
ಮೈಸೂರು: ಮೈಸೂರಿನ ದೇವನೂರು ಲೇಔಟ್‌ನಲ್ಲಿ ಬಿಜೆಪಿ ಎಂಎಲ್‌ಸಿ ಎಎಚ್ ವಿಶ್ವನಾಥ್ ಕೂಡ ತಮ್ಮ ಪತ್ನಿ ಶಾಂತಮ್ಮ ಹೆಸರಿನಲ್ಲಿ ನಿವೇಶನ ಪಡೆದಿದ್ದಾರೆ ಎಂದು ಮುಡಾದ ಅಧ್ಯಕ್ಷ ಕೆ.ಮರೀಗೌಡ ಅವರು ಹೇಳಿದ್ದು, ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದಾರೆ.
ನಗರದ ಜಲದರ್ಶಿನಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಪತ್ನಿ ಹೆಸರಿನಲ್ಲಿಯೇ ಬದಲಿ ನಿವೇಶನ ಪಡೆದಿರುವ ಎಚ್.ವಿಶ್ವನಾಥ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇತರರ ವಿರುದ್ಧ ಟೀಕೆ ಮಾಡುತ್ತಿರುವುದು ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ. ವಿಶ್ವನಾಥ್ ಅವರ ಪತ್ನಿ ಶಾಂತಮ್ಮ ಅವರು ದೇವನೂರು ಮೂರನೇ ಹಂತದಲ್ಲಿ 2525 ಸಂಖ್ಯೆಯ 40*60 ಚದರ ಅಡಿ ನಿವೇಶನ ಪಡೆದಿದ್ದರು. ಬಳಿಕ ಅದನ್ನು ರಿಂಗ್ ರಸ್ತೆಗೆ ಸಮೀಪ ಇರುವ 307 ಸಂಖ್ಯೆಯ ನಿವೇಶನಕ್ಕೆ ಬದಲಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಮುಡಾದಲ್ಲಿ ನಡೆದಿರುವ ಎಲ್ಲ ಅಕ್ರಮಗಳು ತನಿಖೆಯಾಗುತ್ತಿದ್ದು, ಈ ಹಂತದಲ್ಲಿ ಹೆಚ್ಚು ಮಾತನಾಡುವುದಿಲ್ಲ. ಐಎಎಸ್ ಅಧಿಕಾರಿಗಳ ತಂಡ ವರದಿ ಕೊಟ್ಟ ನಂತರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಆಪ್ತ ಹಿನಕಲ್ ಪಾಪಣ್ಣಗೆ ಮುಡಾದಿಂದ ನೀಡಲಾಗಿದ್ದ, ಬದಲಿ ನಿವೇಶನವನ್ನು ಹಗರಣದ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದ್ದು, ಅವರಿಗೆ ಸೇರಿದ ಸರ್ವೆ ನಂಬರ್ 211 ರಲ್ಲಿ 3.05. ಕುಂಟೆ ಜಮೀನನ್ನು 1981 ರಲ್ಲಿ ಸ್ವಾಧೀನಕ್ಕೆ ಪಡೆದು 1984 ರಲ್ಲಿ ಕೈ ಬಿಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಆಪ್ತ ಹಿನಕಲ್ ಪಾಪಣ್ಣ 2024 ರಲ್ಲಿ ಮುಡಾದಿಂದ ವಿಜಯನಗರದ ವಿವಿಧ ಬಡಾವಣೆಗಳಲ್ಲಿ 20 ನಿವೇಶನ ನೀಡುವಂತೆ ಮುಡಾ ಆದೇಶ ಮಾಡಲಾಗಿದ್ದು, ಈ ಆದೇಶಕ್ಕೂ ಸದ್ಯ ತಡೆ ನೀಡಲಾಗಿದೆ.
ಮುಡಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ವಿರುದ್ಧ ಕೇಳಿ ಬರುತ್ತಿರುವ 50:50 ಅನುಪಾತದ ನಿವೇಶನ ಹಂಚಿಕೆ ವಿವಾದ, ವಿವಾದವಲ್ಲ. ಕಾನೂನು ರೀತಿಯೇ 50:50 ಅನುಪಾತದ ಅಡಿ ಅವರಿಗೇ ನಿವೇಶನ ನೀಡಲಾಗಿದೆ. 50:50 ಅನುಪಾತದ ಅಡಿ ನಿವೇಶನ ಕೊಡುವ ಬಗ್ಗೆ ಗೆಜೆಟ್ನಲ್ಲಿ ನೋಟಿಫಿಕೇಷನ್ ಆಗಿದ್ದು, 2015ರಲ್ಲಿ 40/60 ಅನುಪಾತದಲ್ಲಿ ನಿವೇಶನ ನೀಡುವ ಆದೇಶ ಇತ್ತು. ಬಳಿಕ 2020ರಲ್ಲಿ 50:50 ಅನುಪಾತದ ಅಡಿ ನಿವೇಶನ ಕೊಡುವ ಆದೇಶವಾಗಿದ್ದು, ಅದರನ್ವಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೂ ನಿವೇಶನ ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಮೈಸೂರು ನಗರದ ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ವಿವರಿಸಿದರು.
Advertisement