50 ಚದರ ಮೀಟರ್ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ಯಾವುದೇ ನಿರ್ಬಂಧವಿಲ್ಲ: ಹೈಕೋರ್ಟ್

ನಗರದಲ್ಲಿ 50 ಚದರ ಮೀಟರ್‌ಗಿಂತಲೂ ಕಡಿಮೆ ಅಳತೆಯ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಹೈಕೋರ್ಟ್ ಗುರುವಾರ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನಗರದಲ್ಲಿ 50 ಚದರ ಮೀಟರ್‌ಗಿಂತಲೂ ಕಡಿಮೆ ಅಳತೆಯ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಹೈಕೋರ್ಟ್ ಗುರುವಾರ ಹೇಳಿದೆ.

50 ಚದರ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ಅನುಮೋದನೆ ನಿರಾಕರಿಸಿದ್ದ ಬಿಬಿಎಂಪಿ ಕ್ರಮವನ್ನು ಪ್ರಶ್ನಿಸಿ ನಾಗರಾಜು ಮತ್ತು ಅನುಮೊದನೆ ಪಡೆಯದೆ ಕಟ್ಟಡ ನಿರ್ಮಾಣ ಮಾಡಿರುವ ಕಟ್ಟಡವನ್ನು ನೆಲಸಮಗೊಳಿಸಬೇಕು ಎಂದು ಕೋರಿ ಕುಮಾರಿ ಕುಸುಮಾ ಮತ್ತಿತರರು ಹೈಕೋರ್ಟ್​ಗೆ ಹಲವು ಅರ್ಜಿಗಳನ್ನು ಸಲ್ಲಿಸಿದ್ದರು.

ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೊವಿಂದರಾಜು ಅವರಿದ್ದ ನ್ಯಾಯಪೀಠ, ರಾಜಧಾನಿ ಬೆಂಗಳೂರಿನಂತಹ ಮಹಾನಗರಗಳಲ್ಲಿನ ಭೂಮಿಯ ಮೌಲ್ಯವನ್ನು ಪರಿಗಣಿಸಿದರೆ 50 ಚದರ ಮೀಟರ್‌ಗಿಂತಲೂ ಕಡಿಮೆ ಅಳತೆಯ ನಿವೇಶನ ಖರೀದಿಸುವುದು ಅನೇಕರ ಕನಸಾಗಿರುತ್ತದೆ. ಜನರು ಇಡೀ ಜೀವಮಾನದಲ್ಲಿ ಉಳಿಸಿದ ಹಣದೊಂದಿಗೆ ಸಾಲ ಮಾಡಿ ಭೂಮಿ ಖರೀದಿಸಲು ಮುಂದಾಗುತ್ತಾರೆ. ಈ ರೀತಿಯ ಸಣ್ಣ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಲು ಅಗತ್ಯ ಮಾರ್ಗಸೂಚಿಗಳನ್ನು ರಚಿಸಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿದೆ. ಅಲ್ಲದೆ, ಈ ಸಂಬಂಧ ಅನುಪಾಲನಾ ವರದಿ ಸಲ್ಲಿಸಲು 2024ರ ಜನವರಿ 29ಕ್ಕೆ ನಿಗದಿಪಡಿಸಿದೆ.

ಬಿಬಿಎಂಪಿ ಬೈ-ಲಾದಂತೆ, ಖಾಸಗಿಯವರ ಮಾಲೀಕತ್ವದ ನಿವೇಶನಗಳಿಗೆ ಇದು ಅನ್ವಯಿಸುವುದಿಲ್ಲ. ಹೀಗಾಗಿ, 50 ಚದರ ಮೀಟರ್​ಗಿಂತಲೂ ಕಡಿಮೆ ಸುತ್ತಳತೆಯ ನಿವೇಶನಗಳಲ್ಲಿ ಕಟ್ಟಡ ಕಟ್ಟಲು ಅನುಮೋದನೆ ನೀಡುವುದಕ್ಕೆ ಅಡ್ಡಿಯಾಗುವುದಿಲ್ಲ. ಆದ್ದರಿಂದ ಹೇಗೆ ಮಾರ್ಗಸೂಚಿಗಳಿರಬೇಕು ಎಂಬುದರ ಕುರಿತು ನ್ಯಾಯಾಲಯ ನಿರ್ದೇಶನ ನೀಡಲು ಸಾಧ್ಯವಿಲ್ಲ. ಮಾರ್ಗಸೂಚಿಗಳು ಹೇಗಿರಬೇಕು ಎಂಬುದು ರಾಜ್ಯ ಸರ್ಕಾರದ ವಿವೇಚನೆಗೆ ಬಿಟ್ಟದ್ದು ಎಂದು ತಿಳಿಸಿದೆ.

ಕಡಿಮೆ ವಿಸ್ತೀರ್ಣವಿರುವ ಭೂ ಮಾಲೀಕರಿಗೆ ಮುಂದಿನ 6 ತಿಂಗಳಲ್ಲಿ ಬೈಲಾ ಅಥವಾ ನಗರಾಭಿವೃದ್ಧಿ ತರುವ ಮಾರ್ಗಸೂಚಿಗಳ ಅನುಗುಣವಾಗಿ ನಿರ್ಮಾಣ ಮಾಡಿದ್ದಲ್ಲಿ ಬಿಬಿಎಂಪಿ ಕಾಯಿದೆ ಸೆಕ್ಷನ್ 248ರ ಅಡಿಯಲ್ಲಿ ಅನುಮತಿಸಿ ನೀಡಬಹುದಾಗಿದೆ ಎಂದು ಪೀಠ ಹೇಳಿದೆ.

ಏನಿದು ಪ್ರಕರಣ?
2017ರಿಂದ 2023ರ ಅವಧಿಯಲ್ಲಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ 50 ಚದರ ಮೀಟರ್‌ಗಿಂತಲೂ ಕಡಿಮೆ ವಿಸ್ತೀರ್ಣದ ನಿವೇಶನದಲ್ಲಿ ಮನೆಗಳನ್ನು ನಿರ್ಮಿಸಿದ್ದವರಿಗೆ ಬಿಬಿಎಂಪಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಲು ನಿರಾಕರಿಸಿತ್ತು.

ಕಾನೂನುಬಾಹಿರವಾಗಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಅಂತಹ ಕಟ್ಟಡಗಳನ್ನು ನೆಲಸಮಗೊಳಿಸಲು ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಹಲವು ಸಾರ್ವಜನಿಕರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸಿದ ಕೋರ್ಟ್, ಮಾರ್ಗಸೂಚಿಗಳ ರಚನೆ ಮಾಡುವಂತೆ ನಗರಾಭಿವೃದ್ಧಿ ಇಲಾಖೆಗೆ ನಿರ್ದೇಶನ ನೀಡಿ ಅರ್ಜಿ ಇತ್ಯರ್ಥಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com