
ಬೆಂಗಳೂರು: ನಗರದ ಎಂಇಎಸ್ ರಸ್ತೆಯಲ್ಲಿರುವ ಮದರ್ ತೆರೆಸಾ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಪಶ್ಚಿಮ ಬಂಗಾಳದ 21 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಕಾಲೇಜು ಹಾಸ್ಟೆಲ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆಯ ಪೋಷಕರು ಪಶ್ಚಿಮ ಬಂಗಾಳದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಮೃತಪಟ್ಟ ವಿದ್ಯಾರ್ಥಿನಿಯನ್ನು ದ್ವಿತೀಯ ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ದಿಯಾ ಮೊಂಡಲ್ ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ 7.30ರ ಸುಮಾರಿಗೆ ಹಾಸ್ಟೆಲ್ ರೂಮಿನಲ್ಲಿ ತನ್ನ ದುಪ್ಪಟ್ಟದೊಂದಿಗೆ ನೇಣು ಬಿಗಿದುಕೊಂಡಿದ್ದ ದಿಯಾಳನ್ನು ನೋಡಿದ ಆಕೆಯ ರೂಮ್ ಮೇಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಹಾಸ್ಟೆಲ್ ಸ್ನೇಹಿತೆಯರು ಹಾಗೂ ಆಡಳಿತ ಮಂಡಳಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಕೌಟುಂಬಿಕ ಸಮಸ್ಯೆಗಳೇ ದಿಯಾ ಅವರ ಆತ್ಮಹತ್ಯೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಭಾನುವಾರ ಸಂಜೆ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಆಕೆಯ ಕುಟುಂಬದವರು ದೂರು ದಾಖಲಿಸಿಕೊಂಡು ಮೃತದೇಹವನ್ನು ಸಂಗ್ರಹಿಸಿದ್ದಾರೆ.
ದಿಯಾ ಮಾನಸಿಕವಾಗಿ ಸದೃಢವಾಗಿದ್ದು, ಮಾನಸಿಕ ಖಿನ್ನತೆಗೆ ಒಳಗಾಗಿರಲಿಲ್ಲ. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ, ಸ್ಥಳೀಯ ಹುಡುಗನೊಬ್ಬ ತೊಂದರೆ ನೀಡುತ್ತಿದ್ದ ಬಗ್ಗೆ ಹೇಳಿದ್ದಳು ಎಂದು ಆಕೆಯ ಕುಟುಂಬಸ್ಥರು ಮಾಧ್ಯಮಗಳಿಗೆ ಹೇಳಿರುವುದಾಗಿ ವರದಿಯಾಗಿದೆ.
ನೀವು ಆತ್ಮಹತ್ಯಾ ಆಲೋಚನೆಗಳನ್ನು ಹೊಂದಿದ್ದರೆ ಅಥವಾ ಸ್ನೇಹಿತರ ಬಗ್ಗೆ ಚಿಂತೆ ಮಾಡುತ್ತಿದ್ದರೆ ಅಥವಾ ಮಾನಸಿಕ ಬೆಂಬಲದ ಅಗತ್ಯವಿದ್ದರೆ ಸ್ನೇಹ ಫೌಂಡೇಶನ್ - 04424640050, ಟೆಲಿ ಮನಸ್ - 14416 (24x7 ಲಭ್ಯವಿದೆ) ಅಥವಾ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ ಸಹಾಯವಾಣಿ - 02225521111 ಗೆ ಕರೆ ಮಾಡಿ. ಇದು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ ಲಭ್ಯವಿದೆ.
Advertisement