ಪಾಕಿಸ್ತಾನ ಜಿಂದಾಬಾದ್ ಘೋಷಣೆ ಪ್ರಕರಣ: ಸಭಾಪತಿಗಳ ಮುಂದೆ ಕೈ ಕೈ ಮಿಲಾಯಿಸಲು ಮುಂದಾದ ಸದಸ್ಯರು
ಬೆಂಗಳೂರು: ನೂತನ ರಾಜ್ಯಸಭಾ ಸದಸ್ಯ ಡಾ ಸೈಯದ್ ನಾಸಿರ್ ಹುಸೇನ್ ಅಭಿಮಾನಿಗಳು ವಿಧಾನಸೌಧ ಆವರಣದಲ್ಲಿ 'ಪಾಕಿಸ್ತಾನ ಜಿಂದಾಬಾದ್' ಘೋಷಣೆ ಕೂಗಿದ್ದಾರೆ ಎಂಬ ಆರೋಪ ಇಂದು ಬುಧವಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ತೀವ್ರ ಗದ್ದಲ-ಕೋಲಾಹಲಕ್ಕೆ ಕಾರಣವಾಯಿತು.
ಇಂದು ವಿಧಾನಪರಿಷತ್ತಿನಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ವಿಷಯ ಪ್ರಸ್ತಾಪಿಸಿದರು. ಪಾಕಿಸ್ತಾನ ಪರ ಘೋಷಣೆ ಹಾಕಿರುವ ವಿಚಾರವನ್ನು ಪರಿಷತ್ ಸದಸ್ಯ ಎನ್ ರವಿಕುಮಾರ್ ಪ್ರಸ್ತಾಪಿಸಿ ಇದು “ದೇಶದ್ರೋಹಿ ಸರ್ಕಾರ” ಎಂದರು.
ಪದ ಬಳಕೆಯಿಂದ ಕೆರಳಿದ ಕಾಂಗ್ರೆಸ್ ಸದಸ್ಯ ಅಬ್ದುಲ್ ಜಬ್ಬಾರ್ “ಅವನ ಬಾಯಿ ಬಂದ್ ಮಾಡಿ” ಎಂದು ರವಿಕುಮಾರ್ ಅವರ ಮೇಲೆ ಏಕವಚನ ಪ್ರಯೋಗ ಮಾಡಿದರು. ಇದರಿಂದ ವಿಧಾನಪರಿಷತ್‌ನಲ್ಲಿ ಗದ್ದಲ ಜೋರಾಯಿತು. ಅಬ್ದುಲ್ ಜಬ್ಬಾರ್ ಮಾತಿಗೆ ರೊಚ್ಚಿಗೆದ್ದ ಬಿಜೆಪಿ ಸದಸ್ಯರು ಏಕವಚನದಲ್ಲಿ ಮಾತಾಡಿದರೆ ಸರಿ ಇರಲ್ಲವೆಂದರು. ಬಳಿಕ ರವಿಕುಮಾರ್ ಎದ್ದು ಅಬ್ದುಲ್ ಜಬ್ಬರ್ ಬಳಿ ಹೋದರು. ರವಿಕುಮಾರ್ ಜೊತೆ ತುಳಸಿ ಮುನಿರಾಜುಗೌಡ ಮುನ್ನುಗ್ಗಿ ಹೋದರು. ಎರಡೂ ಕಡೆಯ ಸದಸ್ಯರು ಸಭಾಪತಿಗಳ ಮುಂದೆಯೇ ಕೈಕೈ ಮಿಲಾಯಿಸಲು ಮುಂದಾದರು.
ಪರಿಸ್ಥಿತಿ ನಿಯಂತ್ರಿಸಿದ ಮಾರ್ಷಲ್ ಗಳು: ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಲು ಮಾರ್ಷಲ್‌ಗಳು ಹರಸಾಹಸಪಟ್ಟರು. ಮಧ್ಯ ಪ್ರವೇಶಿಸಿದ ಸಚಿವ ಹೆಚ್.ಕೆ.ಪಾಟೀಲ್ ಎರಡೂ ಕಡೆಯವರನ್ನು ಸಮಾಧಾನಪಡಿಸಿ ಕ್ಷಮೆ ಕೇಳುವಂತೆ ಸಲಹೆ ನೀಡರು. ಇದಕ್ಕೆ ಎನ್. ರವಿಕುಮಾರ್ ದೇಶದ ಪರವಾಗಿ ಮಾತನಾಡಿದ್ದೇನೆ, ಅದು ಕ್ಷಮೆ ಕೇಳುವ ವಿಷಯವಾ ಎಂದರು. ಇತ್ತ ಅಬ್ದುಲ್ ಜಬ್ಬಾರ್ ನಿಮ್ಮ ಮೂಲಕ ನಾನು ಆಡಿದ ಮಾತು ವಾಪಸ್ ಪಡೆಯುತ್ತೇನೆ ಎಂದು ಹೇಳಿದಾಗ ಪರಿಸ್ಥಿತಿ ತಿಳಿಯಾಯಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ