
ಬೆಂಗಳೂರು: ಪಿಎಂ-ಕುಸುಮ್ ಕಾಂಪೋನೆಂಟ್ ಸಿ ಯೋಜನೆಯಡಿ ಫೀಡರ್ ಸೌರೀಕರಣಕ್ಕಾಗಿ ರಾಜ್ಯದ 400 ಉಪಕೇಂದ್ರಗಳ ಬಳಿ ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಇಂಧನ ಇಲಾಖೆಗೆ ಜಮೀನು ಹಸ್ತಾಂತರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಕ್ರಮ ವಹಿಸಲು ಸುತ್ತೋಲೆ ಹೊರಡಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸೂಚನೆ ನೀಡಿದರು.
ಪಿಎಂ-ಕುಸುಮ್ ಕಾಂಪೋನೆಂಟ್ ಸಿ ಯೋಜನೆಗೆ ಗುರುತಿಸಿದ ಸರ್ಕಾರಿ ಭೂಮಿಯನ್ನು ಯೋಜನೆಯ ಅನುಷ್ಠಾನಕ್ಕಾಗಿ ಕಂದಾಯ ಇಲಾಖೆಗೆ ಹಸ್ತಾಂತರಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ನಿನ್ನೆ ಉನ್ನತ ಮಟ್ಟದ ಸಭೆ ನಡೆಸಿದರು.
400 ವಿದ್ಯುತ್ ಉಪಕೇಂದ್ರಗಳ ಸಮೀಪದಲ್ಲಿ ಫೀಡರ್ ಸೌರೀಕರಣ ಅನುಷ್ಠಾನಕ್ಕಾಗಿ 3,000 ಎಕರೆ ಭೂಮಿ ಅಗತ್ಯವಿದೆ. ಜಿಲ್ಲಾಧಿಕಾರಿಗಳಿಗೆ ಭೂಮಿ ಹಂಚಿಕೆ ಮಾಡಲು ಅಧಿಕಾರ ಪ್ರತ್ಯಾಯೋಜನೆ ಮಾಡಿದರೆ ತ್ವರಿತವಾಗಿ ಯೋಜನೆ ಅನುಷ್ಠಾನ ಮಾಡಲು ಸಾಧ್ಯವಿದೆ. ಇದರಿಂದ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲೇ ವಿದ್ಯುತ್ ಪೂರೈಕೆ ಮಾಡಲು ಸಹ ಸಾಧ್ಯವಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಇಂಧನ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳು ಸ್ಥಳೀಯ ತಹಸೀಲ್ದಾರರೊಂದಿಗೆ ಜಮೀನು ಗುರುತಿಸಿ, ಸೂಕ್ತ ಪ್ರಸ್ತಾವನೆ ಕೂಡಲೇ ಕಳುಹಿಸಿ, ಕಂದಾಯ ಇಲಾಖೆಯು ಇಂಧನ ಇಲಾಖೆಗೆ ಭೂಮಿಯನ್ನು ಲೀಸ್ ಆಧಾರದಲ್ಲಿ ಹಸ್ತಾಂತರಿಸಲು ಸೂಚಿಸಿದರು. ಆದರೆಸ, ಈ ಆಸ್ತಿಯನ್ನು ಇಂಧನ ಇಲಾಖೆ ಖಾಸಗಿಯವರಿಗೆ ಹಸ್ತಾಂತರಿಸುವಂತಿಲ್ಲ ಎಂಬ ಷರತ್ತಿನೊಂದಿಗೆ ಹಸ್ತಾಂತರ ಮಾಡುವಂತೆ ಸೂಚಿಸಿದರು.
ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಖುದ್ದು ಸೂಚನೆ ನೀಡುವುದು ಹಾಗೂ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರಿಗೂ ಈ ಕುರಿತು ಆದ್ಯತೆ ನೀಡಲು ಸೂಚಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಯೊಬ್ಬರು ಮಾತನಾಡಿ, ಈ ಕ್ರಮಕ್ಕೆ ಯಾವುದೇ ಗಡುವು ನಿಗದಿಪಡಿಸಲಾಗಿಲ್ಲವಾದರೂ, ಶೀಘ್ರವಾಗಿ ಪೂರ್ಣಗೊಳಿಸಲು ಸರ್ಕಾರ ಉತ್ಸುಕವಾಗಿದೆ ಎಂದು ಹೇಳಿದರು.
ಯಾವುದೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ. ಕಂದಾಯ ಭೂಮಿಯನ್ನು ಇಂಧನ ಇಲಾಖೆಗೆ ಗುತ್ತಿಗೆಗೆ ನೀಡಲಾಗುವುದು, ಇದರದಲ್ಲಿ ಯಾವುದೇ ಭೂ ವ್ಯವಹಾರ ನಡೆಯುವುದಿಲ್ಲ ಎಂದು ತಿಳಿಸಿದರು..
Advertisement