ಪಿಎಸ್‌ಐ ಹಗರಣ: ರಾಜ್ಯ ಸರ್ಕಾರಕ್ಕೆ ತನಿಖಾ ಸಮಿತಿ ವರದಿ ಸಲ್ಲಿಕೆ

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದ ತನಿಖೆಗಾಗಿ ರಚಿಸಲಾಗಿರುವ ನ್ಯಾಯಮೂರ್ತಿ ಬಿ ವೀರಪ್ಪ ಸಮಿತಿಯು ಸೋಮವಾರ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದ್ದು, ಸಿಐಡಿಗೆ ಹೆಚ್ಚಿನ ತನಿಖೆಗೆ ಶಿಫಾರಸು ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದ ತನಿಖೆಗಾಗಿ ರಚಿಸಲಾಗಿರುವ ನ್ಯಾಯಮೂರ್ತಿ ಬಿ ವೀರಪ್ಪ ಸಮಿತಿಯು ಸೋಮವಾರ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದ್ದು, ಸಿಐಡಿಗೆ ಹೆಚ್ಚಿನ ತನಿಖೆಗೆ ಶಿಫಾರಸು ಮಾಡಿದೆ.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯಾಗಿರುವ ನ್ಯಾಯಮೂರ್ತಿ ವೀರಪ್ಪ ಅವರು 471 ಪುಟಗಳ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು. ವರದಿಯಲ್ಲಿ ಪೊಲೀಸರು ಮತ್ತು ಜನಪ್ರತಿನಿಧಿಗಳ ಗಂಭೀರ ಲೋಪವನ್ನು ಎತ್ತಿ ತೋರಿಸಿದ್ದಾರೆ. ವರದಿಯಲ್ಲಿ ಯಾವುದೇ ಜನಪ್ರತಿನಿಧಿಗಳ  ಹೆಸರು ಪ್ರಸ್ತಾಪವಾಗಿದೆಯೇ ಎಂಬುದು ವಿಧಾನಮಂಡಲದಲ್ಲಿ ಚರ್ಚೆಗೆ ಬಂದ ನಂತರ ತಿಳಿಯಲಿದೆ.

ವರದಿಯನ್ನು ಸಂಪುಟದ ಮುಂದೆ ಚರ್ಚಿಸಿ, ಮುಂದಿನ ಕ್ರಮಕ್ಕೆ ಅನುಮತಿ ಪಡೆಯಲು ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಮಂಡಿಸಲಾಗುವುದು. ಇದು ಸ್ವತಂತ್ರ ನ್ಯಾಯಾಂಗ ಆಯೋಗದಿಂದ ತನಿಖೆಗೆ ಒಳಪಡುವ ಕ್ರಿಮಿನಲ್ ಅಪರಾಧವಾಗಿರುವುದರಿಂದ ವರದಿಯೇ ಅಂತಿಮವಾಗಿದೆ ಮತ್ತು ಇನ್ನೊಂದು ಪ್ರಾಸಿಕ್ಯೂಷನ್ ಆಯೋಗವನ್ನು ಸ್ಥಾಪಿಸುವ ಅಗತ್ಯವಿಲ್ಲ. ವರದಿಯ ಆವಿಷ್ಕಾರಗಳ ಮೇಲೆ ಸಿಐಡಿ ಈಗ ನ್ಯಾಯಾಲಯದ ಮುಂದೆ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಬೇಕಾಗಿದೆ.

ಜುಲೈ 2023 ರಲ್ಲಿ ರಚನೆಗೊಂಡ ಸಮಿತಿ 324 ದಾಖಲೆಗಳನ್ನು ಪತ್ತೆ ಹಚ್ಚಿದ್ದು, 28 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿದೆ ಮತ್ತು ಪೊಲೀಸರು ಸಲ್ಲಿಸಿದ 16 ವರದಿಗಳಲ್ಲಿ ಉಲ್ಲೇಖಿಸಲಾದ 117 ಆರೋಪಿಗಳನ್ನು ದೃಢೀಕರಿಸಿದೆ. ಹಗರಣದಲ್ಲಿ ಬಂಧಿತರಾಗಿದ್ದ ಅಂದಿನ ಎಡಿಜಿಪಿ (ನೇಮಕಾತಿ) ಅಮೃತ್ ಪಾಲ್ ಅವರ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲಿಸಬೇಕಿತ್ತು .ಇದರಿಂದ  ಇನ್ನಷ್ಟು ಮತ್ತಷ್ಟು ಮಂದಿ ಹೊರಗೆ ಬರುತ್ತಾರೆ ಎಂದು ತಜ್ಞರು ಪ್ರತಿಕ್ರಿಯಿಸಿದ್ದಾರೆ.

ಈ ಹಗರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಸಿಲುಕಿಸಲು ಕಾಂಗ್ರೆಸ್ ಮತ್ತು ಸರ್ಕಾರದೊಳಗಿನ ಕೆಲವು ನಾಯಕರು ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಅಮೃತ್ ಪಾಲ್ ಸೇರಿದಂತೆ 110 ಆರೋಪಿಗಳ ವಿರುದ್ಧ ಸಿಐಡಿ ಎಫ್‌ಐಆರ್ ದಾಖಲಿಸಿದೆ. 52 ಅಭ್ಯರ್ಥಿಗಳ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಭವಿಷ್ಯದಲ್ಲಿ ಯಾವುದೇ ಪರೀಕ್ಷೆಗೆ ಹಾಜರಾಗದಂತೆ ನಿರ್ಬಂಧ ಹೇರಲಾಗಿದೆ.

ಜನವರಿ 21, 2021 ರಂದು 545 PSI (ಸಿವಿಲ್) ನೇಮಕಾತಿಗೆ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿತು ಮತ್ತು 54,103 ಅಭ್ಯರ್ಥಿಗಳು ಅಕ್ಟೋಬರ್ 3, 2021 ರಂದು ನಡೆದ ಲಿಖಿತ ಪರೀಕ್ಷೆಗಳಿಗೆ ಹಾಜರಾಗಿದ್ದರು. ಇಂದು ಮರು ಪರೀಕ್ಷೆ. ಮರುಪರೀಕ್ಷೆ ನಡೆಸಲು ಸರಕಾರ ಮುಂದಾಗಿತ್ತು ಆದರೆ ಕೆಲವು ಅಭ್ಯರ್ಥಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರಿಂದ ಅದನ್ನು ಮುಂದೂಡಲಾಗಿತ್ತು. ಇದೀಗ ಮಂಗಳವಾರ ಪರೀಕ್ಷೆ ನಡೆಯಲಿದ್ದು, 55,000 ಅಭ್ಯರ್ಥಿಗಳು ದಾಖಲಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com