರಿಗೆ ಬೆದರಿಕೆ ಹಾಕಿದ್ದಕ್ಕಾಗಿ ಜೆಡಿಎಸ್ ಮುಖಂಡ ಡಿ ಕುಪೇಂದ್ರ ರೆಡ್ಡಿ ಮತ್ತು ಅವರ ಸಹಾಯಕರ ವಿರುದ್ಧ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ನಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದು ಇದಕ್ಕೆ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ ನಮ್ಮ ಶಾಸಕರಿಗೆ ಆಮಿಷ ಮತ್ತು ಬೆದರಿಕೆ ಹಾಕಿದ್ದರಿಂದ ಎಫ್ಐಆರ್ ದಾಖಲಿಸಲಾಗಿದೆ ಎಂದರು.

ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೂವರು ಮಹಿಳೆಯರ ಸಾವು ಪ್ರಕರಣ: ಮೂವರು ಸಿಬ್ಬಂದಿ ವಜಾ

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೂವರು ಮಹಿಳೆಯರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯ ನಂತರ ಮೂವರು ಮಹಿಳೆಯರು ಮೃತಪಟ್ಟ ಪ್ರಕರಣದಲ್ಲಿ ನ್ಯಾಷನ್ ಹೆಲ್ತ್ ಮಿಷನ್ ಯೋಜನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಸ್ತ್ರೀರೋಗ ತಜ್ಞೆ ಡಾ.ಪೂಜ, ಶುಶ್ರೂಷಣಾಧಿಕಾರಿ ಜಿ.ಪದ್ಮಾವತಿ ಹಾಗೂ ಶಸ್ತ್ರ ಚಿಕಿತ್ಸಾ ವಿಭಾಗದ ತಜ್ಞ ಸಿಬ್ಬಂದಿ ಬಿ.ಆರ್.ಕಿರಣ್ ಅವರನ್ನು ವಜಾ ಮಾಡಲಾಗಿದೆ. ಕರ್ತವ್ಯ ಲೋಪ, ನಿರ್ಲಕ್ಷ್ಯ, ಬೇಜವಾಬ್ದಾರಿತನ ತೋರಿದ ಆರೋಪದ ಮೇಲೆ ವಜಾಗೊಳಿಸಲಾಗಿದೆ. ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ತನಿಖೆ ನಡೆಸಿ ವರದಿ ಸಲ್ಲಿಸಿದ್ದರು.

ಕರ್ನಾಟಕದ ಪರಿಹಾರ ಹಣ ಬೇಡ: ಕೇರಳದ ಅಜೀಶ್ ಕುಟುಂಬ

ಕರ್ನಾಟಕದ ಬೇಲೂರಿನ ಮಖ್ನಾ ಕಾಡಾನೆ ತುಳಿದು ಸಾವನ್ನಪ್ಪಿದ ಕೇರಳದ ಪದಮಲ ಮೂಲದ ಅಜೀಶ್ ಅವರ ಕುಟುಂಬವು ಕರ್ನಾಟಕ ಸರ್ಕಾರ ಘೋಷಿಸಿದ 15 ಲಕ್ಷ ರೂಪಾಯಿ ಪರಿಹಾರವನ್ನು ನಿರಾಕರಿಸಿದೆ. ಕರ್ನಾಟಕ ವಿಧಾನಸಭೆಯಲ್ಲಿ ಪರಿಹಾರದ ಕುರಿತು ಬಿಜೆಪಿ ಗದ್ದಲ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬ ಈ ನಿರ್ಧಾರ ತೆಗೆದುಕೊಂಡಿದೆ. ಅಲ್ಲದೆ ಅಜೀಶ್ ಕುಟುಂಬವು ಬಿಜೆಪಿಯ ನಡವಳಿಕೆಯನ್ನು ಖಂಡಿಸಿದ್ದು ಇದು ಅಮಾನವೀಯ ಎಂದು ಬಣ್ಣಿಸಿದೆ. ಫೆಬ್ರವರಿ 10ರಂದು ಕಾಡಾನೆ ಅಜೀಶ್‌ರನ್ನು ತುಳಿದು ಕೊಂದಿತ್ತು. ಆನೆಗೆ ರಾಜ್ಯ ಅರಣ್ಯ ಇಲಾಖೆ ರೇಡಿಯೋ ಕಾಲರ್ ಅಳವಡಿಸಿದ್ದರಿಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಅಜೀಶ್ ಕುಟುಂಬಕ್ಕೆ ಭಾರಿ ಪರಿಹಾರ ಘೋಷಿಸಿತ್ತು. ರಾಜ್ಯದ ತೆರಿಗೆ ಹಣ ವಯನಾಡು ಸಂಸದ ರಾಹುಲ್ ಗಾಂಧಿ ಕ್ಷೇತ್ರಕ್ಕೆ ಎಂದು ಬಿಜೆಪಿ ನಾಯಕರು ಲೇವಡಿ ಮಾಡಿದ್ದರು. ಇದರಿಂದಾಗಿ ಈ ವಿವಾದದ ಹಣವನ್ನು ಕುಟುಂಬ ನಿರಾಕರಿಸಿದೆ.

ವಸತಿ ಶಾಲೆಯಲ್ಲಿ ಅಗ್ನಿ ಅವಘಡ: ಮೂವರು ವಿದ್ಯಾರ್ಥಿಗಳಿಗೆ ಗಾಯ

ವಿಜಯಪುರದ ಮುದ್ದೇಬಿಹಾಳದ ಘಾಳಪೂಜಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೊಠಡಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಮೂವರು ವಿದ್ಯಾರ್ಥಿಗಳಿಗೆ ಗಾಯಗಳಾಗಿದೆ. ಘಟನೆಯಲ್ಲಿ 6ನೇ ತರಗತಿಯ ಓರ್ವ ವಿದ್ಯಾರ್ಥಿಗೆ ಕೈಕಾಲು ಸುಟ್ಟು ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ವಿಜಯಪುರದ ಬಿಎಲ್ಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತಿಬ್ಬರಿಗೆ ಸಣ್ಣಪುಟ್ಟ ಸುಟ್ಟು ಗಾಯಗಳಾಗಿದ್ದು ಪ್ರಾಥಮಿಕ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾನೆ. ಕೊಠಡಿಯಲ್ಲಿ 18 ವಿದ್ಯಾರ್ಥಿಗಳು ಮಲಗಿದ್ದಾಗ ಏಕಾಏಕಿ ಬೆಂಕಿ ವ್ಯಾಪಿಸಿ ಈ ಅವಘಡ ಸಂಭವಿಸಿದೆ. ವಾರ್ಡನ್ ಮತ್ತು ಇತರ ವಿದ್ಯಾರ್ಥಿಗಳು ಧಾವಿಸಿ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com