SCSP/TSP: 39,121 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗೆ ಸರ್ಕಾರ ಅನುಮೋದನೆ!

ರಾಜ್ಯ ಸರ್ಕಾರದ 34 ಇಲಾಖೆಗಳಿಗೆ ಕ್ರಿಯಾ ಯೋಜನೆಯಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನ ಹಂಚಿಕೆ ಮಾಡಲಾಗಿದೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಬೆಂಗಳೂರು: 2024-25ನೇ ಆರ್ಥಿಕ ವರ್ಷದಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಯಡಿ (ಟಿಎಸ್‌ಪಿ) 39,121.46 ಕೋಟಿ ರೂ.ವೆಚ್ಚ ಮಾಡುವ ಪ್ರಸ್ತಾವವುಳ್ಳ ಕ್ರಿಯಾ ಯೋಜನೆಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ರಾಜ್ಯ ಅಭಿವೃದ್ಧಿ ಪರಿಷತ್ ಶುಕ್ರವಾರ ಅನುಮೋದನೆ ನೀಡಿದೆ.

ಪರಿಷತ್ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.

ರಾಜ್ಯ ಸರ್ಕಾರದ 34 ಇಲಾಖೆಗಳಿಗೆ ಕ್ರಿಯಾ ಯೋಜನೆಯಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನ ಹಂಚಿಕೆ ಮಾಡಲಾಗಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ‘ಎಸ್‌ಸಿಎಸ್‌ಪಿ ಅಡಿ ರೂ. 27,673.96 ಕೋಟಿ, ಟಿಎಸ್‌ಪಿ ಅಡಿಯಲ್ಲಿ ರೂ.11,447.51 ಕೋಟಿ ವ್ಯಯಿಸಲಾಗುವುದು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರೂ.3,900 ಕೋಟಿ ಹೆಚ್ಚಿನ ವೆಚ್ಚ ಮಾಡಲಾಗುತ್ತದೆ.

ಶೋಷಿತ ವರ್ಗದ ಜನರ ಜೀವನದಲ್ಲಿ ಬದಲಾವಣೆ ತರಲು ಆದ್ಯತೆ ನೀಡಲಾಗಿದ್ದು, ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನು ಬಳಸಿಕೊಳ್ಳುವಲ್ಲಿ ವಿಫಲರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪ್ರತಿಪಕ್ಷ ಬಿಜೆಪಿಯು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದೆ.

ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆಗೆ ದಲಿತರ ಅಭಿವೃದ್ಧಿ ಹಣ ಬಳಕೆ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ

ಎಸ್‌ಸಿಎಸ್‌ಪಿ ಅಡಿಯಲ್ಲಿ 27,673.96 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಟಿಎಸ್‌ಪಿ ಅಡಿಯಲ್ಲಿ 11,447.50 ಕೋಟಿ ಒದಗಿಸಲಾಗಿದೆ. ರಾಜ್ಯಗಳಲ್ಲಿ ಎಸ್‌ಸಿ/ಎಸ್‌ಟಿಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನ ಹಂಚಿಕೆಯನ್ನು ಮಾಡಲಾಗಿದೆ. ಕರ್ನಾಟಕದ ಮಾದರಿಯಲ್ಲಿ ಕಾನೂನು ರೂಪಿಸಲು ಪ್ರಧಾನಿ ಮೋದಿಯವರಿಗೆ ಹಲವು ಬಾರಿ ಮನವಿ ಮಾಡಲಾಗಿದೆ,

ಫಲಾನುಭವಿಗಳು ಎಸ್‌ಸಿ/ಎಸ್‌ಟಿಯವರಾಗಿರುವುದರಿಂದ ಗ್ಯಾರಂಟಿ ಯೋಜನೆಗಳ ಮೂಲಕವೂ ಈ ಮೊತ್ತವನ್ನು ಆ ಸಮುದಾಯಗಳಿಗೆ ಮಾತ್ರ ಖರ್ಚು ಮಾಡಲಾಗುತ್ತದೆ. ಪ್ರತಿ ಇಲಾಖೆಗೂ ನಿಗದಿ ಪಡಿಸಲಾಗಿದೆ. ಈ ವರ್ಷದ ಕ್ರಿಯಾ ಯೋಜನೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 8,480 ಕೋಟಿ, ಇಂಧನ ಇಲಾಖೆಗೆ 5,026 ಕೋಟಿ, ಸಮಾಜ ಕಲ್ಯಾಣ ಇಲಾಖೆಗೆ 4,174 ಕೋಟಿ, ಕಂದಾಯ ಇಲಾಖೆಗೆ 3,403 ಕೋಟಿ, ಗ್ರಾಮೀಣಾಭಿವೃದ್ಧಿ ಇಲಾಖೆಗೆ 3,163 ಕೋಟಿ ನೀಡಲಾಗಿದೆ.

ಅನುದಾನ ಯಾವುದೇ ಕಾರಣಕ್ಕೂ ಬಳಕೆಯಾಗದಂತೆ ಲೋಪವಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದೇ ವರ್ಷದಲ್ಲಿ ಅದನ್ನು ಖರ್ಚು ಮಾಡಬೇಕು ಎಂದು ಸೂಚಿಸಲಾಗಿದೆ. 3 ತಿಂಗಳಿಗೊಮ್ಮೆ ಪರಿಷತ್‌ ಸಭೆ ನಡೆಸಿ ಪ್ರಗತಿ ಪರಿಶೀಲಿಸಲಾಗುವುದು. ಕಳೆದ ವರ್ಷ 35,221.84 ಕೋಟಿ ರೂ.ಗಳಲ್ಲಿ 97.23 ರಷ್ಟು ಖರ್ಚು ಮಾಡಲಾಗಿದ್ದು, ನಿಗದಿಪಡಿಸಿರುವ ಅನುದಾನದಲ್ಲಿ ರೂ.1,327 ಕೋಟಿ ಉಳಿಯಬಹುದು ಎಂದು ಅಂದಾಜಿಸಲಾಗಿದೆ. ಕೊಳೆಗೇರಿಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಅಬ್ಬಯ್ಯ ಪ್ರಸಾದ್ ಬೇಡಿಕೆ ಇಟ್ಟಿದ್ದಾರೆ.

ಸಿದ್ದರಾಮಯ್ಯ
ಬಡವರ ವಸತಿ ಯೋಜನೆಗೆ ಗರಿಷ್ಠ ಅನುದಾನ: ಸಿಎಂ ಸಿದ್ದರಾಮಯ್ಯ

ಅಭಿವೃದ್ಧಿ ಪರಿಷತ್‌ ಸದಸ್ಯರೂ, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ಅಬ್ಬಯ್ಯ ಪ್ರಸಾದ್, ಎನ್‌.ಟಿ. ಶ್ರೀನಿವಾಸ್‌, ಬಸಂತಪ್ಪ ಅವರ ಬೇಡಿಕೆಗೆ ಸ್ಪಂದಿಸಿ ಕೆಲ ಹೊಸ ಕಾರ್ಯಕ್ರಮಗಳಿಗೂ ಅನುಮೋದನೆ ನೀಡಲಾಗಿದೆ.

ಪ್ರತಿ ಹೋಬಳಿಗೆ ಒಂದು ವಸತಿ ಶಾಲೆ ತೆರೆಯಲು ಹಿಂದೆ ತೀರ್ಮಾನಿಸಲಾಗಿತ್ತು. ಬಾಕಿ ಇರುವ ಹೋಬಳಿಗಳಲ್ಲಿ ವಸತಿ ಶಾಲೆ ಆರಂಭಿಸಲಾಗುವುದು. ಅಲ್ಲಿ ಸ್ಥಳೀಯರಿಗೆ ಶೇಕಡ 75ರಷ್ಟು ಮತ್ತು ಹೊರಗಿನವರಿಗೆ ಶೇ 25ರಷ್ಟು ಸೀಟುಗಳನ್ನು ಹಂಚಿಕೆ ಮಾಡಲಾಗುವುದು. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯ ಸೆಕ್ಷನ್‌ 7–ಸಿ ಮತ್ತು 7–ಡಿ ರದ್ದುಗೊಳಿಸುವಂತೆ ನರೇಂದ್ರ ಸ್ವಾಮಿ ಆಗ್ರಹಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಉಪ‌ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮತ್ತು ಪರಿಷತ್ ಸದಸ್ಯರಾಗಿರುವ ಶಾಸಕರು ಸಭೆಯಲ್ಲಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com