
ಬೆಂಗಳೂರು: ಬಡವರಿಗೆ ರೂಪಿಸಲಾಗಿರುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಹೋಟೆಲ್ ಗಳಿಗೆ ಮಾರಾಟ ಮಾಡುವ ಅಯೋಗ್ಯರ ವಿರುದ್ಧ ಜಿಲ್ಲಾಧಿಕಾರಿಗಳು ಮುಲಾಜಿಲ್ಲದೆ ಕ್ರಮ ಜರುಗಿಸಬೇಕು ಎಂದು ಹೈಕೋರ್ಟ್ ಮೌಖಿಕವಾಗಿ ಸೂಚಿಸಿದೆ.
ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರ ನ್ಯಾಯಪೀಠ, ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಹೋಟೆಲ್ ಗಳಿಗೆ ಮಾರಾಟ ಮಾಡುವ ಮಾಫಿಯಾ ಬಗ್ಗೆ ತೀವ್ರವಾಗಿ ಕಿಡಿಕಾರಿದರು.
ಕಳ್ಳಸಾಗಣೆದಾರರು ಸರಕುಪಟ್ಟಿ, ಸಿ ಫಾರಂ ಮತ್ತು ರಸೀದಿಯಂತಹ ಅಗತ್ಯ ದಾಖಲೆಗಳಿಲ್ಲದೆ ಅಕ್ಕಿಯನ್ನು ಲಾರಿಗಳಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುತ್ತಾರೆ. ಇಂತಹವರನ್ನು ಪತ್ತೆ ಹಚ್ಚಿದಾಗ ಅವರ ವಿರುದ್ಧ ತಕ್ಕ ಕ್ರಮ ಕೈಗೊಳ್ಳುವ ಅಧಿಕಾರ ಸ್ಥಳೀಯ ಜಿಲ್ಲಾಧಿಕಾರಿಗಳಿಗೆ ಇರುತ್ತದೆ. ಆದರೆ, ಅವರನ್ನು ಬಚಾವು ಮಾಡುವಂತಹ ವ್ಯವಸ್ಥೆ ಜೊತೆಯಲ್ಲಿಯೇ ಇರಲಿದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.
ಕಾನೂನನ್ನು ಎಷ್ಟೇ ಬಿಗಿಗೊಳಿಸಿದರೂ ಇಂದು ಕಳ್ಳಸಾಗಣೆದಾರರು, ನನಗೆ ನೀನು ರಕ್ಷಣೆ ಮಾಡು ನಿನ್ನನ್ನು ನಾನು ರಕ್ಷಣೆ ಮಾಡುತ್ತೇನೆ ಎನ್ನುವ ಮಟ್ಟಕ್ಕೆ ಇಳಿದಿದ್ದಾರೆ. ಅನ್ನಭಾಗ್ಯದಲ್ಲಿ ನನ್ನ ನಿಮ್ಮ ದುಡ್ಡು ಅಡಗಿರುತ್ತದೆ. ಸರ್ಕಾರ ಅದಕ್ಕೆ ಸಬ್ಸಿಡಿ ನೀಡುವ ಮೂಲಕ ಬಡವರ ಕಲ್ಯಾಣಕ್ಕೆಂದು ಯೋಜನೆ ಜಾರಿಗೊಳಿಸಿರುತ್ತದೆ. ಇದನ್ನು ಯಾರೂ ಮರೆಯಬಾರದು ಎಂದು ಪೀಠ ತಿಳಿಸಿತು.
ಕೆಲವು ಮಂದಿ ತಮ್ಮ ತಂದೆ-ತಾತ ಮಾಡಿದ ಪುಣ್ಯದಿಂದ ಇವತ್ತು ಸಮಾಜದಲ್ಲಿ ಉತ್ತಮ ಸ್ಥಾನಮಾನ ಅನುಭವಿಸುತ್ತಿದ್ದಾರೆ. ಆದರೆ, ಬಡವರಿಗೆ ಅಂತಹ ಭಾಗ್ಯ ಇರುವುದಿಲ್ಲ. ಅನ್ನಭಾಗ್ಯದಲ್ಲಿ ಜನರ ದುಡ್ಡು ಅಡಗಿರುತ್ತದೆ. ಸರ್ಕಾರ ಅದಕ್ಕೆ ಸಬ್ಸಿಡಿ ನೀಡುವ ಮೂಲಕ ಬಡವರ ಉದ್ಧಾರಕ್ಕೆ ಎಂದು ಯೋಜನೆ ಜಾರಿಗೊಳಿಸುತ್ತದೆ. ಅನ್ನಭಾಗ್ಯದಂಹ ಜನಪರ ಯೋಜನೆ ನಿಜವಾದ ಬಡವರಿಗೆ ತಲುಪಬೇಕು. ಅನ್ನಭಾಗ್ಯ ಯೋಜನೆ ಅಕ್ಕಿಯ ಕಳ್ಳಸಾಗಣೆ ನಿಯಂತ್ರಿಸಲು ಜಿಲ್ಲಾಧಿಕಾರಿಗಳು ಹೆಚ್ಚಿನ ನಿಗಾವಹಿಸಬೇಕು. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು ಎಂದು ನ್ಯಾಯಪೀಠ ಹೇಳಿತು.
Advertisement