ರಾಜ್ಯಸಭೆ ಚುನಾವಣೆ: ವಿಧಾನಸೌಧದಲ್ಲಿ ಮತದಾನ ಪ್ರಕ್ರಿಯೆ ಆರಂಭ, ಗೆಲುವಿನ ವಿಶ್ವಾಸದಲ್ಲಿ ಬಿಜೆಪಿ

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಮತದಾನ ಆರಂಭವಾಗಿದ್ದು, ಬಿಜೆಪಿ ಶಾಸಕ ಸುರೇಶ್​ ಕುಮಾರ್​​ ಅವರು ಮೊದಲ ಮತದಾನ ಮಾಡಿದರು.
ವಿಧಾನಸೌಧ
ವಿಧಾನಸೌಧ

ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಮತದಾನ ಆರಂಭವಾಗಿದ್ದು, ಬಿಜೆಪಿ ಶಾಸಕ ಸುರೇಶ್​ ಕುಮಾರ್​​ ಅವರು ಮೊದಲ ಮತದಾನ ಮಾಡಿದರು.

ವಿಧಾನಸೌಧದಲ್ಲಿ ಇಂದು ಬೆಳಗ್ಗೆ 9 ರಿಂದ ಆರಂಭವಾಗಿರುವ ಮತದಾನ ಸಂಜೆ 4 ಗಂಟೆ ವರೆಗೆ ನಡೆಯಲಿದೆ. ರಾಜ್ಯಸಭೆ ಚುನಾವಣೆಗಾಗಿನ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ನಾಲ್ಕು ಸ್ಥಾನಗಳಿಗೆ ಐವರು ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಹೀಗಾಗಿ ರಾಜ್ಯಸಭೆ ರಣಕಣ ರಂಗೇರಿದ್ದು, ನಂಬರ್ ಗೇಮ್ ಕಸರತ್ತು ಶುರುವಾಗಿದೆ.

ಕಾಂಗ್ರೆಸ್ ರಾಜ್ಯದಿಂದ ಅಜಯ್ ಮಕೇನ್, ಸಯ್ಯದ್ ನಸೀರ್ ಹುಸೇನ್ ಮತ್ತು ಜಿ.ಸಿ.ಚಂದ್ರಶೇಖರ್ ರನ್ನು ಕಣಕ್ಕಿಳಿಸಿದೆ. ಇತ್ತ ಬಿಜೆಪಿ ನಾರಾಯಣಸಾ ಬಾಂಡಗೆಯನ್ನು ಕಣಕ್ಕಿಳಿಸಿದೆ. ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ. ಐದನೇ ಅಭ್ಯರ್ಥಿ ಕಣಕ್ಕಿಳಿಸಿರುವುದರಿಂದ ರಾಜ್ಯಸಭೆ ಚುನಾವಣಾ ಅಖಾಡ ಕಳೆಗಟ್ಟುವಂತೆ ಮಾಡಿದೆ.

ವಿಧಾನಸೌಧ
ರಾಜ್ಯಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ: ಅಡ್ಡ ಮತದಾನದ ಭೀತಿ, ಶಾಸಕರಿಗೆ ಸಿಎಂ-ಡಿಸಿಎಂ ಕಿವಿಮಾತು

ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಬಿಜೆಪಿ

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಎನ್​ಡಿಎ ಅಭ್ಯರ್ಥಿ ಗೆಲ್ಲಿಸುವ ಸಂಬಂಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎಲ್ಲ ಶಾಸಕರೊಂದಿಗೆ ಮಾತನಾಡಿದ್ದಾರೆ. ನಮಗೆ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

ಬಿಜೆಪಿ ಶಾಸಕ, ಚುನಾವಣಾ ಏಜೆಂಟ್ ಟಿ.ಸುನೀಲ್ ಕುಮಾರ್ ಮಾತನಾಡಿ, ರಾಜ್ಯಸಭಾ ಚುನಾವಣೆಯಲ್ಲಿ ಅಧಿಕೃತ ಅಭ್ಯರ್ಥಿ ನಾರಾಯಣ ಭಾಂಡಗೆ ಅವರಿಗೆ ನಮ್ಮ ಶಾಸಕರು ಮತ ಚಲಾಯಿಸುತ್ತಾರೆ ಎಂದು ತಿಳಿಸಿದರು.

ಹೆಚ್ಚುವರಿ ಮತಗಳನ್ನು ಎನ್​ಡಿಎ ಅಭ್ಯರ್ಥಿಗೆ ವರ್ಗಾಯಿಸಲಾಗುತ್ತದೆ. ಬಿಜೆಪಿ ಎಲ್ಲ ಶಾಸಕರು ಮಧ್ಯಾಹ್ನ 12 ಗಂಟೆ ಒಳಗೆ ಪೂರ್ಣವಾಗಿ ಮತದಾನದಲ್ಲಿ ಪಾಲ್ಗೊಳ್ಳುತ್ತಾರೆ. ನಮಗೆ 45 ಮತಗಳು ಗೆಲ್ಲಲು ಬೇಕಾಗುತ್ತದೆ. ಬಿಜೆಪಿಯಿಂದ ಯಾವುದೇ ಅಡ್ಡ ಮತದಾನ ಆಗುವುದಿಲ್ಲ ಎಂದರು.

ಎನ್​ಡಿಎ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಮಾತನಾಡಿ, ದುಡ್ಡು ಕೊಟ್ಟು ಕೊಂಡುಕೊಳ್ಳುವ ಮತಗಳನ್ನು ಕೇಳಿಲ್ಲ. ವಿಶ್ವಾಸದ ಮತಗಳನ್ನು ಕೇಳಿದ್ದೇನೆ. ಆ ಪಕ್ಷ ಈ ಪಕ್ಷ ಎಂದು ಕೇಳಿಲ್ಲ. ಎಲ್ಲ ಪಕ್ಷದವರನ್ನು ಮತ ಕೇಳಿದ್ದೇನೆ. ವಿಶ್ವಾಸದ ಮತಗಳಲ್ಲಿ ನನಗೆ ನಂಬಿಕೆ ಇದೆ. ಕಾಂಗ್ರೆಸ್ನವರು ಹೊಸ ಸಿಸ್ಟಮ್ ಅನ್ನು ತಂದಿದ್ದಾರೆ. ಅಡ್ಡ ಮತದಾನವಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com