ವಾಣಿಜ್ಯ ಉದ್ದೇಶಕ್ಕೆ ಪುರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿ ಭೂಮಿ ಪರಿವರ್ತನೆಯ ಅಗತ್ಯವಿಲ್ಲ: ಹೈಕೋರ್ಟ್‌

ಪುರಸಭೆ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಪ್ರತ್ಯೇಕವಾಗಿ ಪರಿವರ್ತನೆ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಹೈಕೋರ್ಟ್‌ನ ಧಾರವಾಡ ಪೀಠ ಸ್ಪಷ್ಟಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಪುರಸಭೆ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಪ್ರತ್ಯೇಕವಾಗಿ ಪರಿವರ್ತನೆ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಹೈಕೋರ್ಟ್‌ನ ಧಾರವಾಡ ಪೀಠ ಸ್ಪಷ್ಟಪಡಿಸಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಉದ್ಯಮಿ ಶ್ರೀಶೈಲ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

ಕರ್ನಾಟಕ ಭೂ ಕಂದಾಯ ಕಾಯಿದೆ 1964ರ ಸೆಕ್ಷನ್‌ಗಳಾದ 95 ರಿಂದ 97ಗಳ ಪ್ರಕಾರ ಪುರಸಭೆ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಜಮೀನುಗಳು ಕೃಷಿಯೇತರ ಚಟುವಟಿಕೆಗಳಿಗೆ ಒಳಪಡಲಿದೆ ಎಂದು ಹೇಳಲಾಗಿದೆ. ಆದ ಕಾರಣ ಈ ವ್ಯಾಪ್ತಿಯ ಭೂಮಿಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಪ್ರತ್ಯೇಕವಾಗಿ ಪರಿವರ್ತನೆ ಮಾಡಿಕೊಳ್ಳುವ ಅಗತ್ಯವಿಲ್ಲ. ಉದ್ದೇಶಿತ ಭೂಮಿ ಪುರಸಭೆ ವ್ಯಾಪ್ತಿಯಲ್ಲಿದೆ. ಈ ಭೂಮಿಗೆ ಕರ್ನಾಟಕ ಭೂ ಕಂದಾಯ ಕಾಯಿದೆಯ ನಿಯಮಗಳು ಅನ್ವಯವಾಗುವುದಿಲ್ಲ ಎಂದು ಪೀಠ ತಿಳಿಸಿದೆ.

ಕೃಷಿಯೇತರ ಉದ್ದೇಶಕ್ಕಾಗಿ (ಪೆಟ್ರೋಲ್ ಬಂಕ್ ನಿರ್ಮಾಣಕ್ಕಾಗಿ) ಪರಿವರ್ತಿಸಲಾದ ಭೂಮಿಯು ಕೃಷಿಯೇತರ ವಾಣಿಜ್ಯ ಬಳಕೆಯ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಪೆಟ್ರೋಲ್ ಬಂಕ್‌ಗಾಗಿ ಭೂಮಿಯನ್ನು ಪರಿವರ್ತಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಆದರೆ, ವಾಣಿಜ್ಯ ಕಟ್ಟಡ ಹಾಗೂ ಪೆಟ್ರೋಲ್ ಬಂಕ್ ನಿರ್ಮಾಣ ವಿಚಾರವಾಗಿ ಪರಿವರ್ತಿತ ಭೂಮಿಯನ್ನು ಪ್ರತ್ಯೇಕಿಸಿ ನೋಡುವುದಕ್ಕೆ ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.

ಪ್ರಸ್ತುತ ಪರಿವರ್ತಿತ ಭೂಮಿಯಲ್ಲಿ ಪೆಟ್ರೋಲ್ ಬಂಕ್ ನಿರ್ಮಿಸಿರುವುದರಿಂದ, ಇತರೆ ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡುವುದಕ್ಕೆ ಅವಕಾಶ ನಿರ್ಬಂಧಿಸುವಂತಿಲ್ಲ. ಒಂದು ವೇಳೆ ಆ ರೀತಿಯಲ್ಲಿ ನಿರ್ಬಂಧ ವಿಧಿಸಿದಲ್ಲಿ ಪೆಟ್ರೋಲ್ ಬಂಕ್‌ಗೆ ನೀಡಿದ ಅನುಮತಿ ಕಾನೂನುಬಾಹಿರವಾಗಲಿದೆ. ಆದ್ದರಿಂದ ಮುಂದಿನ 60 ದಿನಗಳಲ್ಲಿ ಅರ್ಜಿದಾರರ ಆಸ್ತಿಗೆ ಸಂಬಂಧಿಸಿದಂತೆ ನಿಯಮಗಳ ಅನುಸಾರ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡುವಂತೆ ಪೀಠ ಪುರಸಭೆಗೆ ಸೂಚನೆ ನೀಡಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರಿಗೆ ತನ್ನ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ 1.29 ಎಕರೆ ಜಮೀನು ಲಭ್ಯವಾಗಿತ್ತು. ಈ ಜಮೀನನ್ನು ಕೃಷಿಯೇತರ ಚಟುವಟುಕೆಗಳಿಗೆ ಬಳಕೆ ಮಾಡಿಕೊಳ್ಳುವುದಕ್ಕೆ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಪರಿಗಣಿಸಿದ್ದ ಜಿಲ್ಲಾಧಿಕಾರಿಗಳು ಕೃಷಿಯೇತರ ಚಟುವಟಿಕೆಗಳಿಗೆ ಬಳಕೆ ಅನುಮತಿ ನೀಡಿದ್ದರು.

ಪರಿವರ್ತಿತ ಈ ಜಮೀನಿನಲ್ಲಿ 14,437 ಚದರಡಿಯಲ್ಲಿ ಪೆಟ್ರೋಲ್ ಬಂಕ್ ನಿರ್ಮಿಸಿದ್ದರು. ಇನ್ನುಳಿದ ಜಮೀನನ್ನು ವಾಣಿಜ್ಯ ಕಟ್ಟಡ ನಿರ್ಮಾಣಕ್ಕಾಗಿ ಪ್ರಸ್ತಾವ ಸಲ್ಲಿಸಿದ್ದರು. ಆದರೆ, ಬೈಲಹೊಂಗಲ ಪುರಸಭೆಯು ವಾಣಿಜ್ಯ ಕಟ್ಟಡಗಳಿಗೆ ನಕ್ಷೆ ಮಂಜೂರು ಮಾಡುವಂತೆ ಕೋರಿದ್ದ ಮನವಿಯನ್ನು 2022ರ ಅಕ್ಟೋಬರ್ 13ರಂದು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಶ್ರೀಶೈಲಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಉದ್ದೇಶಿತ ಭೂಮಿ ಪುರಸಭೆ ವ್ಯಾಪ್ತಿಗೆ ಬರಲಿದ್ದು, ಸ್ಥಳೀಯ ಸಂಸ್ಥೆ ಅದರಂತೆ ತೆರಿಗೆ ನಿಗದಿಪಡಿಸಿ ಸಂಗ್ರಹಿಸುತ್ತಿದೆ. ಕೃಷಿ ಭೂಮಿ ಪುರಸಭೆ ವ್ಯಾಪ್ತಿಗೆ ಸೇರ್ಪಡೆಗೊಂಡಲ್ಲಿ ವಾಣಿಜ್ಯ ಉದ್ದೇಶಗಳಿಗೆ ಪರಿವರ್ತನೆ ಮಾಡುವ ಅಗತ್ಯವಿಲ್ಲ ಎಂದು ಪೀಠಕ್ಕೆ ವಿವರಿಸಿದ್ದರು. ಇದಕ್ಕೆ ಸರ್ಕಾರದ ಪರ ವಕೀಲರು ಆಕ್ಷೇಪಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com