ಗೋವಾದಲ್ಲಿ ಹೊಸವರ್ಷಾಚರಣೆಗೆ ವ್ಯಕ್ತಿಯ ಅಪಹರಣ, ಕೊಲೆ: ಮೂವರು ಆರೋಪಿಗಳ ಬಂಧನ

ಗೋವಾದಲ್ಲಿ ಹೊಸ ವರ್ಷ ಆಚರಿಸಲು ವ್ಯಕ್ತಿಯನ್ನು ಅಹಹರಿಸಿ, ಹತ್ಯೆ ಮಾಡಿದ್ದ ಮೂವರು ಆರೋಪಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಗೋವಾದಲ್ಲಿ ಹೊಸ ವರ್ಷ ಆಚರಿಸಲು ವ್ಯಕ್ತಿಯನ್ನು ಅಹಹರಿಸಿ, ಹತ್ಯೆ ಮಾಡಿದ್ದ ಮೂವರು ಆರೋಪಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಮಸಂದ್ರ ಗಾಯತ್ರಿ ಲೇಔಟ್‌ನ ಸಂಜಯ್‌ (25), ಮಂಗನಹಳ್ಳಿ ಕ್ರಾಸ್‌ ಎಸ್‌.ಎಂ.ವಿ ಲೇಔಟ್‌ 5ನೇ ಬ್ಲಾಕ್‌ನ ಆನಂದ ಹಾಗೂ ನಾಗದೇವಹಳ್ಳಿ ನಿವಾಸಿ ಹನುಮಂತು ಬಂಧಿತರು. ಮತ್ತೋರ್ವ ಆರೋಪಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

ಆರೋಪಿಗಳು ‘ಕಿಶನ್‌ ಕುಮಾರ್‌ ಎಂಬ ಯುವಕನನ್ನು ಅಪಹರಿಸಿ, ಹಣ ಸುಲಿಗೆಗೆ ಪ್ರಯತ್ನಿಸಿದ್ದರು. ಆತನನ್ನು ಸ್ಥಳೀಯರು ರಕ್ಷಿಸಿ ವಾಪಸ್‌ ಕಳುಹಿಸಿದ್ದರು.

ಕಾರ್ಪೆಂಟರ್‌ ಕೆಲಸ ಮಾಡುತ್ತಿದ್ದ ಸಂಜಯ್‌ಕುಮಾರ್‌ ಪಂಡಿತ್‌ ಅವರಿಗೆ ದೂರವಾಣಿ ಕರೆ ಮಾಡಿದ್ದ ಆರೋಪಿಗಳು, ತಮ್ಮ ಜತೆಗೆ ಕೆಲಸವಿದ್ದು, ತಮ್ಮೊಂದಿಗೆ ಮಾತನಾಡಬೇಕೆಂದು ಹೇಳಿದ್ದರು. ಈ ವೇಳೆ ಸಂಜಯ್ ಕುಮಾರ್ ಪಂಡಿತ್ ತಾವು ಕುಂದಾಪುರದಲ್ಲಿದ್ದು ನನ್ನ ಬಳಿ ಕೆಲಸಕ್ಕಿರುವ ಕಿಶನ್‌ಕುಮಾರ್‌ನನ್ನು ಸ್ಥಳಕ್ಕೆ ಕಳುಹಿಸುವುದಾಗಿ ಪಂಡಿತ್‌ ತಿಳಿಸಿದ್ದರು.

ಆರೋಪಿಗಳು ತಿಳಿಸಿದ ಕೃಷ್ಣ ಅರಮನೆ ಹೋಟೆಲ್‌ ಬಳಿಗೆ ಅಂದು ಕಿಶನ್‌ ತೆರಳಿದ್ದರು. ಅಲ್ಲಿಗೆ ಬಂದಿದ್ದ ಮೂವರು ಆರೋಪಿಗಳು ಕಿಶನ್‌ನನ್ನು ಅಪಹರಿಸಿದ್ದರು. ರೂ.10 ಸಾವಿರ ನೀಡಿದರೆ ವಾಪಸ್‌ ಕಳುಹಿಸುವುದಾಗಿ ಹೇಳಿದ್ದರು. ನನ್ನ ಬಳಿ ಹಣವಿಲ್ಲ ಎಂದಾಗ ಸಂಜಯ್‌ಕುಮಾರ್‌ ಪಂಡಿತ್‌ನಿಂದ ರೂ.1 ಲಕ್ಷ ಕೊಡಿಸುವಂತೆ ಬೇಡಿಕೆಯಿಟ್ಟಿದ್ದರು. ಅದಾದ ಮೇಲೆ ಚಾಕು ತೋರಿಸಿ ಕುಂದಾಪುರಕ್ಕೆ ಕರೆದೊಯ್ಯುವ ಪ್ರಯತ್ನ ಮಾಡಿದ್ದರು. ಕಾರಿನಲ್ಲಿ ತೆರಳುತ್ತಿದ್ದಾಗ ಮಧ್ಯದಲ್ಲಿ ಕಿಶನ್‌ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಕಿರುಚಿಕೊಂಡಾಗ ಕಾರಿನಿಂದ ಇಳಿಸಿ ಪರಾರಿಯಾಗಿದ್ದರು. ಸ್ಥಳೀಯರ ನೆರವಿನಿಂದ ಕಿಶನ್‌ ಬೆಂಗಳೂರಿಗೆ ವಾಪಸ್ ಆಗಿದ್ದರು. ಸಂಜಯ್‌ ಕುಮಾರ್ ಅವರು ಬೆಂಗಳೂರಿಗೆ ವಾಪಸ್‌ ಬಂದ ಮೇಲೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡು ತನಿಖೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದರು. ಈ ನಡುವೆ ಕಿಶನ್ ಕುಮಾರ್ ಅಪಹರಣ ವಿಫಲವಾದ ಮೇಲೆ ಗುರುಸಿದ್ದಪ್ಪ ಎಂಬಾತನನ್ನು ಆರೋಪಿಗಳು ಅಪಹರಿಸಿ, ಆತನಿಗೆ ಬೆದರಿಸಿ ರೂ.5 ಲಕ್ಷಗಳನ್ನು ಸುಲಿಗೆ ಮಾಡಿದ್ದರು. ನಂತರ ಈತನನ್ನು ಜೀವಂತವಾಗಿ ಬಿಟ್ಟರೆ ತೊಂದರೆ ಮಾಡಬಹುದು ಎಂಬ ಭಯದಿಂದ ರಾಮನಗರ ಜಿಲ್ಲೆ ಕೂಟಗಲ್‌ ತಿಮ್ಮಪ್ಪಸ್ವಾಮಿ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದರು.

ಈ ನಡುವೆ ಕಿಶನ್ ಅಪಹರಣ ಪ್ರಕರಣ ಸಂಬಂಧ ದಾಖಲಾಗಿದ್ದ ದೂರು ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಪೊಲೀಸರು ಸಂಜಯ್ ತಂಡವನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದು, ಈ ವೇಳೆ ಗುರುಸಿದ್ದಪ್ಪ ಹತ್ಯೆ ವಿಚಾರ ಬೆಳಕಿಗೆ ಬಂದಿದೆ.

15 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಸಂಜಯ್‌ ಮಂಗನಗಳ್ಳಿಯಲ್ಲಿ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ. ತರಕಾರಿ ಡೆಲಿವರಿ ಕೆಲಸ ಮಾಡುತ್ತಿದ್ದ ಆನಂದ್, ಹಲವು ಸುಲಿಗೆ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಮೂಲತಃ ರಾಯಚೂರಿನ ಹನುಮಂತ ನಾಗದೇವಹಳ್ಳಿಯಲ್ಲಿ ನೆಲೆಸಿದ್ದ. ಮೂವರು ಪರಸ್ಪರ ಪರಿಚಯಸ್ಥರು. ಗಾಂಜಾ ವ್ಯಸನಿಗಳಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳು ನೀಡಿದ ಮಾಹಿತಿ ಅನ್ವಯ ಅರಣ್ಯ ಪ್ರದೇಶದಲ್ಲಿ ಗುರುಸಿದ್ದಪ್ಪ ಅವರ ಮೃತದೇಹಕ್ಕಾಗಿ 2 ದಿನಗಳ ಶೋಧಕಾರ್ಯ ನಡೆಸಲಾಯಿತು. ಆದರೆ, ಮೃತದೇಹವು ಕೆಲ ವನ್ಯಮೃಗಗಳು ತಿಂದಿ ಹಾಕಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್ ಗಿರೀಶ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com