KSDL ವಿಕ್ರಮ: ಒಂದೇ ಬಾರಿಗೆ 21 ನೂತನ ಉತ್ಪನ್ನಗಳು ಮಾರುಕಟ್ಟೆಗೆ ಬಿಡುಗಡೆ, ಸಿಎಂ ಸಿದ್ದರಾಮಯ್ಯ ಮೆಚ್ಚುಗೆ

ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು (KSDL) ಉತ್ಪಾದಿಸಿರುವ 21 ನೂತನ ಉತ್ಪನ್ನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದರು.
ಸಿಎಂ ಸಿದ್ದರಾಮಯ್ಯ, ಎಂಬಿ ಪಾಟೀಲ್ ಮತ್ತಿತರರು
ಸಿಎಂ ಸಿದ್ದರಾಮಯ್ಯ, ಎಂಬಿ ಪಾಟೀಲ್ ಮತ್ತಿತರರು

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು (KSDL) ಉತ್ಪಾದಿಸಿರುವ 21 ನೂತನ ಉತ್ಪನ್ನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಈ ಉತ್ಪನ್ನಗಳಲ್ಲಿ ಮೈಸೂರು ಸ್ಯಾಂಡಲ್ ವೇವ್ಸ್ ಶ್ರೇಣಿಯ 10 ಬಗೆಯ ಪ್ರೀಮಿಯಂ ಮೈಸೂರು ಸ್ಯಾಂಡಲ್ ಸಾಬೂನುಗಳು, 3 ಬಗೆಯ ಶವರ್ ಜೆಲ್, 6 ತರಹದ ಸೋಪ್ ಕಿಟ್, ಹ್ಯಾಂಡ್ ವಾಶ್ ಮತ್ತು ಕುಡಿಯುವ ನೀರು ಸೇರಿವೆ.

ಬಳಿಕ ಮಾತನಾಡಿದ ಮುಖ್ಯಮಂತ್ರಿ, 107 ವರ್ಷಗಳ ಇತಿಹಾಸ ಹೊಂದಿರುವ ಕೆಎಸ್ಡಿಎಲ್, ಒಂದೇ ಬಾರಿಗೆ 21 ಉತ್ಪನ್ನಗಳನ್ನು ಬಿಡುಗಡೆ ಮಾಡಿರುವುದು ಇದೇ ಮೊದಲ ಬಾರಿಯಾಗಿದೆ. ಸಂಸ್ಥೆಯು ಈಗಿನ ತಲೆಮಾರಿನ ಯುವಜನರ ನಿರೀಕ್ಷೆಗೆ ತಕ್ಕಂತೆ ಶವರ್ ಜೆಲ್ ಸೇರಿದಂತೆ ಬಗೆಬಗೆಯ ಉತ್ಪನ್ನಗಳನ್ನು ಉತ್ಪಾದಿಸಲು ಮುಂದಾಗಿರುವುದು ಶ್ಲಾಘನೀಯ ಸಂಗತಿಯಾಗಿದೆ. ಇದರ ಜೊತೆಗೆ ಗುಣಮಟ್ಟಕ್ಕೆ ಆದ್ಯತೆ ಮುಂದುವರಿಯಬೇಕು ಎಂದರು.

ಹಿಂದಿನ ಸಾಲಿನಲ್ಲಿ ಸಂಸ್ಥೆಯು 132 ಕೋಟಿ ರೂ. ಲಾಭ ಮಾಡಿತ್ತು. ಎಂಬಿ ಪಾಟೀಲರು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಮೇಲೆ, ಕಳೆದ ಎಂಟು ತಿಂಗಳಲ್ಲಿ ಲಾಭವು 182 ಕೋಟಿ ರೂ.ಗಳಿಗೇರಿದೆ. ಮುಂಬರುವ ದಿನಗಳಲ್ಲಿ ಸಂಸ್ಥೆಯ ಉತ್ಪಾದನಾ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಲು ಅವರು ಹಲವು ಮಹತ್ವಾಕಾಂಕ್ಷಿ ಉಪಕ್ರಮಗಳನ್ನು ಕೈಗೊಂಡಿರುವುದು ಸ್ತುತ್ಯರ್ಹ ಸಂಗತಿಯಾಗಿದೆ ಎಂದು ಅವರು ಸಚಿವರ ಬೆನ್ನುತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಹೈದರಾಬಾದಿನಲ್ಲಿ ನಕಲಿ ಮೈಸೂರು ಸ್ಯಾಂಡಲ್ ಸೋಪು ತಯಾರಿಸುತ್ತಿದ್ದ ಘಟಕದ ಮೇಲೆ ದಾಳಿ ಮಾಡಿ, ಇಬ್ಬರನ್ನು ಬಂಧಿಸಿ, ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ. ಉತ್ಕೃಷ್ಟ ಗುಣಮಟ್ಟಕ್ಕೆ ಹೆಸರಾಗಿರುವ ಕೆಎಸ್ಡಿಎಲ್ ಉತ್ಪನ್ನಗಳು ನಕಲಾಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿರುವ ಸಚಿವರನ್ನು ಮುಖ್ಯಮಂತ್ರಿ ಶ್ಲಾಘಿಸಿದರು.

ಸಂಸ್ಥೆಯ ವಹಿವಾಟು 3,000 ಕೋಟಿ ಗುರಿ:

KSDL ಅಧ್ಯಕ್ಷರು ಆಗಿರುವ ಸಚಿವ ಎಂ ಬಿ ಪಾಟೀಲ ಮಾತನಾಡಿ, ಸಂಸ್ಥೆಯ ವಹಿವಾಟು ಸದ್ಯಕ್ಕೆ 1,400 ಕೋಟಿ ರೂ.ಗಳ ಆಚೀಚೆ ಇದೆ. ಇದನ್ನು ಎರಡು ವರ್ಷಗಳಲ್ಲಿ 3,000 ಕೋಟಿ ರೂ.ಗಳಾಗುವಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉತ್ಪಾದನೆಯ ಪ್ರಮಾಣವು ಇತ್ತೀಚೆಗೆ ಶೇ.25ರಷ್ಟು ಹೆಚ್ಚಾಗಿದೆ ಎಂದರು.

ಕಳೆದ ಎಂಟು ತಿಂಗಳಲ್ಲಿ ಸಂಶೋಧನೆ ನಡೆಸಿ, ದಾಖಲೆಯ ಕ್ಷಿಪ್ರ ಅವಧಿಯಲ್ಲಿ ಹೊಸ ಉತ್ಪನ್ನಗಳನ್ನು ಹೊರತರಲಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆಯ ತಾಂತ್ರಿಕ ಸಮಾಲೋಚಕ ರಜನೀಕಾಂತ್ ಅವರ ನೆರವು ನಿರ್ಣಾಯಕವಾಗಿದೆ. ಜೊತೆಗೆ, ಪಾರದರ್ಶಕ ಸಾಬೂನುಗಳು ಮತ್ತು ಸುಗಂಧಭರಿತ ಉತ್ಪನ್ನಗಳ ತಯಾರಿಕೆ ಕೂಡ ಸದ್ಯದಲ್ಲೇ ಆರಂಭವಾಗಲಿದೆ ಎಂದು ಅವರು ನುಡಿದರು.

ಸಂಸ್ಥೆಯ ಉತ್ಪನ್ನಗಳ ನಕಲನ್ನು ತಡೆಯಲು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ. ಜೊತೆಗೆ ಅಮೆರಿಕ, ಯೂರೋಪು ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕೆಎಸ್ಡಿಎಲ್ ಉತ್ಪನ್ನಗಳಿಗೆ ಬೇಡಿಕೆ ಇದ್ದು, ಅಂತಾರಾಷ್ಟ್ರೀಯ ವಹಿವಾಟನ್ನು ಸದ್ಯದ 19 ಕೋಟಿ ರೂ.ಗಳಿಂದ 25 ಕೋಟಿ ರೂ.ಗಳಿಗೆ ಈ ವರ್ಷವೇ ಹೆಚ್ಚಿಸಿಕೊಳ್ಳುವ ಗುರಿ ಇಟ್ಟುಕೊಳ್ಳಲಾಗಿದೆ. ಜತೆಗೆ ಇಡೀ ಭಾರತದಲ್ಲಿ ಸಂಸ್ಥೆಯ ಮಾರುಕಟ್ಟೆ ಜಾಲವನ್ನು ಬೆಳೆಸಲಾಗುವುದು ಎಂದು ಅವರು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com