ನಮ್ಮದು ಈಸ್ಟ್‌ ಇಂಡಿಯಾ ಕಂಪೆನಿ ವ್ಯವಸ್ಥೆ ಅಲ್ಲ; ನೌಕರರು ಸರ್ಕಾರದ ಗುಲಾಮರಲ್ಲ: ಹೈಕೋರ್ಟ್‌

ಭ್ರಷ್ಟಾಚಾರ ಆರೋಪ ಸಂಬಂಧ ಸರ್ಕಾರಿ ನೌಕರರ ವಿರುದ್ಧ ಇಲಾಖಾ ವಿಚಾರಣೆ ನಡೆಸುವಾಗ ಪಾರದರ್ಶಕ ಹಾಗೂ ಮಾನವೀಯತೆಯಿಂದ ನಡೆದುಕೊಳ್ಳಬೇಕಾಗುತ್ತದೆ. ನಮ್ಮ ವ್ಯವಸ್ಥೆ ಈಸ್ಟ್‌ ಇಂಡಿಯಾ ಕಂಪೆನಿಯ ವ್ಯವಸ್ಥೆ ಅಲ್ಲ; ನೌಕರರು ಸರ್ಕಾರಗಳ ಗುಲಾಮರಲ್ಲ ಎಂದು ಹೈಕೋರ್ಟ್‌ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಭ್ರಷ್ಟಾಚಾರ ಆರೋಪ ಸಂಬಂಧ ಸರ್ಕಾರಿ ನೌಕರರ ವಿರುದ್ಧ ಇಲಾಖಾ ವಿಚಾರಣೆ ನಡೆಸುವಾಗ ಪಾರದರ್ಶಕ ಹಾಗೂ ಮಾನವೀಯತೆಯಿಂದ ನಡೆದುಕೊಳ್ಳಬೇಕಾಗುತ್ತದೆ. ನಮ್ಮ ವ್ಯವಸ್ಥೆ ಈಸ್ಟ್‌ ಇಂಡಿಯಾ ಕಂಪೆನಿಯ ವ್ಯವಸ್ಥೆ ಅಲ್ಲ; ನೌಕರರು ಸರ್ಕಾರಗಳ ಗುಲಾಮರಲ್ಲ ಎಂದು ಹೈಕೋರ್ಟ್‌ ಹೇಳಿದೆ.

ಖಾತಾ ಬದಲಾವಣೆ ಮಾಡಿಕೊಡಲು 500 ರೂಪಾಯಿ ಲಂಚ ಪಡೆದ ಆರೋಪದಲ್ಲಿ ಲೋಕಾಯುಕ್ತ ನ್ಯಾಯಾಲಯದಿಂದ ಖುಲಾಸೆಯಾದ ಹೊರತಾಗಿಯೂ ತಮ್ಮನ್ನು ಸೇವೆಯಿಂದ ವಜಾಗೊಳಿಸಿದ ಸರ್ಕಾರದ ಆದೇಶವನ್ನು ಪ್ರಶ್ನಿಸಿ ದಾವಣಗೆರೆ ತಾಲ್ಲೂಕು ಮಾಯಕೊಂಡ ಹೋಬಳಿಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಪಿ ವಿ ರುದ್ರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವ ಏಕಸದಸ್ಯ ಪೀಠವು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಅರ್ಜಿದಾರ ರುದ್ರಪ್ಪ ಅವರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಿದ ಸರ್ಕಾರದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್‌, ಅರ್ಜಿದಾರರಿಗೆ ನಿವೃತ್ತಿಯವರೆಗೆ ನೀಡಬೇಕಾದ ವೇತನ, ನಿವೃತ್ತಿ ನಂತರದ ಪಿಂಚಣಿ ಸೇರಿದಂತೆ ಕಾನೂನುಬದ್ಧವಾದ ಎಲ್ಲ ಸೇವಾ ಸೌಲಭ್ಯಗಳನ್ನೂ ಒದಗಿಸುವಂತೆ ಸರ್ಕಾರಕ್ಕೆ ಇದೇ ವೇಳೆ ಆದೇಶಿಸಿದೆ.

ಇದಕ್ಕೂ ಮುನ್ನ, ಲಂಚ ಪ್ರಕರಣದಲ್ಲಿ ಅರ್ಜಿದಾರರನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದರೂ ಅದೇ ಆರೋಪದ ಮೇಲೆ ಇಲಾಖೆಯಲ್ಲಿ ವಿಚಾರಣೆಯಲ್ಲಿ ದೋಷಿಯಾಗಿ ತೀರ್ಮಾನಿಸಿ, ಸೇವೆಯಿಂದ ವಜಾಗೊಳಿಸಿದ ಸರ್ಕಾರವನ್ನು ಪೀಠ ತರಾಟೆಗೆ ತೆಗೆದುಕೊಂಡಿತು.

ಸಾಕ್ಷ್ಯಧಾರಗಳಿಲ್ಲ ಎಂದೇಳಿ ಲಂಚ ಪ್ರಕರಣದಿಂದ ಅರ್ಜಿದಾರರನ್ನು ಲೋಕಾಯುಕ್ತ ನ್ಯಾಯಾಲಯ ಖುಲಾಸೆಗೊಳಿಸಿದೆ. ಹೀಗಿದ್ದರೂ ಸರ್ಕಾರ ಏಕೆ ಅರ್ಜಿದಾರರನ್ನು ಸೇವೆಯಿಂದ ವಜಾಗೊಳಿಸಿದೆ. ಈ ಪ್ರಕರಣದಲ್ಲಿ ಅರ್ಜಿದಾರರನ್ನು ದುರುದ್ದೇಶದಿಂದ ಸಿಲುಕಿಸಿರುವುದು ಕಂಡು ಬರುತ್ತಿದೆ. ಭ್ರಷ್ಟಾಚಾರ ಆರೋಪಗಳ ಸಂಬಂಧ ಸರ್ಕಾರಿ ನೌಕರರ ವಿರುದ್ಧ ಇಲಾಖಾ ವಿಚಾರಣೆ ನಡೆಸುವಾಗ ಪಾರದರ್ಶಕ ಹಾಗೂ ಮಾನವೀಯತೆಯಿಂದ ನಡೆದುಕೊಳ್ಳಬೇಕಾಗುತ್ತದೆ. ವಿಚಾರಣೆ ವೇಳೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನ್ಯಾಯದಾನ ಮಾಡಬಾರದು. ಅಷ್ಟಕ್ಕೂ ನಮ್ಮ ವ್ಯವಸ್ಥೆ ಈಸ್ಟ್‌ ಇಂಡಿಯಾ ಕಂಪೆನಿಯೂ ಅಲ್ಲ; ನೌಕರರು ಸರ್ಕಾರಗಳ ಗುಲಾಮರೂ ಅಲ್ಲ ಎಂದು ಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಹಾಗೆಯೇ, ಕೈಯಲ್ಲಿ ಕಾಸಿಟ್ಟರೆ ಮಾತ್ರ ಸರ್ಕಾರಿ ಕೆಲಸ ಮಾಡುತ್ತೇನೆ ಎಂದು ಸರ್ಕಾರಿ ಸೇವಕರು ದುರ್ನಡತೆ ತೋರದಂತ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ದ್ವೇಷದಿಂದ ದೂರುದಾರರು ಪ್ರಕರಣ ದಾಖಲಿಸಿರುವುದು ನೀಡಿರುವುದು ಮೇಲ್ನೋಟಕ್ಕೆ ತಿಳಿಯಲಿದೆ. ಹೀಗಿರುವಾಗ ಸೇವೆಯಿಂದ ವಜಾಗೊಳಿಸಿ ಅರ್ಜಿದಾರರನ್ನು ದಂಡಿಸಿರುವುದು ನ್ಯಾಯಸಮ್ಮತವಾಗಿಲ್ಲ ಎಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಅಸಮಾಧಾನ ಹೊರಹಾಕಿದರು.

ಏನಿದು ಪ್ರಕರಣ?
ಖಾತೆ ಬದಲಾವಣೆ ಮಾಡಿಕೊಡಲು 500 ರೂಪಾಯಿ ಲಂಚದ ಬೇಡಿಕೆಯಿಟ್ಟಿದ್ದ ಆರೋಪದ ಮೇಲೆ ಅರ್ಜಿದಾರರ ವಿರುದ್ಧ 2011ರಲ್ಲಿ ಮಹಿಳೆಯರಿಬ್ಬರು ನೀಡಿದ್ದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಂತರ ಲೋಕಾಯುಕ್ತದ ವಿಚಾರಣಾ ವರದಿ ಆಧರಿಸಿ ಇಲಾಖೆ ವಿಚಾರಣೆ ನಡೆಸಿದ್ದ ಸರ್ಕಾರ ಅರ್ಜಿದಾರರನ್ನು ದೋ಼ಷಿಯಾಗಿ ಪರಿಗಣಿಸಿ 2019ರಲ್ಲಿ ಸೇವೆಯಿಂದ ವಜಾಗೊಳಿಸಿತ್ತು. ಈ ಆದೇಶವನ್ನು 2020ರಲ್ಲಿ ಕೆಎಟಿ ಪುರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಕದ ತಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com