ಬೆಂಗಳೂರು: ಸ್ಮಾರ್ಟ್ ಕಾರ್ಡ್ ಕೊರತೆ; ಡ್ರೈವಿಂಗ್ ಲೈಸನ್ಸ್ ಗಾಗಿ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ!

ಚಾಲನಾ ಪರೀಕ್ಷೆಯನ್ನು ಪೂರ್ಣಗೊಳಿಸಿರುವವರು ಹಾಗೂ ನವೀಕರಣಕ್ಕೆ ಅರ್ಜಿ ಸಲ್ಲಿಸಿರುವವರು ಇನ್ನೂ ಪರವಾನಗಿ ಸಿಗದೇ ಪರದಾಡುತ್ತಿದ್ದಾರೆ. 
(ಸಾಂಕೇತಿಕ ಚಿತ್ರ)
(ಸಾಂಕೇತಿಕ ಚಿತ್ರ)

ಬೆಂಗಳೂರು: ಚಾಲನಾ ಪರೀಕ್ಷೆಯನ್ನು ಪೂರ್ಣಗೊಳಿಸಿರುವವರು ಹಾಗೂ ನವೀಕರಣಕ್ಕೆ ಅರ್ಜಿ ಸಲ್ಲಿಸಿರುವವರು ಇನ್ನೂ ಪರವಾನಗಿ ಸಿಗದೇ ಪರದಾಡುತ್ತಿದ್ದಾರೆ. 

ಚಿಪ್ ಸಹಿತ ಇರುವ ಸ್ಮಾರ್ಟ್ ಕಾರ್ಡ್ ನ್ನು ಪೂರೈಕೆ ಮಾಡುವ ವರ್ತಕರು ಕೊರತೆ ಎದುರಿಸುತ್ತಿರುವುದು ಪರವಾನಗಿ ಪಡೆಯುವ ಪ್ರಕ್ರಿಯೆಯಲ್ಲಿ ವಿಳಂಬ ಉಂಟಾಗುತ್ತಿರುವುದಕ್ಕೆ ಕಾರಣವಾಗಿದೆ.
 
ಇನ್ನು ಸಾರಿಗೆ ಇಲಾಖೆ ಈಗಿರುವ ಸ್ಮಾರ್ಟ್ ಕಾರ್ಡ್ ಗಳಿಂದ ಹೊಸ ಪೀಳಿಗೆ ಸ್ಮಾರ್ಟ್ ಕಾರ್ಡ್ ಗಳಿಗೆ ಬದಲಾವಣೆ ಮಾಡಿಕೊಳ್ಳುತ್ತಿದೆ.  ಈ ಹೊಸ ಜನರೇಷನ್ ಕಾರ್ಡ್ ಗಳು ದೇಶಾದ್ಯಂತ ಒಂದೇ ರೀತಿ ಇರಲಿದ್ದು, ಕಾರ್ಡ್ ದಾರರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒಳಗೊಂಡಿರಲಿದೆ. ಇದಷ್ಟೇ ಅಲ್ಲದೇ ದೃಢೀಕರಣಕ್ಕಾಗಿ ಅಧಿಕಾರಿಗಳಿಗೆ ಸುಲಭವಾಗುವ ರೀತಿಯಲ್ಲಿ ಕ್ಯೂಆರ್ ಕೋಡ್ ಗಳನ್ನು ಹೊಂದಿರಲಿದೆ. 

ನಾನು ಡಿಎಲ್ ಗೆ ಅರ್ಜಿ ಸಲ್ಲಿಸಿ ಪರೀಕ್ಷೆಗೆ ಹಾಜರಾಗಿದ್ದೆ. ಸಾರಿಗೆ ಇಲಾಖೆ ಡಿಎಲ್ ಗಳನ್ನು 10 ದಿನಗಳಲ್ಲಿ ನೀಡುವುದಾಗಿ ಹೇಳಿತ್ತು. ಆದರೆ ಒಂದು ತಿಂಗಳು ಕಳೆದರೂ ಡಿಎಲ್ ಇನ್ನೂ ಸಿಕ್ಕಲ್ಲ ಎಂದು ಯುವಕನೋರ್ವ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಾರಿಗೆ ಚಾಲಕರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಿ.ವಿ.ರಾಘವೇಂದ್ರ, ಈ ಹಿಂದೆ ನಮಗೆ ಕೆಲವೇ ದಿನಗಳಲ್ಲಿ ಡಿಎಲ್ ಸಿಗುತ್ತಿತ್ತು. ಆದರೆ ಕಳೆದ ಕೆಲವು ವಾರಗಳಿಂದ, ಹೊಸದಾಗಿ ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ ಮತ್ತು ತಮ್ಮ ಡಿಎಲ್‌ಗಳನ್ನು ನವೀಕರಿಸಿದ ನಮ್ಮ ಅನೇಕ ಆಟೋ ಮತ್ತು ಕ್ಯಾಬ್ ಚಾಲಕರು ಇನ್ನೂ ಅವುಗಳನ್ನು ಸ್ವೀಕರಿಸಿಲ್ಲ. ನಮ್ಮ ಚಾಲಕರು ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್‌ಟಿಒ) ವಿಚಾರಿಸಿದಾಗ, ಅವರಿಗೆ ಸ್ಮಾರ್ಟ್ ಕಾರ್ಡ್‌ಗಳನ್ನು ಸರಬರಾಜು ಮಾಡಬೇಕಾದ ಡೀಲರ್ ಅದನ್ನು ಮಾಡಿಲ್ಲ ಎಂದು ಅಧಿಕಾರಿಗಳು ಹೇಳಿರುವುದು ಬೆಳಕಿಗೆ ಬಂದಿದೆ.

ಸಾರಿಗೆ ಅಧಿಕಾರಿಗಳು ಅವರು ಹೊಸ ಸ್ಮಾರ್ಟ್ ಕಾರ್ಡ್‌ಗಳೆಡೆಗೆ ಕಾರ್ಯನಿರ್ವಹಿಸುತ್ತಿದ್ದಾರೆ, ಇದು ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಲು ಸಂಖ್ಯೆಗಳನ್ನು ಸಹ ಹೊಂದಿರುತ್ತದೆ ಎಂದು ತಿಳಿದುಬಂದಿದೆ.

ಡಿಎಲ್‌ಗಳನ್ನು ನೀಡುವಲ್ಲಿ ವಿಳಂಬವಾಗಿರುವುದರಿಂದ ಪರೀಕ್ಷೆಯಲ್ಲಿ ತೇರ್ಗಡೆಯಾದವರಲ್ಲಿ ಚಾಲನೆ ಮಾಡಬಹುದೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ ಗೊಂದಲಕ್ಕೆ ಕಾರಣವಾಗಿದೆ. ಡಿಎಲ್ ಪಡೆಯುವಲ್ಲಿ ವಿಳಂಬವಾಗಿರುವುದರಿಂದ ಚಾಲಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪರವಾನಗಿಯನ್ನು ಇನ್ನೂ ಸ್ವೀಕರಿಸದಿದ್ದಲ್ಲಿ ಆ ಪ್ರಕರಣವನ್ನು ಹೇಗೆ ಪರಿಗಣಿಸಬೇಕು ಎಂಬ ಗೊಂದಲದ ಪರಿಸ್ಥಿತಿ ಇದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಹೇಳಿವೆ. ಮಾನ್ಯ ಪರವಾನಗಿ ಇಲ್ಲದೆ ವಾಹನ ಚಲಾಯಿಸುವ ಯಾರಾದರೂ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ ದಂಡವನ್ನು ತೆರಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪರವಾನಗಿ ಹೊಂದಿರುವವರು ಮಾನ್ಯವಾದ ಪರವಾನಗಿಯೊಂದಿಗೆ ಮಾತ್ರ ರಸ್ತೆಗೆ ಬರಬೇಕು ಎಂದು ಅವರು ಹೇಳಿದರು.

ಸಾರಿಗೆ ಆಯುಕ್ತ ಯೋಗೀಶ್‌ ಅವರ ಬಳಿ ಡಿಎಲ್‌ ವಿತರಣೆ ವಿಳಂಬದ ಕುರಿತು ಟಿಎನ್‌ಐಇ ಮಾಹಿತಿ ಕೇಳಿದಾಗ, “ಯಾರು ಡಿಎಲ್‌ ಪರೀಕ್ಷೆ ತೆಗೆದುಕೊಳ್ಳುತ್ತಾರೋ ಅವರ ಮನೆ ಬಾಗಿಲಿಗೆ ಕೆಲವೇ ದಿನಗಳಲ್ಲಿ ಪರವಾನಗಿ ಸಿಗಬೇಕು. ಅವರು ತಮ್ಮ ನೋಂದಾಯಿತ ವಿಳಾಸಗಳಿಗೆ ತಮ್ಮ ಡಿಎಲ್‌ಗಳ ರವಾನೆ ಬಗ್ಗೆ ಸಂದೇಶಗಳನ್ನು ಸಹ ಪಡೆಯುತ್ತಾರೆ. ಕೆಲವರು ಕಾರ್ಡ್‌ಗಳನ್ನು ಸ್ವೀಕರಿಸದಿರುವ ಕೆಲವು ನಿದರ್ಶನಗಳಿರಬಹುದು. ಆದರೆ ಸ್ಮಾರ್ಟ್ ಕಾರ್ಡ್‌ಗಳ ಕೊರತೆ ಇಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com