ವಿಜಯಪುರ ಜೈಲಿನಲ್ಲಿ ಶ್ರೀರಾಮೋತ್ಸವ: ಕೈದಿಗಳ ನಡುವೆ ಮಾರಾಮಾರಿ, ವಿವಾದ ಸೃಷ್ಟಿ

ಕಾರಾಗೃಹದಲ್ಲಿ ಶ್ರೀರಾಮೋತ್ಸವ ಮಾಡಿದ್ದಕ್ಕೆ ಕೈದಿಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ವಿಜಯಪುರದಲ್ಲಿ ನಡೆದಿದ್ದು, ಘಟನೆ ಕುರಿತು ಕೈದಿ ಹಂಚಿಕೊಂಡಿರುವ ವಿಡಿಯೋವೊಂದು ವಿವಾದ ಸೃಷ್ಟಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಿಜಯಪುರ: ಕಾರಾಗೃಹದಲ್ಲಿ ಶ್ರೀರಾಮೋತ್ಸವ ಮಾಡಿದ್ದಕ್ಕೆ ಕೈದಿಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ವಿಜಯಪುರದಲ್ಲಿ ನಡೆದಿದ್ದು, ಘಟನೆ ಕುರಿತು ಕೈದಿ ಹಂಚಿಕೊಂಡಿರುವ ವಿಡಿಯೋವೊಂದು ವಿವಾದ ಸೃಷ್ಟಿಸಿದೆ.

ಘಟನೆಯ ಸಂಬಂಧ ಮಹಾರಾಷ್ಟ್ರ ಮೂಲದ ಪರಮೇಶ್ವರ ಎಂಬ ಆರೋಪಿ ವಿಡಿಯೋ ಬಿಡುಗಡೆ ಮಾಡಿದ್ದು, ಈ ವಿಡಿಯೋ ವಿವಾದ ಸೃಷ್ಟಿಸಿದೆ.

ಕಳೆದ 22 ರಂದು ರಾಮನ ಪೂಜೆಗೆ ಜೈಲು ಅಧಿಕಾರಿಗಳಿಗೆ ಅನುಮತಿಗಾಗಿ ಮನವಿ ಮಾಡಿದ್ದೆವು. ಆದರೆ, ಅಧಿಕಾರಿಗಳು ಅನುಮತಿ‌ ನೀಡಿರಲಿಲ್ಲ. ಆದರೂ ಜನವರಿ 22 ರಂದು ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ರಾಮನ ಪೂಜೆ ಮಾಡಿ ಪ್ರಸಾದ ಹಂಚಿದ್ದೆವು. ಅದಾದ ಮೇಲೆ ಜನವರಿ 23 ರಂದು ಸಹಾಯಕ ಜೈಲು ಅಧೀಕ್ಷಕ ಚೌಧರಿ ತಮ್ಮ ಚೇಂಬರ್ ಗೆ ನನ್ನನ್ನು ಹಾಗೂ ನನ್ನ ಜೊತೆಗೆ ಪೂಜೆ ಮಾಡಿದ ಇನ್ನೂ ಇಬ್ಬರನ್ನೂ ಕರೆಸಿ ವಿಚಾರಣೆ ನಡೆಸಿದರು.

ಈ ವೇಳೆ ಅನ್ಯಕೋಮಿನ ಆರೋಪಿ ಶೇಖ್ ಮೋದಿ ಹಾಗೂ ಇತರರರು ನಮ್ಮ ಮೇಲೆ ಹಲ್ಲೆ ಮಾಡಿದರು. ರಾಮನ ಪೂಜೆ ಮಾಡಿ ಪ್ರಸಾದ ವಿತರಣೆ ಮಾಡಿದ್ದಕ್ಕೆ ಹಲ್ಲೆ ಮಾಡಿದರು. ನಮ್ಮ ಮೇಲೆ ಹಲ್ಲೆ ಮಾಡಿದರೂ ಜೈಲು ಅಧಿಕಾರಿ ಸಿಬ್ಬಂದಿ ನಮ್ಮ ರಕ್ಷಣೆ ಮಾಡಿಲ್ಲ. ಬದಲಾಗಿ ಈಗ ನಮ್ಮನ್ನು ಜೈಲು ಆವರಣದಲ್ಲಿ ಬಿಡದೇ ಸೆಲ್ ನಲ್ಲಿಟ್ಟಿದ್ದಾರೆ.

ಈ ವಿಷಯವಾಗಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನಮಗೆ ಸಹಾಯ ಮಾಡಬೇಕು ಎಂದು ಆರೋಪಿ ವಿಡಿಯೋದಲ್ಲಿ ಹೇಳಿರುವುದು ಕಂಡು ಬಂದಿದೆ.

ಆದರೆ. ರಾಮನ‌ ವಿಚಾರ ಇಟ್ಟುಕೊಂಡು ಆರೋಪಿ ಸುಳ್ಳು ಹೇಳುತ್ತಿದ್ದಾನೆಂದು ಕೇಂದ್ರ ಕಾರಾಗೃಹದ ಅಧೀಕ್ಷಕ ಐ ಜಿ ಮ್ಯಾಗೇರಿ ಪ್ರತಿಕ್ರಿಯಿಸಿದ್ದಾರೆ.

ಮಹಾರಾಷ್ಟ್ರದ ಜೈಲಿನಿಂದ ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಮೂವರು ಆರೋಪಿಗಳು ಬಂದಿದ್ದಾರೆ. ಮಹಾರಾಷ್ಟ್ರದ ಜೈಲಿನಲ್ಲಿ ಗಲಾಟೆ ಮಾಡಿದ ಕಾರಣ ಇಲ್ಲಿಗೆ ಕಳುಹಿಸಿದ್ದಾರೆ. ಈಗ ರಾಮ ಮಂದಿರ ಉದ್ಘಾಟನೆ ವಿಚಾರ ಮುಂದಿಟ್ಟು ಸುಳ್ಳು ಹೇಳುತ್ತಿದ್ದಾರೆಂದು ತಿಳಿಸಿದ್ದಾರೆ.

ಆದರೆ, ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಕೆ ಮೇಲೆ ನಿಷೇಧ ಹೇರಲಾಗಿದೆ. ಆದರೂ, ಕೈದಿ ಬಳಿ ಮೊಬೈಲ್ ಹೇಗೆ ಬಂದಿತ್ತು ಎಂಬುದರ ಬಗ್ಗೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಿಲ್ಲ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಪೊಲೀಸ್ ಅಧೀಕ್ಷಕ ರಿಷಿಕೇಶ್ ಸೋನಾವಾನೆ ಅವರು, ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ.. "ಮೊಬೈಲ್ ಫೋನ್ ಕಾರಾಗೃಹದ ಒಳಗೆ ಹೇಗೆ ಹೋಯಿತು ಎಂಬುದನ್ನೂ ತನಿಖೆ ಮಾಡುತ್ತಿದ್ದೇವೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com