ಹಾನಗಲ್ ನಲ್ಲಿ ಜೋಡಿ ಮೇಲೆ ಹಲ್ಲೆ: ಆರೋಪಿಗಳ ವಿರುದ್ಧ ಗ್ಯಾಂಗ್ ರೇಪ್ ಕೇಸ್ ದಾಖಲು, ಇಂಚಿಂಚು ಮಾಹಿತಿ ನೀಡಿದ ಪೊಲೀಸರು

ಜಿಲ್ಲೆಯ ಹಾನಗಲ್ ನ ಹೊಟೇಲ್ ಕೊಠಡಿಯಲ್ಲಿ ತಂಗಿದ್ದ ಸಂದರ್ಭದಲ್ಲಿ ಕೊಠಡಿಗೆ ನುಗ್ಗಿ ಅಂತರ ಧರ್ಮೀಯ ದಂಪತಿ ಮೇಲೆ ಹಲ್ಲೆ ನಡೆಸಿದ ಏಳು ಮಂದಿ ಆರೋಪಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ನೀಡಿದ ದೂರಿದ ಹಿನ್ನೆಲೆಯಲ್ಲಿ ಸಾಮೂಹಿಕ ಅತ್ಯಾಚಾರದ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಹಾವೇರಿ: ಜಿಲ್ಲೆಯ ಹಾನಗಲ್ ನ ಹೊಟೇಲ್ ಕೊಠಡಿಯಲ್ಲಿ ತಂಗಿದ್ದ ಸಂದರ್ಭದಲ್ಲಿ ಕೊಠಡಿಗೆ ನುಗ್ಗಿ ಅಂತರ ಧರ್ಮೀಯ ದಂಪತಿ ಮೇಲೆ ಹಲ್ಲೆ ನಡೆಸಿದ ಏಳು ಮಂದಿ ಆರೋಪಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ನೀಡಿದ ದೂರಿದ ಹಿನ್ನೆಲೆಯಲ್ಲಿ ಸಾಮೂಹಿಕ ಅತ್ಯಾಚಾರದ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. 

ಇದೊಂದು ನೈತಿಕ ಪೊಲೀಸ್‌ಗಿರಿ ಪ್ರಕರಣ ಎನ್ನಬಹುದಾಗಿದ್ದು, ಮೊನ್ನೆ ಜನವರಿ 8 ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ನಿನ್ನೆ ಗುರುವಾರ ಮಧ್ಯಾಹ್ನ, ಸಂತ್ರಸ್ತೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಯಿತು, ಅದರಲ್ಲಿ ಆಕೆ ತನ್ನ ಮೇಲೆ ಏಳು ಜನರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆಂದು. ಆದ್ದರಿಂದ, ಆಕೆಯ ಹೇಳಿಕೆಯ ಆಧಾರದ ಮೇಲೆ ನಾವು ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರ) ಪ್ರಕರಣದಡಿ ಕೇಸು ದಾಖಲಿಸಿದ್ದೇವೆ. ಘಟನೆಗೆ ಸಂಬಂಧಿಸಿದಂತೆ ನಾವು ಇಲ್ಲಿಯವರೆಗೆ ಮೂವರನ್ನು ಬಂಧಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಘಟನೆ ನಡೆದ ನಂತರ ಅಪಘಾತಕ್ಕೀಡಾಗಿ ಮತ್ತೊಬ್ಬ ಆರೋಪಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆತನನ್ನು ಬಿಡುಗಡೆ ಮಾಡಿದ ಬಳಿಕ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು. ಪ್ರಕರಣದಲ್ಲಿ ಉಳಿದ ಶಂಕಿತರನ್ನು ಪತ್ತೆಹಚ್ಚಲು ನಮ್ಮ ತಂಡಗಳು ಪ್ರಯತ್ನಿಸುತ್ತಿವೆ. ಆರೋಪಿಗಳ ಗುರುತು ಪತ್ತೆಯಾಗಿದೆ ಎಂದರು. 

ಪೊಲೀಸರ ಪ್ರಕಾರ, ಜನವರಿ 8 ರಂದು ಮಧ್ಯಾಹ್ನ 1 ಗಂಟೆಗೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 26 ವರ್ಷದ ವಿವಾಹಿತ ಮಹಿಳೆ 40 ವರ್ಷದ ಕೆಎಸ್‌ಆರ್‌ಟಿಸಿ ಬಸ್ ಚಾಲಕನೊಂದಿಗೆ ಹೋಟೆಲ್ ಕೋಣೆ ಪ್ರವೇಶಿಸಿದ್ದರು. ಕಳೆದ 3 ವರ್ಷಗಳಿಂದ ಇವರಿಬ್ಬರು ಸಂಬಂಧದಲ್ಲಿದ್ದರು ಎನ್ನಲಾಗಿದೆ. 

ವಿಡಿಯೊ ವೈರಲ್ : ಈ ವಿಷಯ ತಿಳಿದ ಮುಸಲ್ಮಾನ ಪುರುಷರ ಗುಂಪು ಹೋಟೆಲ್ ಕೊಠಡಿಯೊಳಗೆ ನುಗ್ಗಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದೆ. ತಾವು ನಡೆಸಿದ ಕುಕೃತ್ಯವನ್ನು ಆರೋಪಿಗಳು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ನಂತರ ವಿಡಿಯೋ ವೈರಲ್ ಆಗಿದೆ. 

ಒಂದು ವೀಡಿಯೊದಲ್ಲಿ, ಆರು ಪುರುಷರು ಕೋಣೆಯ ಬಾಗಿಲು ಬಡಿಯುತ್ತಿರುವುದನ್ನು ಕಾಣಬಹುದು. ಒಬ್ಬ ವ್ಯಕ್ತಿ ಬಾಗಿಲು ತೆರೆದಾಗ, ದಾಳಿಕೋರರು ಮಹಿಳೆಯ ಕಡೆಗೆ ನುಗ್ಗುತ್ತಿರುವುದನ್ನು ಕಾಣಬಹುದು. ಗ್ಯಾಂಗ್ ಜೋಡಿಯನ್ನು ಅವಾಚ್ಯವಾಗಿ ನಿಂದಿಸಿ, ಅವರ ಮೇಲೆ ಹಲ್ಲೆ ನಡೆಸಿ ಮಹಿಳೆ ಮುಖವನ್ನು ಬುರ್ಖಾದಿಂದ ಮುಚ್ಚಲು ಪ್ರಯತ್ನಿಸುತ್ತಿರುವಾಗ ಅತ್ಯಾಚಾರಿಗಳ ತಂಡ ಚಿತ್ರೀಕರಣ ಮಾಡಿದೆ. 

ಅಂತರ ಧರ್ಮೀಯ ಜೋಡಿ: ಪೊಲೀಸರ ಪ್ರಕಾರ, ಜೋಡಿ ಹೊಟೇಲ್ ಗೆ ಹೋಗುತ್ತಿರುವುದನ್ನು ಹೊರಗೆ ಆಟೋರಿಕ್ಷಾ ಚಾಲಕನೊಬ್ಬ ಗಮನಿಸಿದ್ದಾನೆ. ಮಹಿಳೆ ಬುರ್ಖಾ ಧರಿಸಿ ಬೇರೊಂದು ಸಮುದಾಯದ ವ್ಯಕ್ತಿಯೊಂದಿಗೆ ಇರುವುದನ್ನು ನೋಡಿದ ಆತ ಕೂಡಲೇ ಮುಸ್ಲಿಂ ಸಮುದಾಯಕ್ಕೆ ಸೇರಿದ ಸ್ಥಳೀಯ ಗ್ಯಾಂಗ್‌ಗೆ ಸಂದೇಶ ನೀಡಿದ್ದಾನೆ. 

ಅವರು ಬಂದು ಹೋಟೆಲ್ ಕೋಣೆಗೆ ನುಗ್ಗಿ ಜೋಡಿ ಮೇಲೆ ಹಲ್ಲೆ ನಡೆಸಲು ಆರಂಭಿಸಿದರು. ಅಂತಿಮವಾಗಿ ಅವರನ್ನು ಕೊಠಡಿಯಿಂದ ಹೊರಗೆ ಎಳೆದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂರು ದ್ವಿಚಕ್ರವಾಹನಗಳಲ್ಲಿ ಬಂದ ಗ್ಯಾಂಗ್ ಜೋಡಿಯನ್ನು ಹೋಟೆಲ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದಿದೆ. ಅಲ್ಲಿಗೆ ಬಂದು ಜೋಡಿಗೆ ಚೆನ್ನಾಗಿ ಥಳಿಸಿದ್ದಾರೆ. ಮಹಿಳೆಯನ್ನು ನಿಂದಿಸಿ ದೊಣ್ಣೆಯಿಂದ ಹೊಡೆದಿದ್ದಾರೆ. ನಂತರ ತನ್ನ ಮೇಲೆ ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ. 

ನಂತರ ಅತ್ಯಾಚಾರಿಗಳ ತಂಡ ಆಕೆಗೆ 500 ರೂಪಾಯಿ ಕೊಟ್ಟು ನಿನ್ನ ಊರಿಗೆ ಹೋಗು ಎಂದು ಸೂಚಿಸಿದ್ದಾರೆ. ನಂತರ ಆಕೆ ತನ್ನ ಪತಿ ವಾಸಿಸುತ್ತಿರುವ ಊರು ಸಿರ್ಸಿಗೆ ಹೋಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. 

ಆರೋಪಿಗಳು ಯಾವುದೇ ಸಂಘಟನೆಗೆ ಸಂಬಂಧ ಹೊಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ, ಇದುವರೆಗೆ ಬಂಧಿತರಾದವರು ಯಾವುದೇ ಅಪರಾಧ ಹಿನ್ನೆಲೆ ಹೊಂದಿದ್ದಾರೆಯೇ ಎಂದು ಪರಿಶೀಲಿಸಬೇಕಿದೆ. ಸಾಮೂಹಿಕ ಅತ್ಯಾಚಾರದ ಜೊತೆಗೆ, ಎಫ್‌ಐಆರ್‌ನಲ್ಲಿ ಸೇರಿಸಲಾದ ಇತರ ಐಪಿಸಿ ಸೆಕ್ಷನ್‌ಗಳು ಅಪಹರಣ ಮತ್ತು ಹಲ್ಲೆಗೆ ಸಂಬಂಧಿಸಿದವುಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com