ಮನುಷ್ಯ ದ್ವೇಷಕ್ಕಿಂತ ಕೆಟ್ಟ ಗುಣ ಬೇರೆ ಇಲ್ಲ: ಸಿಎಂ ಸಿದ್ದರಾಮಯ್ಯ

ಮನುಷ್ಯ ದ್ವೇಷಕ್ಕಿಂತ ಕೆಟ್ಟ ಗುಣ ಬೇರೆ ಇಲ್ಲ, ಪರಸ್ಪರ ಗೌರವಿಸುವುದೇ ಮನುಷ್ಯತ್ವದ ದೊಡ್ಡ ಗುಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Updated on: 

ಬೆಂಗಳೂರು: ಮನುಷ್ಯ ದ್ವೇಷಕ್ಕಿಂತ ಕೆಟ್ಟ ಗುಣ ಬೇರೆ ಇಲ್ಲ, ಪರಸ್ಪರ ಗೌರವಿಸುವುದೇ ಮನುಷ್ಯತ್ವದ ದೊಡ್ಡ ಗುಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸವಿತಾ ಸಮಾಜ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಡಾ.ಎಂ.ಎಸ್.ಮುತ್ತುರಾಜ್ ಅವರ ಮಂಗಳವಾದ್ಯ ಕಾದಂಬರಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಮುಖ್ಯಮಂತ್ರಿ, ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂದು ಬಸವಣ್ಣನವರು ಹೇಳಿದ್ದು ಇದೇ ಕಾರಣಕ್ಕೆ. ಮನುಷ್ಯರು ಪರಸ್ಪರ ಗೌರವಿಸುವುದೇ ದೊಡ್ಡ ಗುಣ. ಅದಕ್ಕೇ ರಾಷ್ಟ್ರಕವಿ ಕುವೆಂಪು ಅವರು "ಸರ್ವ ಜನಾಂಗದ ಶಾಂತಿಯ ತೋಟ"  ಎಂದು ಕರೆದಿದ್ದಾರೆ ಎಂದರು. 

ಧರ್ಮ, ಜಾತಿ ಹೆಸರಲ್ಲಿ ಮುಸ್ಲಿಂಮರನ್ನು, ದಲಿತರನ್ನು, ಶೂದ್ರರನ್ನು, ಶ್ರಮಿಕ‌ ವರ್ಗದವರನ್ನು ದ್ವೇಷಿಸುವುದು ಅತ್ಯಂತ ಅಮಾನವೀಯವಾದ, ಕೆಟ್ಟ ನಡವಳಿಕೆ. ಜನರಿಗೆ ಅರ್ಥ ಆಗುವ ರೀತಿಯಲ್ಲಿ ಸರಳವಾದ ಜನರ ಭಾಷೆಯಲ್ಲಿ ಮನುಷ್ಯನ ಮೌಲ್ಯಗಳನ್ನು ಬಸವಾದಿ ಶರಣರು ಹೇಳಿದ್ದಾರೆ. ನಾರಾಯಣ ಗುರುಗಳು, ಒಂದೇ ಜಾತಿ-ಒಂದೇ ಮತ-ಒಂದೇ ದೇವರು ಎಂದರು. ಕನಕದಾಸರು ಮತ್ತು ಬಸವಾದಿ ಶರಣರು ಹೇಳಿದ್ದೂ ಇದೇ ಮೌಲ್ಯ ಎಂದು ತಿಳಿಸಿದರು. 

ದೇವರಿದ್ದಾನೆ. ಆದರೆ ದೇವರು ದೇವಸ್ಥಾನದಲ್ಲಿ ಮಾತ್ರ ಇದ್ದಾನೆ ಎನ್ನುವುದು ಸರಿಯಲ್ಲ. ಎಲ್ಲಾ ಕಡೆಯೂ ದೇವರಿದ್ದಾನೆ. ಕೊನೆಯವರೆಗೂ ಸಾಮಾಜಿಕ ನ್ಯಾಯ ಮತ್ತು ಸ್ವಾಭಿಮಾನದ ರಾಜಕಾರಣ ಮಾಡುತ್ತೇನೆ. ನಾವು ರೂಪಿಸುವ ಕಾರ್ಯಕ್ರಮಗಳು ಬಡವರ ಪರವಾಗಿ ಇರುತ್ತವೆ. ನಮ್ಮ‌ ಕಾರ್ಯಕ್ರಮಗಳು ಮನೆ ಮನೆ ತಲುಪಿವೆ. ಬಿಜೆಪಿಯವರ ಟೀಕೆಗೆ ಜನ ಬೆಲೆ ಕೊಡಲ್ಲ. ನಾನೂ ಕೊಡಲ್ಲ. ನಾಡಿನ ಜನ ನಮ್ಮ ಜೊತೆಗಿದ್ದಾರೆ ಎಂದರು. 

ಪ್ರತಿಯೊಬ್ಬರೂ ಘನತೆಯಿಂದ ಕಾಯಕ ಮಾಡಬೇಕು. ಇದನ್ನೇ ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ಕೈಲಾಸ, ಸ್ವರ್ಗ, ನರಕ ಎನ್ನುವುದು ಬೇರೆಲ್ಲೂ ಇಲ್ಲ. ಎಲ್ಲವೂ ಇಲ್ಲೇ ಇದೆ. ಯಾವ ಕಾಯಕವು ಮೇಲೂ ಅಲ್ಲ, ಯಾವುದು ಕೀಳು ಅಲ್ಲ. ಎಲ್ಲ ಕಾಯಕವೂ ಸಮಾನ ಮಹತ್ವ ಮತ್ತು ಸಮಾನ ಘನತೆ ಹೊಂದಿವೆ ಎಂದು ಮುಖ್ಯಮಂತ್ರಿ ತಿಳಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com