ಲೋಕಸಭಾ ಚುನಾವಣೆಗೆ ಸಿದ್ಧತೆ: ಇಂದು ಮಹತ್ವದ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸಭೆ, ಕಾಂಗ್ರೆಸ್ ವಿರುದ್ಧ ರಣತಂತ್ರ ರೂಪಿಸಲು ಅಖಾಡಕ್ಕಿಳಿದ ಬಿ.ವೈ.ವಿಜಯೇಂದ್ರ

ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ ರಾಜ್ಯ ಪದಾಧಿಕಾರಿಗಳ ತಂಡ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ರಾಜ್ಯ ಬಿಜೆಪಿಯ ಕಾರ್ಯಕಾರಿಣಿ ಸಭೆ ಶನಿವಾರ ನಡೆಯಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ ರಾಜ್ಯ ಪದಾಧಿಕಾರಿಗಳ ತಂಡ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ರಾಜ್ಯ ಬಿಜೆಪಿಯ ಕಾರ್ಯಕಾರಿಣಿ ಸಭೆ ಶನಿವಾರ ನಡೆಯಲಿದೆ.

ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯುವ ಕಾರ್ಯಕಾರಿಣಿ ಸಭೆಯಲ್ಲಿ 900ಕ್ಕೂ ಹೆಚ್ಚು ಆಹ್ವಾನಿತರು ಭಾಗವಹಿಸಲಿದ್ದಾರೆಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಹೇಳಿದ್ದಾರೆ.

ಶುಕ್ರವಾರ ಕಾರ್ಯಾಕಾರಿಣಿ ನಡೆಯುವ ಸ್ಥಳದಲ್ಲಿನ ಸಿದ್ಧತೆಗಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಚಟುವಟಿಕೆ ಜೊತೆಗೆ ನಮ್ಮ ಮುಂದಿನ ಕಾರ್ಯ ಯೋಜನೆ ಕುರಿತು ಸಭಯಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಿದರು.

ರಾಜ್ಯದಲ್ಲಿರುವ ಬಡವರು, ರೈತರು ಮತ್ತು ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಗಳನ್ನು ಕೈಗೆತ್ತಿಕೊಳ್ಳಬೇಕು. ಬಡವರ ವಿರೋಧಿ ಸರ್ಕಾರದ ಬಗ್ಗೆ ಸತ್ಯಾಂಶಗಳನ್ನು ತಲುಪಿಸಬೇಕು ಎಂದು ಉಧ್ದೇಶಿಸಿದ್ದೇವೆಂದು ತಿಳಿಸಿದರು.

ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದ ಕಾರ್ಯಕ್ರಮಗಳಿಂದ ದೇಶಾದ್ಯಂತ ಜನತೆ ಮೋದಿಜೀ ಪರವಾಗಿದ್ದಾರೆ. ಕೇಂದ್ರದ ಯೋಜನೆಗಳನ್ನು ಮನೆಮನೆಗೆ ತಲುಪಿಸಲು ಉದ್ದೇಶಿಸಲಾಗಿದೆ. ಮೋದಿ ಅವರ ಜನಪ್ರಿಯತೆಯನ್ನು ಮತವನ್ನಾಗಿ ಪರಿವರ್ತಿಸಿ ಕರ್ನಾಟಕವು ದಕ್ಷಿಣ ಭಾರತ ಬಿಜೆಪಿ ಹೆಬ್ಬಾಗಿಲು ಎಂದು ಸಾಬೀತು ಪಡಿಸುತ್ತೇವೆ. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ ಎಂದರು.

ಎಲ್ಲಾ ವಿಷಯಗಳ ಸಮಾಲೋಚನೆ ಮಾಡಿ, ಮುಂದಿನ ಲೋಕಸಭಾ ಚುನಾವಣೆಗೆ ಬೇಕಾದ ಕಾರ್ಯತಂತ್ರವನ್ನು, ಕಾರ್ಯಕ್ರಮಗಳನ್ನು ರೂಪಿಸುತ್ತೇವೆ ಎಂದು ಪ್ರಕಟಿಸಿದರು. ಕೇಂದ್ರ ಸಚಿವ ಭೂಪೇಂದ್ರ ಯಾದವ್ ಜೀ ಅವರು ನಾಳೆ ಕಾರ್ಯಕಾರಿಣಿ ಉದ್ಘಾಟಿಸುತ್ತಾರೆ. ಪಕ್ಷದ ಎಲ್ಲಾ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳು ವೇದಿಕೆ ಮೇಲೆ ಇರುತ್ತಾರೆ. ಅವರ ಮಾರ್ಗದರ್ಶನದಲ್ಲಿ ಪಕ್ಷ ಮುನ್ನಡೆಸುವ ಕುರಿತು ಚರ್ಚಿಸುತ್ತೇವೆ ಎಂದು ಹೇಳಿದರು.

28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿ ಇದೆ. ರಾಜ್ಯದಾದ್ಯಂತ ನರೇಂದ್ರ ಮೋದಿಜೀ ಅವರ ಪರವಾದ ಅಲೆ ಇದೆ. ಹಾಗಾಗಿ ಈ ವಿಚಾರದಲ್ಲಿ ನನಗೆ ವಿಶ್ವಾಸ ಇದೆ. ಮೋದಿಜೀ ಅವರ ನಾಯಕತ್ವ ಮತ್ತು ಬಿಜೆಪಿ ತತ್ವ, ಸಿದ್ಧಾಂತ ಒಪ್ಪಿ ಬರುವ ಯಾವುದೇ ನಾಯಕರನ್ನು ಪಕ್ಷಕ್ಕೆ ಸ್ವಾಗತ ಮಾಡುತ್ತೇವೆ ಎಂದರು.

ಜಗದೀಶ್ ಶೆಟ್ಟರ್ ಅವರ ಮನಸ್ಸು ಬಿಜೆಪಿಯಲ್ಲೇ ಇತ್ತು. ಮೋದಿಜೀ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ಅಪೇಕ್ಷೆಯೂ ಇತ್ತು. ಅಪೇಕ್ಷೆಗೆ ತಕ್ಕಂತೆ ಉತ್ತಮ ನಿರ್ಧಾರ ಮಾಡಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ ಎಂಬ ಕುರಿತು ಕೇಂದ್ರದ ವರಿಷ್ಠರು ನಿರ್ಧಾರ ಮಾಡುತ್ತಾರೆ. ಪಕ್ಷದ ಕಾರ್ಯಕರ್ತರ ನಿರೀಕ್ಷೆಗೆ ಅನುಗುಣವಾಗಿ ಈ ನಿರ್ಧಾರ ಇರಲಿದೆ ಎಂದು ತಿಳಿಸಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com