ಶಿವಮೊಗ್ಗ: 16 ವರ್ಷ ಊರಿನ ಸೇವೆ ಮಾಡಿದ ಶಿಕ್ಷಕನಿಗೆ ಗುರುದಕ್ಷಿಣೆಯಾಗಿ ಬೈಕ್ ನೀಡಿದ ಗ್ರಾಮಸ್ಥರು!

16 ವರ್ಷಗಳ ಕಾಲ ಊರಿನ ಸೇವೆ ಮಾಡಿದ ಶಿಕ್ಷಕರೊಬ್ಬರಿಗೆ ಗ್ರಾಮಸ್ಥರು ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ್ದಾರೆ.
ವಳೂರು ಗ್ರಾಮದ ನಿವಾಸಿಗಳು ಉಡುಗೊರೆಯಾಗಿ ನೀಡಿದ ಬೈಕ್‌ನೊಂದಿಗಿರುವ ಶಿಕ್ಷಕ ಸಂತೋಷ್.
ವಳೂರು ಗ್ರಾಮದ ನಿವಾಸಿಗಳು ಉಡುಗೊರೆಯಾಗಿ ನೀಡಿದ ಬೈಕ್‌ನೊಂದಿಗಿರುವ ಶಿಕ್ಷಕ ಸಂತೋಷ್.

ಶಿವಮೊಗ್ಗ: 16 ವರ್ಷಗಳ ಕಾಲ ಊರಿನ ಸೇವೆ ಮಾಡಿದ ಶಿಕ್ಷಕರೊಬ್ಬರಿಗೆ ಗ್ರಾಮಸ್ಥರು ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವಳೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂತೋಷ್ ಕಾಂಚನ್ ಎಂಬ ಶಿಕ್ಷಕ 16 ವರ್ಷಗಳಿಂದ ಕಾರ್ಯನಿರ್ವಹಿಸಿದ್ದರು. ಅವರ ಈ ಸೇವೆಗಾಗಿ ಗ್ರಾಮಸ್ಥರು ಗುರುದಕ್ಷಿಣೆಯಾಗಿ ಬೈಕ್ ನೀಡಿದ್ದಾರೆ.

ಈ‌ ಊರಿಂದ ಮುಖ್ಯರಸ್ತೆಗೆ ತಲುಪಬೇಕೆಂದರೆ 6-7 ಕಿಮೀ ಕಾಲ್ನಡಿಗೆಯಲ್ಲೇ ಬರಬೇಕಿತ್ತು. ಹೀಗಾಗಿ ಗ್ರಾಮದ ಸ್ಥಿತಿ‌ ಅರಿತ ಸಂತೋಷ್ ಅವರು ಈ ಹಿಂದೆ ವಿದ್ಯಾರ್ಥಿಗಳು ಹಾಗೂ ಊರಿನವರಿಗಾಗಿ ಬೈಕ್ ಖರೀದಿಸಿದ್ದರು.

ಈ ಬೈಕ್ ನಲ್ಲಿ ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ, ಊರಿನಲ್ಲಿ ಯಾರಾದರೂ ಅನಾರೋಗ್ಯಕ್ಕೀಡಾದರೆ ಸಹಾಯ ಮಾಡುತ್ತಿದ್ದರು. ಸಂತೋಷ್ ಅವರ ಈ ಬೈಕ್ ನ್ನು ಗ್ರಾಮಸ್ಥರು ವಳೂರು ಆ್ಯಂಬುಲೆನ್ಸ್ ಎಂದೂ ಹೆಸರಿಟ್ಟಿದ್ದರು.

ಅಂದ ಹಾಗೆ ವಳೂರು ಗ್ರಾಮದಲ್ಲಿರುವುದು ಒಟ್ಟು 100 ಜನ ಕಾಡುಕುಣಬಿ ಗ್ರಾಮಸ್ಥರು. ಕೊಡಚಾದ್ರಿ ತಟದಲ್ಲಿರುವ ವಳೂರಿಗೆ ಯಾವುದೇ ವಾಹನ ವ್ಯವಸ್ಥೆಯಿರಲಿಲ್ಲ. ಮುಖ್ಯರಸ್ತೆಗೆ ತಲುಪಬೇಕೆಂದರೆ 6-7 ಕಿಲೋ ಮೀಟರ್ ಕಾಲ್ನಡಿಗೆಯಲ್ಲೇ ಹೋಗಬೇಕಿತ್ತು.

ಈ ನಡುವೆ 2007ರಲ್ಲಿ ವಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರಾಗಿ ಸಂತೋಷ್ ಅವರು ನೇಮಕಗೊಂಡಿದ್ದರು. ಸಂತೋಷ್ ಅವರು ಭಾನುವಾರ ಕೂಡ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು, ಅಲ್ಲದೆ, ಗ್ರಾಮಸ್ಥರ ಕುರಿತು ಸಮರ್ಪಣಾ ಮನೋಭಾವ ಹೊಂದಿದ್ದರು. ಇದರಿಂದ ಗ್ರಾಮಸ್ಥರಿಗೆ ಬಹಳ ಪ್ರೀತಿಪಾತ್ರರಾಗಿದ್ದರು. ಈ ಪ್ರೀತಿಯಿಂದಲೇ ಸಂತೋಷ್ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಿ, ಬೈಕ್ ನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ಹಿಂದೆ ಗ್ರಾಮಕ್ಕೆ ವಿದ್ಯುತ್, ಮೊಬೈಲ್, ಸಾರಿಗೆ ಸಂಪರ್ಕ ಇರಲಿಲ್ಲ. 2012ರಲ್ಲಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. 10-12 ವರ್ಷಗಳಿಂದ ಮಕ್ಕಳಿಗೆ ಪಾಠ ಮಾಡಿದ್ದೇನೆ. ಇದು ಕುಗ್ರಾಮವಾಗಿದ್ದು, ಗ್ರಾಮದಲ್ಲಿ ಬಹಳ ಚಳಿ ಹಾಗೂ ಜಿಗಣೆಗಳ ಕಾಟವಿದೆ. ಇಲ್ಲಿನ ಜನರು ಆರ್ಥಿಕವಾಗಿ ಸದೃಢವಾಗಿಲ್ಲ. ಕುನಾಬಿ ಬುಡಕಟ್ಟಿಗೆ ಸೇರಿದವರಾಗಿದ್ದಾರೆ. ಮಧ್ಯಾಹ್ನ ಊಟ ಮುಗಿಸಿಕೊಂಡು ಮಕ್ಕಳು ಶಾಲೆಗೆ ಬರುತ್ತಿದ್ದರು. ಸಂಜೆ ವೇಳೆ ನಾನು ಪಾಠ ಮಾಡುತ್ತಿದ್ದೆ. ಇಲ್ಲಿನ ಮಕ್ಕಳು ಸಾಕಷ್ಟು ಬುದ್ಧಿವಂತರು, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.

ಸ್ಫರ್ಧೆಗಳಲ್ಲಿ ಭಾಗವಹಿಸಲು ಶಿವಮೊಗ್ಗಕ್ಕೆ ತೆರಳಬೇಕಾದರೆ, ದಟ್ಟ ಅರಣ್ಯದಲ್ಲಿ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇತ್ತು. ಹೀಗಾಗಿ ನಾನು ಬೈಕ್ ಖರೀದಿ ಮಾಡಿದ್ದೆ. ಗ್ರಾಮದಲ್ಲಿ ಬೇರೆ ಯಾರ ಬಳಿಯೂ ಬೈಕ್ ಇಲ್ಲ. ಅವರಿಗೆ ಖರೀದಿಸಲು ಸಾಧ್ಯವೂ ಇಲ್ಲ. ನನ್ನ ಸೇವೆಯನ್ನು ಗ್ರಾಮಸ್ಥರು ಸ್ಮರಿಸಿದ್ದಾರೆ. ಹೀಗಾಗಿ ನನಗೆ ಬೈಕ್ ನೀಡಿದ್ದಾರೆಂದು ಸಂತೋಷ್ ಅವರು ಹೇಳಿದ್ದಾರೆ.

ಈ ಗ್ರಾಮಸ್ಥರು ಅರಣ್ಯ ಆಧಾರಿತ ಉತ್ಪನ್ನಗಳ ಮೇಲೆ ಅವಲಂಬಿತರಾಗಿದ್ದಾರೆ. ಬೀಳ್ಕೊಡುಗೆ ಕಾರ್ಯಕ್ರಮ ಬೇಡ ಎಂದು ಹೇಳಿದ್ದೆ. ಆದರೆ, ಅದನ್ನು ಅವರು ಒಪ್ಪದೆ ಕಾರ್ಯಕ್ರಮ ಆಯೋಜಿಸಿ, ಆಹ್ವಾನ ನೀಡಿದ್ದರು. ನನಗೆ ಬೈಕ್ ಕೊಡುತ್ತಾರೆಂದು ನಿರೀಕ್ಷಿಸಿರಲಿಲ್ಲ. ಅವರ ಪ್ರೀತಿ ಹಾಗೂ ವಾತ್ಸಲ್ಯಕ್ಕೆ ನಾನು ಎಂದಿಗೂ ಚಿರಋಣಿ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com