
ಬೆಂಗಳೂರು: ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗಳ ಪೂರ್ವಾನುಮತಿ ಇಲ್ಲದೆ ತನಿಖೆ ಆರಂಭಿಸಲಾಗಿದೆ ಎಂಬ ತಾಂತ್ರಿಕ ಕಾರಣದಿಂದಾಗಿ ವಿವಿಧ ಇಲಾಖೆಗಳ 11 ಅಧಿಕಾರಿಗಳ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರು ಚನ್ನಗಿರಿ ತಾಲೂಕಿನ ರೇಂಜ್ ಫಾರೆಸ್ಟ್ ಆಫೀಸರ್ ಸತೀಶ್ ಎಸ್, ಬಂಗಾರಪೇಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶಪ್ಪ ಎನ್. ನಾಗೇಶ್ ಎ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ; ಶಿವರಾಜು, ತಹಸೀಲ್ದಾರ್, ದಾವಣಗೆರೆ ತಾಲ್ಲೂಕು; ನಾಗರಾಜಪ್ಪ ಎನ್ ಜೆ, ತಹಶೀಲ್ದಾರ್, ಶಿವಮೊಗ್ಗ ತಾಲ್ಲೂಕು; ಕೆ ಟಿ ಶ್ರೀನಿವಾಸ್ ಮೂರ್ತಿ, ಸರ್ವೆ ಮೇಲ್ವಿಚಾರಕರು, ತುಮಕೂರು ಮತ್ತು ಇತರ ಐವರು -ಬಿ ಕೆ ಶಿವಕುಮಾರ್, ಲಕ್ಷ್ಮೀಪತಿ, ರಾಜೇಶ್ವರಿ ಬಿ ಹೆಚ್, ಪುಷ್ಪಕಲಾ ಕೆ ಟಿ ಮತ್ತು ನಟರಾಜ ಎಸ್. ಅವರು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿ, ಪ್ರಕರಣವನ್ನು ರದ್ದುಗೊಳಿಸಿದರು.
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಾಧೀಶರು, ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13 (1) (ಬಿ) ಅಡಿಯಲ್ಲಿ ನಡೆದ ಅಪರಾಧಕ್ಕಾಗಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿ ಅದನ್ನು ಪೊಲೀಸ್ ಅಧಿಕಾರಿ ಸಲ್ಲಿಸಬೇಕು. CrPC ಯ ಸೆಕ್ಷನ್ 157 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್‌ಗೆ ವರದಿ ಸಲ್ಲಿಸಬೇಕು.
ಪೋಲೀಸ್ ಅಧಿಕಾರಿಯು ಅದನ್ನು ಮೂಲ ಮಾಹಿತಿ ವರದಿ ಮತ್ತು ವಿಶ್ವಾಸಾರ್ಹ ಮೂಲ ವರದಿಯನ್ನು ತಯಾರಿಸಲು ಆಧಾರವಾಗಿರುವ ಇತರ ಸಾಕ್ಷಿಗಳೊಂದಿಗೆ ಪೊಲೀಸ್ ವರಿಷ್ಠಾಧಿಕಾರಿಗೆ ರವಾನಿಸಬೇಕು. ಕಾಯಿದೆಯ ಸೆಕ್ಷನ್ 17(2) ರ ಅಡಿಯಲ್ಲಿ ತನಿಖೆಗೆ ಅನುಮತಿ ಕೋರಬೇಕು. ಆದಾಗ್ಯೂ, ಈ ಪ್ರಕರಣಗಳಲ್ಲಿ, ಎಫ್‌ಐಆರ್ ದಾಖಲಾಗುವುದಕ್ಕೂ ಮುನ್ನವೇ ತನಿಖೆಗೆ ಅನುಮತಿ ನೀಡಲಾಗಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ಪ್ರಕರಣವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದರು.
Advertisement