ರಾಜ್ಯದಲ್ಲಿ 2 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ: ಸಚಿವ ಈಶ್ವರ್ ಖಂಡ್ರೆ

ರಾಜ್ಯದಲ್ಲಿ ಎರಡು ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಅರಣ್ಯ, ಪರಿಸರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರು ಮಂಗಳವಾರ ಹೇಳಿದರು.
ಸಚಿವ ಈಶ್ವರ್ ಖಂಡ್ರೆ
ಸಚಿವ ಈಶ್ವರ್ ಖಂಡ್ರೆ
Updated on

ಬೆಂಗಳೂರು: ರಾಜ್ಯದಲ್ಲಿ ಎರಡು ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಅರಣ್ಯ, ಪರಿಸರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರು ಮಂಗಳವಾರ ಹೇಳಿದರು.

ಮಂಗಳವಾರ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸಚಿವರು ಸುದೀರ್ಘ ಸಭೆ ನಡೆಸಿದರು.

ಸಭೆಯಲ್ಲಿ ಆದ್ಯತೆಯ ಆಧಾರದ ಮೇಲೆ ಅತಿಕ್ರಮಣಗಳನ್ನು ಶೀಘ್ರಗತಿಯಲ್ಲಿ ತೆರವುಗೊಳಿಸುವಂತೆ ಸೂಚನೆ ನೀಡಿದರು.

ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿವಿಧ ಕಾಯಿದೆ ರಚಿಸಿದ್ದಾಗ್ಯೂ, ಸುಮಾರು 2 ಲಕ್ಷ ಎಕರೆ ಅರಣ್ಯಭೂಮಿ ಒತ್ತುವರಿ ಆಗಿರುವುದು ಆಘಾತಕಾರಿ ವಿಷಯ ಎಂದು ಹೇಳಿದರು.

ಯಾರೇ ಅರಣ್ಯ ಭೂಮಿ ಒತ್ತುವರಿ ಮಾಡಿದರೂ ಅದು ಅಪರಾಧ. ಬೆಂಗಳೂರು ನಗರದ ಸುತ್ತಮುತ್ತ ಮತ್ತು ಪಟ್ಟಣ, ನಗರ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಬೆಲೆಬಾಳುವ ಅರಣ್ಯ ಭೂಮಿಯ ಒತ್ತುವರಿ ತೆರವಿಗೆ ಮೊದಲ ಆದ್ಯತೆ ನೀಡುವುದು ಅಗತ್ಯವಿದೆ ಎಂದು ತಿಳಿಸಿದರು.

ಇನ್ನೊಂದೆಡೆ, ಅರಣ್ಯದಲ್ಲಿ ವನ್ಯ ಮೃಗಗಳ ಸಂಖ್ಯೆ ಹೆಚ್ಚಳವಾಗುತ್ತಿದೆ, ಆದರೆ ಅದಕ್ಕೆ ಅನುಗುಣವಾಗಿ ವನ ಪ್ರದೇಶ ಹೆಚ್ಚಾಗುತ್ತಿಲ್ಲ. ಹೀಗಾಗಿ ಮಾನವ ಮತ್ತು ವನ್ಯ ಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಅರಣ್ಯ ಒತ್ತುವರಿ ತೆರವು ಅತ್ಯಗತ್ಯ ಕ್ರಮವಾಗಿದೆ ಎಂದ ಅವರು, ಅರಣ್ಯ ಸಂರಕ್ಷಣಾ ಕಾಯಿದೆ 1980ರ ಜಾರಿಗೂ ಮುನ್ನ ಅರಣ್ಯ ಭೂಮಿ ಒತ್ತುವರಿ ಮಾಡಿ ನಿಗದಿತ ಕಾಲಮಿತಿಯೊಳಗೆ ಅರ್ಜಿ ಸಲ್ಲಿಸಿರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಬೇಕಿದೆ. ಸುಮಾರು 13,155 ಪ್ರಕರಣಗಳ 31,864 ಎಕರೆ ಭೂಮಿ ಇದ್ದು, ಈ ಪೈಕಿ ಸುಮಾರು 7 ಸಾವಿರ ಪ್ರಕರಣಗಳಲ್ಲಿ ಪಟ್ಟಾ ಕೊಡಲು ಕ್ರಮ ವಹಿಸಬಹುದಾಗಿದೆ ಎಂದು ವಿವರಿಸಿದರು.

1980ಕ್ಕೆ ಮುನ್ನ 3 ಎಕರೆಗಿಂತ ಕಡಿಮೆ ಭೂಮಿ ಒತ್ತುವರಿ ಮಾಡಿ ಮನೆ ಕಟ್ಟಿರುವ ಮತ್ತು ಉಳಿಮೆ ಮಾಡುತ್ತಿರುವ ಬಡ ರೈತರಿಗೆ ಕಿರುಕುಳ ನೀಡದೆ, ದೊಡ್ಡ ಒತ್ತುವರಿಗಳನ್ನು ಮೊದಲು ತೆರವು ಮಾಡಿಸಲು ಕ್ರಮ ವಹಿಸುವಂತೆಯೂ ಆದೇಶಿಸಲಾಗಿದೆ. ಹಾಗೇ, ಅರಣ್ಯ ಒತ್ತುವರಿ ಕುರಿತಂತೆ ವಲಯವಾರು, ವಿಭಾಗವಾರು, ವೃತ್ತವಾರು ಮಾಹಿತಿ ಕೈಸೇರಿದ ಬಳಿಕ ಕ್ರಮ ವಹಿಸುವುದಾಗಿ ಸಚಿವರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com