ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮೇಕೆದಾಟು ಯೋಜನೆ ಪೂರ್ಣ: ಡಿಸಿಎಂ ಡಿಕೆ ಶಿವಕುಮಾರ್

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮೇಕೆದಾಟು ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಬುಧವಾರ ಹೇಳಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮೇಕೆದಾಟು ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಬುಧವಾರ ಹೇಳಿದರು.

ಪಿರಿಯಾಪಟ್ಟಣ ತಾಲ್ಲೂಕಿನ 79 ಗ್ರಾಮಗಳ 150 ಕೆರೆಗಳಿಗೆ ಕಾವೇರಿ ನೀರು ತುಂಬಿಸುವ ಮುತ್ತಿನಮುಳುಸೋಗೆ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮೇಕೆದಾಟು ಬಗ್ಗೆ ಕಾಂಗ್ರೆಸ್ ಸರ್ಕಾರ ಚಿಂತನೆ ಮಾಡುತ್ತಿಲ್ಲ ಎಂದು ಮಾಜಿ ಪ್ರಧಾನಿಗಳಾದ ದೇವೇಗೌಡರು ಹೇಳಿದ್ದಾರೆ. ದೇವೇಗೌಡರೇ ನೀವು ಮತ್ತು ಪ್ರಧಾನಿ ಮೋದಿ ಅವರು ಆತ್ಮೀಯರಿದ್ದೀರಿ, ಅವರ ಬಳಿ ಮಾತನಾಡಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ” ಎಂದು ಹೇಳಿದರು.

ಕಾವೇರಿ ನದಿ ನಮ್ಮ ತಾಯಿ, ಈ ತಾಯಿಯ ಕೃಪೆಯಿಂದ ನಾವೆಲ್ಲಾ ಬದುಕಿದ್ದೇವೆ. ಆದರೂ ಈ ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ 26 ಜನ ಬಿಜೆಪಿ ಎಂಪಿಗಳು ರಾಜ್ಯದ ಪರವಾಗಿ ಮಾತನಾಡುತ್ತಿಲ್ಲ. ಪ್ರತಾಪ್ ಸಿಂಹ ಅವರು ಪ್ರಧಾನಿಗಳಿಗೆ ಹೇಳಿ ಅನುಮತಿ ಕೊಡಿಸಬಹುದಲ್ಲವೇ? ಆದರೂ ಯಾರೂ ದನಿ ಎತ್ತುತ್ತಿಲ್ಲ ಎಂದು ತಿಳಿಸಿದರು.

“ಮೇಕೆದಾಟು ಯೋಜನೆಯಿಂದ ಮುಳುಗಡೆಯಾಗುವ ಅರಣ್ಯ ಪ್ರದೇಶಗಳ ಬದಲಾಗಿ ಕಂದಾಯ ಭೂಮಿಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗುವುದು. ಚಾಮರಾಜನಗರ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ ಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಮರಗಳ ಎಣಿಕೆ ಕಾರ್ಯಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ಹೇಳಿದರು.

“2018 ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲೇ ಗುದ್ದಲಿಪೂಜೆಯಾದ ಮುತ್ತಿನಮುಳುಸೋಗೆ ಏತ ನೀರಾವರಿ ಯೋಜನೆ ನಮ್ಮಿಂದಲೇ ಉದ್ಘಾಟನೆಯಾಗುತ್ತಿದೆ. ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿ ಮಾಡಿದ ಕಾಂಗ್ರೆಸ್ ಸದಾ ರೈತಪರವಾಗಿ ಕೆಲಸ ಮಾಡುತ್ತದೆ. ರೈತನಿಗೆ ಸಂಬಳ, ವರ್ಗಾವಣೆ, ಬಡ್ತಿ, ನಿವೃತ್ತಿ, ಪಿಂಚಣಿ ಸೇರಿದಂತೆ ಯಾವ ಸೌಲಭ್ಯವೂ ಇಲ್ಲ. ಆದ ಕಾರಣ ಎಲ್ಲಾ ಸರ್ಕಾರಗಳು ರೈತರ ಪರ ನಿಲ್ಲಬೇಕು.

ರೈತರ ಏಳಿಗೆಗೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಾನು, ಎಚ್.ಸಿ.ಮಹದೇವಪ್ಪ, ಬೋಸರಾಜು ಸೇರಿದಂತೆ ಎಲ್ಲರೂ ಶ್ರಮಿಸುತ್ತೇವೆ. ರೈತರ ಬೆನ್ನಿಗೆ ನಿಲ್ಲಲು ಸಚಿವರಾದ ವೆಂಕಟೇಶ್ ಅವರು ಅನೇಕ ಪ್ರಸ್ತಾವನೆಗಳನ್ನು ಸಲ್ಲಿಸಿದ್ದಾರೆ. ರೈತರ ಏಳ್ಗೆಗೆ, ಪಿರಿಯಾಪಟ್ಟಣ ಭಾಗದ ನೀರಿನ ಬವಣೆ ನಿವಾರಣೆಗೆ ನಮ್ಮ ಸರ್ಕಾರ  ಬದ್ಧವಾಗಿದೆ ಎಂದರು.

ಕಳೆದ 40 ವರ್ಷಗಳಲ್ಲೇ ಅತ್ಯಂತ ಹೆಚ್ಚು ಬಹುಮತವನ್ನು ಕರ್ನಾಟಕದ ಜನ ನೀಡಿದ್ದಾರೆ. ಮೈಸೂರು ಭಾಗದಲ್ಲೂ ನಮ್ಮ ಪಕ್ಷ ಉತ್ತಮ ಸಾಧನೆ ಮಾಡಿದೆ. 136 ಜನ ಶಾಸಕರನ್ನು, ಇಲ್ಲಿನ ಶಾಸಕ ವೆಂಕಟೇಶ್ ಅವರನ್ನು ಆಯ್ಕೆ ಮಾಡಿದ ಪಿರಿಯಾಪಟ್ಟಣ ಮತ್ತು ಕರ್ನಾಟಕದ ಜನತೆಗೆ ಋಣಿಯಾಗಿರುತ್ತೇವೆ.

ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಬಿಜೆಪಿ- ಜನತಾ ದಳದವರು ಏನು ಬೇಕಾದರೂ ಮಾತನಾಡಲಿ. ಏಕೆಂದರೆ ಎರಡೂ ಪಕ್ಷಗಳು ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು, ನಮ್ಮ ಶಕ್ತಿ ನೋಡಿ ಕಮಲ ಉದುರಿ ಹೋಯಿತು, ಮಹಿಳೆ ತೆನೆ ಎಸೆದು ಹೋದಳು. ಅದಕ್ಕೆ ದಳದವರ ಜೊತೆ ಬಿಜೆಪಿಯವರು ಸೇರಿಕೊಂಡಿದ್ದಾರೆ. ಜನತಾದಳದವರು ಬಿಜೆಪಿಯ ವಕ್ತಾರರಾಗಿದ್ದಾರೆ ಎಂದರು.

ನಮ್ಮ ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ಸಮೃದ್ಧವಾಗಿದೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ನೋಡಿ ಪ್ರಧಾನಿ ಮೋದಿ ಅವರೇ ʼಮೋದಿ ಗ್ಯಾರಂಟಿʼ ಎಂದು ಜಾಹೀರಾತು ನೀಡುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುತ್ತಿದ್ದವರು, ದಿವಾಳಿಯಾಗುತ್ತದೆ ಎಂದು ಹೇಳುತ್ತಿದ್ದವರೇ ಈಗ ಗ್ಯಾರಂಟಿ ಯೋಜನೆಗಳ ಹಿಂದೆ ಬಿದ್ದಿದ್ದಾರೆ. ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ, ಉಚಿತ ವಿದ್ಯುತ್ ಗೃಹಜ್ಯೋತಿ ಯೋಜನೆ ಪ್ರತಿಯೊಬ್ಬರ ಮನೆ ತಲುಪಿದೆ. 1.4 ಕೋಟಿ ಮಹಿಳೆಯರ ಖಾತೆಗೆ ಲಕ್ಷ್ಮಿ ತಲುಪಿದ್ದಾಳೆ. ಯುವನಿಧಿ ಮೂಲಕ ಯುವ ಸಮುದಾಯಕ್ಕೆ ಆತ್ಮವಿಶ್ವಾಸ ತುಂಬುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳಿಂದ ಜನರ ಬದುಕಿನಲ್ಲಿ ಬದಲಾವಣೆ ಆಗುತ್ತಿದೆ ಎಂದರು.

ನಮಗೆ ಭಾವನೆಗಳಿಗಿಂತ ಜನರಿಗೆ ಬದುಕು ಮುಖ್ಯ. ಕೆಲವೊಬ್ಬರು ಭಾವನೆಯ ಮೇಲೆ ರಾಜಕೀಯ ಮಾಡಲು ಹೊರಟಿದ್ದಾರೆ. ನಾವೇನೂ ಹಿಂದೂಗಳಲ್ಲವೇ, ಆಂಜನೇಯ ನಮ್ಮ ದೇವರಲ್ಲವೇ?, ನಮಗೆಲ್ಲಾ ದೇವರ ಮೇಲೆ ನಂಬಿಕೆ ಇಲ್ಲವೇ? ಸಿದ್ದರಾಮಯ್ಯ ಅವರ ಹೆಸರಿನಲ್ಲಿ ರಾಮನಿದ್ದಾನೆ, ನನ್ನ ಹೆಸರಿನಲ್ಲಿ ಶಿವ, ವೆಂಕಟೇಶ್ ಅವರ ಹೆಸರಿನಲ್ಲಿ ವೆಂಕಟೇಶ, ಶಿವನ ಅವತಾರ ಮಹದೇವನ ಹೆಸರಿನ ಹೆಚ್.ಸಿ. ಮಹದೇವಪ್ಪ ಇಲ್ಲವೇ?, ನಾವೇನೂ ಹಿಂದೂಗಳಲ್ಲವೇ? ನಮ್ಮೆಲ್ಲರ ಬದುಕಿಗೆ ನಮ್ಮದೇ ಆದ ವಿಚಾರ ಇರುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com