ಅಂಗನವಾಡಿ ಮೊಬೈಲ್‌ಗಳಿಗೆ ಸಿಗದ ಕರೆನ್ಸಿ ಭಾಗ್ಯ: ಕಾರ್ಯಕರ್ತೆಯರಿಗೆ ಹೊರೆಯಾಗಿ ಪರಿಣಮಿಸಿದೆ ಸ್ಮಾರ್ಟ್ ಫೋನ್!

ಅಪೌಷ್ಟಿಕತೆ, ಕಡಿಮೆ ತೂಕ ಹಾಗೂ ರಕ್ತಹೀನತೆಯಿಂದ ಬಳಲು ಮಹಿಳೆಯರು ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ನಿಗಾವಹಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರಾರಂಭಿಸಿದ್ದ ಸ್ಮಾರ್ಟ್ ಫೋನ್ (ಟ್ಯಾಬ್) ಯೋಜನೆ ಹಳ್ಳಹಿಡಿದಂತೆ ಕಾಣುತ್ತಿದೆ.
ಅಂಗನವಾಡಿ ಕಾರ್ಯಕರ್ತೆ.
ಅಂಗನವಾಡಿ ಕಾರ್ಯಕರ್ತೆ.

ಕಾರವಾರ: ಅಪೌಷ್ಟಿಕತೆ, ಕಡಿಮೆ ತೂಕ ಹಾಗೂ ರಕ್ತಹೀನತೆಯಿಂದ ಬಳಲು ಮಹಿಳೆಯರು ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ನಿಗಾವಹಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರಾರಂಭಿಸಿದ್ದ ಸ್ಮಾರ್ಟ್ ಫೋನ್ (ಟ್ಯಾಬ್) ಯೋಜನೆ ಹಳ್ಳಹಿಡಿದಂತೆ ಕಾಣುತ್ತಿದೆ.

ಅಂಗನವಾಡಿಗಳಲ್ಲಿ ದಾಖಲಾಗುವ ಸಮಗ್ರ ಮಾಹಿತಿ ಕ್ಷಣಾರ್ಧದಲ್ಲಿ ಆನ್‌ಲೈನ್ ನಲ್ಲಿ ಸಿಗಬೇಕು ಎಂಬ ಕಾರಣಕ್ಕೆ ಕೇಂದ್ರ ಸರಕಾರ 'ಪೋಷಣ್ ಅಭಿಯಾನ ಯೋಜನೆ' ಆರಂಭಿಸಿತು. ಈ ಯೋಜನೆಯಡಿ ಅಂಗನವಾಡಿಗಳಿಗೆ ಸ್ಮಾರ್ಟ್ ಫೋನ್‌ಗಳನ್ನು ನೀಡಲಾಯಿತು.

ಪೋಷಣ್ ಅಭಿಯಾನದಡಿ 2020ರಲ್ಲಿ 62,581 ಅಂಗನವಾಡಿ, 3,331 ಉಪಕೇಂದ್ರ ಸೇರಿ 65,911 ಕೇಂದ್ರಗಳ ಕಾರ್ಯಕರ್ತೆಯರಿಗೆ ಸ್ಯಾಮಂಗ್ ಗೆಲಾಕ್ಸಿ ಎ-10 ಎಸ್ ಮಾಡೆಲ್ ಸ್ಮಾರ್ಟ್‌ ಫೋನ್ ಹಾಗೂ ಬ‌ರ್‌ಟೆಲ್ ಸಿಮ್ ವಿತರಿಸಲಾಗಿತ್ತು. ಆದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಒಮ್ಮೆ ಹಣ ಹಾಕಿದರೆ, ಮತ್ತೊಮ್ಮೆ ಹಾಕುತ್ತಿಲ್ಲ. ಹಲವು ತಿಂಗಳಿಂದ ರಿಚಾರ್ಜ್ ಮಾಡದ ಹಿನ್ನೆಲೆಯಲ್ಲಿ ಅವು ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಅಂಗನವಾಡಿ ಕಾರ್ಯಕರ್ತೆಯರು ಸರಕಾರಕ್ಕೆ ಮಾಹಿತಿ ರವಾನಿಸಲು ಬೇರೆಯವರ ವೈಫೈ ಸಂಪರ್ಕ ಪಡೆದು ಕೆಲಸ ಮಾಡುವಂತಾಗಿದೆ.

ಅಂಗನವಾಡಿ, ಮೇಲ್ವಿಚಾರಕರು ಮತ್ತು ಸಿಡಿಪಿಒಗಳ ತ್ವರಿತ ಕಾರ್ಯನಿರ್ವಹಣೆಗೆ ಕೇಂದ್ರ-ರಾಜ್ಯ ಸರಕಾರಗಳು ಶೇ.60-40ರ ಅನುಪಾತದಲ್ಲಿ ಸಾಕಾರಗೊಳಿಸಿದ ಯೋಜನೆ ಇದು. ಸ್ಮಾರ್ಟ್‌ಫೋನ್‌ನಿಂದ ಕೆಲಸ ತ್ವರಿತ ಹಾಗೂ ಸುಲಭವಾದ ಕಾರಣ ಸಿಡಿಪಿಒ, ಮೇಲ್ವಿಚಾರಕರು, ಕಾರ್ಯಕರ್ತೆಯರು ನಿರಾಳರಾಗಿದ್ದರು.

40 ಬಗೆಯ ಸೇವಾ ನಿರ್ವಹಣೆ ಮಾಹಿತಿಯನ್ನು 'ಸ್ನೇಹ' ಆ್ಯಪ್ ಮೂಲಕ ದಾಖಲಿಸಿ ಸಲ್ಲಿಸಲಾಗುತ್ತಿತ್ತು. ಈಗ ರೀಚಾರ್ಜ್ ಮಾಡಿಸದ ಹಿನ್ನೆಲೆಯಲ್ಲಿ ಮತ್ತೆ ಕೈ ಬರಹದಲ್ಲಿ ಕಡತ, ದಾಖಲಾತಿ ನಿರ್ವಹಿಸಬೇಕಾದ ಒತ್ತಡ ಹೆಚ್ಚಿದೆ. ಕೆಲವೆಡೆ ಆ ಕೈ ಬರಹಕ್ಕೆ ಬೇಕಾದ ಪುಸ್ತಕಗಳನ್ನೂ ಪೂರೈಸುತ್ತಿಲ್ಲ ಎಂಬ ಮಾತುಕಗಳು ಕೇಳಿ ಬಂದಿವೆ.

ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದನ್ನು ಪರಿಗಣಿಸಿ ಮೂರು ವರ್ಷಗಳ ಹಿಂದೆ ಸರ್ಕಾರ ನಮಗೆ ಸ್ಮಾರ್ಟ್‌ಫೋನ್‌ಗಳನ್ನು ನೀಡಿತ್ತು. ಆದರೀಗ ಇದು ನಮಗೆ  ಹೊರೆಯಾಗಿ ಪರಿಣಮಿಸಿದೆ. 'ಪೋಷಣ ಅಭಿಯಾನ ಯೋಜನೆ' ಅಡಿಯಲ್ಲಿ ಫೋನ್ ಗಳನ್ನು ನೀಡಲಾಗಿತ್ತು. ಫೋನ್ ಗಳಲ್ಲಿರುವ ಆ್ಯಪ್ ಗಳ ಮೂಲಕ ನಾವು ಮಾಹಿತಿಗಳನ್ನು ನಮೂದಿಸಬೇಕಿತ್ತು. ಆದರೆ, ಮೊಬೈಲ್‌ಗಳಿಗೆ ರೀಚಾರ್ಜ್ ಮಾಡುತ್ತಿಲ್ಲ. ಇದು ನಮಗೆ ಹೊರೆಯಾಗಿ ಪರಿಣಮಿಸಿದೆ ಎಂದು ಕಾರವಾರದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಹೇಳಿದ್ದಾರೆ.

ಈ ಫೋನ್‌ಗಳ ಮೊಬೈಲ್ ಡೇಟಾವನ್ನು ರೀಚಾರ್ಜ್ ಮಾಡಿ ನಾಲ್ಕು ತಿಂಗಳಿಗಿಂತ ಹೆಚ್ಚು ಸಮಯವಾಗಿದೆ. ನಮಗೆ ತಿಂಗಳಿಗೆ 10,000 ರೂ. ನೀಡಲಾಗುತ್ತದೆ, ಆದರೆ, ಡೇಟಾ ರೀಚಾರ್ಜ್ ಮಾಡಲು ನಾವು ನಮ್ಮ ಸ್ವಂತ ಹಣವನ್ನು ಖರ್ಚು ಮಾಡುವಂತಾಗಿದೆ ಎಂದು ಮತ್ತೊಬ್ಬ ಅಂಗನವಾಡಿ ಶಿಕ್ಷಕಿ ಮಂಜುಳಾ ಅವರು ತಿಳಿಸಿದ್ದಾರೆ.

ನಮ್ಮಲ್ಲಿ ಬಹುತೇಕ ಮಂದಿ ವೈಫೈ ಬಳಕೆ ಮಾಡುತ್ತಾರೆ. ಕೆಲವರು ಹಾಟ್ ಸ್ಪಾಟ್ ಗಳನ್ನು ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ನೆಟ್ ವರ್ಕ್ ಸಮಸ್ಯೆ ಎದುರಾದಾಗ ಮಾಹಿತಿಗಳನ್ನು ದಾಖಲಿಸಲು ಸಾಧ್ಯವಾಗುವುದಿಲ್ಲ. ಈ ವೇಳೆ ನಾವು ಈ ಕೆಲಸವನ್ನು ಮನೆಗೆ ತೆಗೆದುಕೊಂಡು ಹೋಗುತ್ತೇವೆ. ಮನೆಗೆ ಹೋದಾಗ ಈ ಕೆಲವನ್ನು ಮಾಡಿದರೆ, ಮನೆಕೆಲಸ ಮಾಡಲು ಸಮಸ್ಯೆಗಳಾಗುತ್ತವೆ ಎಂದು ಮಂಜುಳಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಳಿಗ್ಗೆ 7 ಗಂಟೆಗೆ ಕೆಲಸ ಆರಂಭಿಸುತ್ತೇವೆ. ರಾತ್ರಿ 10 ಗಂಟೆಯಾದರೂ ಕೆಲಸ ಬಾಕಿ ಉಳಿದಿರುತ್ತದೆ. ಸರ್ಕಾರದ ಯೋಜನೆಗಳಡಿ ಮಕ್ಕಳಿಗೆ ಆಹಾರ ನೀಡುವುದರಿಂದ ಹಿಡಿದ ಎಲ್ಲಾ ರೀತಿಯ ಮಾಹಿತಿಗಳನ್ನು ದಾಖಲು ಮಾಡಬೇಕು. ಇಲ್ಲದಿದ್ದರೆ, ಮಕ್ಕಳಿಗೆ ಊಟ ನೀಡಿಲ್ಲ ಎಂದೇ ಪರಿಗಣಿಸಲಾಗುತ್ತದೆ. ಉನ್ನತಾಧಿಕಾರಿಗಳಿಗೆ ನಾವು ಉತ್ತರ ಹೇಳಬೇಕಾಗುತ್ತದೆ ಎಂದು ಶಿಕ್ಷಕರೊಬ್ಬರು ಹೇಳಿದ್ದಾರೆ.

“ಅಂಗನವಾಡಿಗಳಲ್ಲಿ, ನಾವು ಮಕ್ಕಳಿಗೆ ಕಲಿಸುವುದಕ್ಕಿಂತ ಮೊಬೈಲ್ ಫೋನ್‌ಗಳಲ್ಲಿ ಮಾಹಿತಿಗಳನ್ನು ದಾಖಲು ಮಾಡುವುದರಲ್ಲೇ ಹೆಚ್ಚು ಸಮಯವನ್ನು ಕಳೆಯಬೇಕಾಗಿದೆ. ಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ಈ ಮೊಬೈಲ್‌ಗಳನ್ನು ವಾಪಸ್ ಪಡೆದು ಹಳೆಯ ರಿಜಿಸ್ಟರ್ ಲಾಗ್ ಬುಕ್‌ಗಳನ್ನು ನೀಡಿದರೆ ಒಳ್ಳೆಯದು' ಎಂದು ಮತ್ತೊಬ್ಬ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಹೇಳಿದ್ದಾರೆ.

ಈ ಮೊಬೈಲ್ ಫೋನ್‌ಗಳು ಹಳೆಯದಾಗಿವೆ. ಅವುಗಳನ್ನು ಬದಲಾಯಿಸಲು ಇದು ಸಕಾಲವಾಗಿದೆ ಎಂದು ಮತ್ತೊಬ್ಬ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಂಬಂಧ ಸಿಡಿಪಿಒ ಅರುಣ್ ನಾಯಕ್ ಅವರನ್ನು ಸಂಪರ್ಕಿಸಿದಾಗ, “ನಮ್ಮಲ್ಲಿ ಸುಮಾರು 2,000 ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ. ಪ್ರತಿ ವರ್ಷ ಅವರ ಮೊಬೈಲ್ ಕರೆನ್ಸಿ ರೀಚಾರ್ಜ್ ಮಾಡಲು ನಾವು ಅವರಿಗೆ ತಲಾ 2,000 ರೂ.ಗಳನ್ನು ನೀಡುತ್ತೇವೆಂದು ಹೇಳಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡಿ, ಅಂಗನವಾಡಿ ಶಿಕ್ಷಕರಿಗೆ ಮೊಬೈಲ್ ಕರೆನ್ಸಿ ರೀಚಾರ್ಜ್‌ಗೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮೊಬೈಲ್ ರೀಚಾರ್ಜ್ ಗಾಗಿ  6.28 ಕೋಟಿ ರೂ.ಬಿಡುಗಡೆಯಾಗಿದೆ. ಫೋನ್ ಬದಲಾವಣೆಗೆ ಸಂಬಂಧಿಸಿದಂತೆ ಫೆಬ್ರವರಿ ಮೊದಲ ವಾರದಲ್ಲಿ ಕ್ಯಾಬಿನೆಟ್ ಅನುಮೋದನೆ ಪಡೆದು ಟೆಂಡರ್ ಕರೆಯಲಾಗುತ್ತದೆ. ಎಲ್ಲಾ ಅಂಗನವಾಡಿ ಶಿಕ್ಷಕರಿಗೆ 70,000 ಮೊಬೈಲ್ ಫೋನ್ ನೀಡಬೇಕಾಗುತ್ತದೆ. ಇದಕ್ಕೆ 10 ಕೋಟಿಗೂ ಅಧಿಕ ವೆಚ್ಚವಾಗಿರುವುದರಿಂದ. ಪಾರದರ್ಶಕ ಕಾಯಿದೆ ಪ್ರಕಾರ ಟೆಂಡರ್ ಕರೆಯಬೇಕಾಗುತ್ತದೆ. ಹೀಗಾಗಿ ಅನುಮೋದನೆಗಾಗಿ ಸಂಪುಟದ ಮುಂದೆ ಪ್ರಸ್ತಾವನೆ ಇಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com