ಪಾಕಿಸ್ತಾನ ಪರ ಘೋಷಣೆ ಪ್ರಕರಣ: ವಿಧಾನಸಭೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ವಾಗ್ಯುದ್ಧ, ಸರ್ಕಾರದ ವಿರುದ್ಧ ಆರ್.ಅಶೋಕ್ ಕಿಡಿ

ರಾಜ್ಯಸಭೆ ಚುನಾವಣೆ ಗೆಲುವಿನ ಬಳಿಕ ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ (ಕೂಗಲಾಗಿದೆ ಎಂಬ ಆರೋಪ ಬುಧವಾರ ವಿಧಾನಸಭೆ ಕಲಾಪದಲ್ಲಿ ಕೋಲಾಹಲ ಸೃಷ್ಟಿಸಿದೆ.
ಆರ್.ಅಶೋಕ್
ಆರ್.ಅಶೋಕ್

ಬೆಂಗಳೂರು: ರಾಜ್ಯಸಭೆ ಚುನಾವಣೆ ಗೆಲುವಿನ ಬಳಿಕ ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ (ಕೂಗಲಾಗಿದೆ ಎಂಬ ಆರೋಪ ಬುಧವಾರ ವಿಧಾನಸಭೆ ಕಲಾಪದಲ್ಲಿ ಕೋಲಾಹಲ ಸೃಷ್ಟಿಸಿದೆ.

ಕಲಾಪ ಆರಂಭವಾಗುವುದಕ್ಕೂ ಮುನ್ನ ಪ್ರತಿಪಕ್ಷ ಬಿಜೆಪಿ ನಾಯಕರು ರಾಷ್ಟ್ರಧ್ವಜ ಹಿಡಿದುಕೊಂಡು ವಿಧಾನಸಭೆಗೆ ಪ್ರವೇಶಿಸಿದರು.

ಇದಕ್ಕೆ ಸ್ಪೀಕರ್ ಯುಟಿ ಖಾದರ್ ಆಕ್ಷೇಪ ವ್ಯಕ್ತಪಡಿಸಿ, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು. ಇದಕ್ಕೆ ಬಿಜೆಪಿ ಶಾಸಕರಿಂದ ಆಕ್ರೋಶ ವ್ಯಕ್ತವಾಯಿತು.

ನಂತರ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷ ನಾಯಕ ಆರ್ ಅಶೋಕ್, ಪಾಕ್ ಪರ ಘೋಷಣೆ ವಿಚಾರವನ್ನು ಪ್ರಸ್ತಾಪಿಸಿದರು.

ರಾಜ್ಯದ ಏಳು ಕೋಟಿ ಜನರ ಆತ್ಮ ವಿಧಾನಸೌಧದಲ್ಲಿದೆ. ಇಂತಹ ಸ್ಥಳದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಲಾಗಿದೆ. ಅಂಥವರಿಗೆಲ್ಲ ಇಲ್ಲಿಗೆ ಬರಲು ಅವಕಾಶ ಮಾಡಿಕೊಟ್ಟವರು ಯಾರು? ಇದರಿಂದ ರಾಜ್ಯದ ಜನತೆ ಆತಂಕ್ಕೊಳಗಾಗುವಂತಾಗಿದೆ. ಅವರಿಗೆ ರೆಡ್ ಕಾರ್ಪೆಟ್ ಹಾಸಿ ಇಲ್ಲಿಗೆ ಕರೆಸಿಕೊಂಡಿದ್ದಲ್ಲದೆ, ಅವರನ್ನು ಕಳುಹಿಸಿಕೊಟ್ಟವರು ಯಾರು? ಅವರಿಗೆ ಬಿರಿಯಾನಿ ತಿನ್ನಿಸಿ ರಕ್ಷಿಸುತ್ತಿರುವವರು ಯಾರು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ವೇಳೆ ಮಾತನಾಡಿದ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್, ಪಾರ್ಲಿಮೆಂಟ್‍ನಲ್ಲಿ ನುಗ್ಗಿದ್ದರಲ್ಲ ಎಂದರು. ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಬಳಿಕ ಮಾತು ಮುಂದುವರೆಸಿದ ಅಶೋಕ್ ಅವರು, ಸಂಸತ್‍ನಲ್ಲಿ ನುಗ್ಗಿದವರನ್ನು ಹಿಡಿದು ಚೆನ್ನಾಗಿ ರುಬ್ಬಿದರು. ನೀವೇನಾದರೂ ಅವರಿಗೆ ಹೊಡೆದಿರಾ" ಎಂದು ತಿರುಗೇಟು ನೀಡಿದರು.

ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಲು ಮುಂದಾಗಿ ಚರ್ಚೆಯಾಗಲಿ ಎಂದರು.

ಆರ್.ಅಶೋಕ್
'ಪಾಕಿಸ್ತಾನ ಜಿಂದಾಬಾದ್ ಘೋಷಣೆ': ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್ ಹೇಳಿದ್ದೇನು?

ಮತ್ತೆ ಮಾತು ಮುಂದುವರೆಸಿದ ಅಶೋಕ್, ಆ ರೀತಿ ಘೋಷಣೆ ಕೂಗಿದವರನ್ನು ವಿಧಾನಸೌಧಕ್ಕೆ ಯಾರು ಕರೆತಂದರು? 500 ಪೊಲೀಸರು, ಐಪಿಎಸ್, ಐಎಎಸ್ ಅಧಿಕಾರಿಗಳು ಇರುವ ಈ ಸ್ಥಳದಲ್ಲಿ ಆ ರೀತಿ ಘೋಷಣೆ ಕೂಗಲು ಎಷ್ಟು ಧೈರ್ಯವಿರಬೇಕು? ದೇಶದ ಗಡಿಯಲ್ಲಿ ಸೈನಿಕರು ಜೀವದ ಹಂಗು ತೊರೆದು ಗಡಿ ಹಾಗೂ ದೇಶ ರಕ್ಷಣೆ ಮಾಡುತ್ತಿದ್ದಾರೆ. ಅವರಿಗೆ ನಾವು ಯಾವ ಉತ್ತರ ಕೊಡಬೇಕು? ಅಲ್ಲಿ ಈ ರೀತಿ ಘೋಷಣೆ ಕೂಗಿದರೆ ಅವರನ್ನು ಗುಂಡಿಟ್ಟು ಕೊಲ್ಲುತ್ತಾರೆ" ಎಂದು ವಾಗ್ದಾಳಿ ನಡೆಸಿದರು.

ಘೋಷಣೆ ಕೂಗಿದವರು ವಿಧಾನಸೌಧದಿಂದ ಹೊರಹೋಗಲು ವಾಹನ ಮಾಡಿಕೊಟ್ಟವರು ಯಾರು? ಇಷ್ಟೆಲ್ಲಾ ನಡೆದಿದ್ದರೂ ಸರ್ಕಾರ ಏನೂ ಆಗಿಲ್ಲ ಎಂಬಂತಿದೆ. ಒಂದು ಸಣ್ಣ ಕೇಸೂ ಕೂಡ ದಾಖಲಿಸಿಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್‍ನ ಮತ್ತೊಬ್ಬ ಅಭ್ಯರ್ಥಿ ಜಿ‌.ಸಿ‌. ಚಂದ್ರಶೇಖರ್ ಗೆದ್ದಾಗ ಈ ರೀತಿ ಘೋಷಣೆ ಕೂಗಿಲ್ಲ. ಬಿಜೆಪಿ ಅಭ್ಯರ್ಥಿ ಗೆದ್ದಾಗ ನಮ್ಮ ಪಕ್ಷದವರು ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗಿದ್ದೇವೆ. ಆದರೆ ಸಯ್ಯದ್ ನಾಸಿರ್ ಹುಸೇನ್ ಗೆದ್ದ ಸಂದರ್ಭದಲ್ಲಿ ಯಾಕೆ ಈ ರೀತಿ ಘೋಷಣೆ? ಎಲ್ಲಿದೆ ಸುರಕ್ಷತೆ, ಯಾವ ಸೇಫ್ಟಿ ಇದೆ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಹಲವು ಶಾಸಕರು ಆಕ್ಷೇಪಿಸಲು ಮುಂದಾದಾಗ, ಸ್ಪೀಕರ್ ಯು.ಟಿ. ಖಾದರ್ ಅವರು ಮಧ್ಯ ಪ್ರವೇಶಿಸಿ ಗಂಭೀರವಾದ ವಿಚಾರ ಚರ್ಚೆ ಮಾಡುವಾಗ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು. ರಾಜಕೀಯವನ್ನು ಬಿಡಬೇಕು. ರಾಷ್ಟ್ರ, ರಾಜ್ಯದ ಹಿತದ ಬಗ್ಗೆ ಮಾತನಾಡುವಾಗ ಗಂಭೀರವಾಗಿ ಆಲಿಸಬೇಕು, ಗಂಭೀರವಾದ ವಿಚಾರ ಪ್ರಸ್ತಾಪವಾಗುತ್ತಿದೆ, ಸರ್ಕಾರ ಉತ್ತರ ಕೊಡಲಿದೆ" ಎಂದು ಸಲಹೆ ನೀಡಿದರು.

ಆರ್.ಅಶೋಕ್
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ: ಸ್ವಯಂಪ್ರೇರಿತ ಕೇಸ್‌ ದಾಖಲಿಸಿದ ಪೊಲೀಸರು

ಬಳಿಕ ಮತ್ತೆ ಮತ್ತೆ ತಮ್ಮ ವಾಗ್ದಾಳಿ ಮುಂದುವರೆಸಿದ ಅಶೋಕ್, ಕಳೆದ ಬಾರಿ ಬಜೆಟ್ ಮಂಡಿಸುವಾಗ ಕಿವಿಯ ಮೇಲೆ ಹೂವು ಇಟ್ಟುಕೊಂಡು ಬಂದಿದ್ದರು. ಆದರೆ ನಿನ್ನೆ ಘೋಷಣೆ ಕೂಗಿದ ವಿಚಾರ ನೋಡಿಲ್ಲ, ಕೇಳಿಲ್ಲ ಎನ್ನುತ್ತಾರೆ. ಮಾಧ್ಯಮಗಳಲ್ಲಿ ಅದನ್ನು ತೋರಿಸಿದ್ದಾರೆ. ಪಾಕಿಸ್ತಾನದ ಪರ ಘೋಷಣೆ ಕೂಗಿದವರು ಪಾಕಿಸ್ತಾನದವರೇ ಇರಬೇಕು. ಬೇರೆಯವರು ಆ ರೀತಿ ಘೋಷಣೆ ಕೂಗುವುದಿಲ್ಲ. ಏಕೆಂದರೆ ಭಾರತ ಮಾತೆ ಅನ್ನ ತಿಂದವರು, ನೀರು ಕುಡಿದವರು ಆ ರೀತಿ ಕೂಗುವುದಿಲ್ಲ, ಇನ್ನೆಷ್ಟು ಜನ ಬಂದಿದ್ದಾರೋ ಗೊತ್ತಿಲ್ಲ, ಇದು ನಾಡಿನ ಜನತೆಯಲ್ಲಿ ಆತಂಕಕ್ಕೆ ಕಾರಣವಾಗಿದೆ".

ಒಂದು ವೇಳೆ ಮಾಧ್ಯಮದ ವರದಿ ಸುಳ್ಳಾಗಿದ್ದರೆ ಅವರನ್ನು ಜೈಲಿಗೆ ಹಾಕಿ, ನನ್ನ ಮೇಲೂ ಕೇಸು ಹಾಕಿ. ಈ ಘಟನೆ ಬಗ್ಗೆ ಸಣ್ಣ ಕ್ರಮ ಕೈಗೊಂಡಿಲ್ಲ. ಇದರ ಬಗ್ಗೆ ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಬೇಕಿತ್ತು. ಶಾಸಕರ ಮೇಲೆ ಸ್ವಯಂಪ್ರೇರಿತ ಕೇಸು ಹಾಕುತ್ತಾರೆ, ಶಾಸಕರು ಘಟನಾ ಸ್ಥಳದಲ್ಲಿ ಇಲ್ಲವೆಂದರೂ ಕೇಸು ಹಾಕುತ್ತಾರೆ. ಪಿಎಫ್‍ಐ ಮೇಲಿನ ಕೇಸುಗಳನ್ನು ವಜಾ ಮಾಡಿದ್ದಾರೆ. ಹೀಗಾಗಿ ಕೋಲಾರ, ಶಿವಮೊಗ್ಗದಲ್ಲಿ ಮಚ್ಚು, ಲಾಂಗುಗಳ ಫ್ಲೆಕ್ಸ್ ಹಾಕಲಾಗಿದೆ. ಈ ಘಟನೆ ಬಗ್ಗೆ ಮುಖ್ಯಮಂತ್ರಿ ಚರ್ಚೆ ಮಾಡಬೇಕಿತ್ತು. ಇಡೀ ದೇಶಕ್ಕೆ ಅವಮಾನವಾಗಿದೆ. ಕನ್ನಡಿಗರು ತಲೆ ತಗ್ಗಿಸುವಂತಾಗಿದೆ. ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ" ಎಂದು ಆರೋಪಿಸಿದರು.

ಘೋಷಣೆ ಕೂಗಿದವರನ್ನು ಯಾರು ಕರೆದುಕೊಂಡು ಬಂದರು, ಬಿರಿಯಾನಿ ಕೊಟ್ಟು ಯಾರು ಕಳುಹಿಸಿಕೊಟ್ಟರು, ಇವರಿಗೆ ಹೇಗೆ ರಾಜ್ಯಸಭಾ ಟಿಕೆಟ್ ಕೊಟ್ಟರು, ಅವರೇ ತಾನೇ ಕರೆದುಕೊಂಡು ಬಂದದ್ದು ಎಂದಾಗ ಆಡಳಿತ ಪಕ್ಷದ ಶಾಸಕರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಆರ್.ಅಶೋಕ್
ತನಿಖೆಯಲ್ಲಿ ಪಾಕ್ ಪರ ಘೋಷಣೆ ಸಾಬೀತಾದರೆ ಕ್ರಮ, ದೇಶ ದ್ರೋಹಿಗಳ ಮಟ್ಟ ಹಾಕಬೇಕಿದೆ: ಸಿಎಂ ಸಿದ್ದರಾಮಯ್ಯ

ಈ ಮಧ್ಯೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಇದು ನೀವೇ ಉದ್ದೇಶಪೂರಕವಾಗಿಯೇ ಮಾಡಿರಬಹುದು. ಇದರ ಬಗ್ಗೆ ತನಿಖೆಯಾಗಬೇಕೆಂದರು. ಆಗ ಅಶೋಕ್ ಮಾತನಾಡಿ, ಮಾಧ್ಯಮದವರನ್ನು ಚುನಾಯಿತ ಅಭ್ಯರ್ಥಿ ಗೆಟ್ ಔಟ್ ಎನ್ನುತ್ತಾರೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮವೂ ಒಂದು ಅಂಗ ಎನ್ನುತ್ತಿದ್ದಂತೆ ಆಡಳಿತ ಪಕ್ಷದಿಂದ ನಾಸಿರ್ ಹುಸೇನ್ ಬಗ್ಗೆ ಏಕೆ ಮಾತನಾಡುತ್ತೀರಿ ಎಂದು ತೀವ್ರ ಆಕ್ಷೇಪ ವ್ಯಕ್ತವಾಯಿತು.

ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷರು ರಾಜಕೀಯ ವಿಚಾರ ಪ್ರಸ್ತಾಪ ಬೇಡ. ವ್ಯಾಪ್ತಿ ಮೀರಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದ ನಡೆದು ಸದನದಲ್ಲಿ ಗೊಂದಲದ ವಾತಾವರಣ ಉಂಟಾದಾಗ ಸ್ಪೀಕರ್ ಸದನದ ಕಾರ್ಯಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com