
ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿರುವುದು ನಿಜ. ಆದರೆ, ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಪರಿಸ್ಥಿತಿ ಇನ್ನೂ ಇಲ್ಲ ಎಂದು ರಾಜ್ಯ ಸರ್ಕಾರ ಸೋಮವಾರ ಹೇಳಿದೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಡೆಂಗ್ಯೂ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಿಸಬೇಕು ಎಂಬ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗಿರುವುದು ಸತ್ಯ. ಅವುಗಳನ್ನು ಕಡಿಮೆ ಮಾಡಲು ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕ್ಕೆ ಸೂಚಿಸಲಾಗಿದೆ. ಸಂಸದ ಡಾ.ಸಿ.ಎನ್. ಮಂಜುನಾಥ್ ಅವರೊಂದಿಗೂ ನಾನೇ ಖುದ್ದಾಗಿ ಮಾತನಾಡಿ ಸಲಹೆ ಪಡೆದಿದ್ದೇನೆ. ಜೊತೆಗೆ ಸೊಳ್ಳೆ ನಿಯಂತ್ರಣಾ ಕ್ರಮ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.
ಈ ಸಂಬಂಧ ತಾಂತ್ರಿಕ ಸಲಹಾ ಸಮಿತಿ ಜತೆ ಸಭೆ ನಡೆಸಿ ಅಗತ್ಯ ಬೆಡ್ ವ್ಯವಸ್ಥೆ, ಔಷಧ ವ್ಯವಸ್ಥೆಎಲ್ಲವನ್ನೂ ಮಾಡಿದ್ದೇವೆ. ಸೋಂಕಿತರು ಹಾಗೂ ಸಾವನ್ನಪ್ಪಿರುವವರ ಮಾಹಿತಿಯನ್ನೂ ಬಿಡುಗಡೆ ಮಾಡಿದ್ದೇವೆ. ಒಂದೆರಡು ಕಡೆ ಝೀಕಾ ವೈರಸ್ ಕೂಡ ಕಂಡುಬಂದಿದೆ. ಇವೆರಡೂ ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಸೋಂಕಿತ ಸೊಳ್ಳೆಗಳಿಂದ ಮಾತ್ರ ಹರಡುತ್ತವೆ. ಹೀಗಾಗಿ ಆತಂಕ ಸೃಷ್ಟಿಸುವುದು ಬೇಡ ಎಂದರು.
ಕೊಳಗೇರಿ ಪ್ರದೇಶಗಳಿಗೆ ಬಿಜೆಪಿ ನಾಯಕರ ಭೇಟಿ ಬಗ್ಗೆ ಮಾತನಾಡಿ, ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದರು.
ಡೆಂಗಿ ಹೆಚ್ಚಳಕ್ಕೂ, ನಾನು ಮಂಗಳೂರಿನ ಅಂತಾರಾಷ್ಟ್ರೀಯ ಸರ್ಕಾರಿ ಈಜುಕೊಳಕ್ಕೆ ಭೇಟಿ ನೀಡಿ ಈಜಿದ್ದಕ್ಕೂ ಎತ್ತಣ ಸಂಬಂಧ?. ಮಂಗಳೂರಿನಲ್ಲಿ ನಾನು ಈಜಿದ್ದು ಮಾತ್ರವಲ್ಲ, ಡೆಂಗ್ಯೂ ಈಡಿಸ್ ಸೊಳ್ಳೆಗಳ ಲಾರ್ವಾ ನಾಶಪಡಿಸುವ ಬೃಹತ್ ಅಭಿಯಾನಕ್ಕೆ ಕೂಡ ಚಾಲನೆ ಕೊಟ್ಟಿದ್ದೇನೆ.
ಮನೆ ಮನೆಗೆ ತೆರಳಿ ನೀರು ಶೇಖರಣೆಯಾಗಿರುವ ಸ್ಥಳಗಳನ್ನ ಗುರುತಿಸಿ ಅಲ್ಲಿಯ ನಿವಾಸಿಗಳನ್ನ ಎಚ್ಚರಿಸಿದ್ದೇವೆ. ಎರಡು ದಿನ ಪ್ರವಾಸದಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಹಾಗೂ ತಾಲೂಕು ಮಟ್ಟದಲ್ಲಿ ಜನತಾ ದರ್ಶನ ನಡೆಸಿದ್ದೇನೆ. ಹೀಗಿರುವಾಗ ಬಿಜೆಪಿ ನಾನು ಈಜುಕೊಳ್ಳದಲ್ಲಿ ಈಜಿದ್ದನ್ನೇ ಪ್ರಶ್ನೆ ಮಾಡಿದೆ.
ಬಿಜೆಪಿಗರಿಗೆ ಈಜು ಒಂದು ರೀತಿಯಲ್ಲಿ ಮೋಜು ಮಸ್ತಿಯಾಗಿರಬಹುದು. ಆದರೆ, ನನಗಲ್ಲ.. ನಾನು ಮಂಗಳೂರಿನ ಸರ್ಕಾರಿ ಈಜುಕೊಳಕ್ಕೆ ಭೇಟಿ ನೀಡಿದ್ದೇನೆ ಹೊರೆತು ಬಿಜೆಪಿಯವರ ರೀತಿ ಯಾವುದೋ ರೆಸಾರ್ಟ್ ಗೆ ಹೋಗಿಲ್ಲ. ಅದು ಬೆಳಗ್ಗೆ 6 ಗಂಟೆಗೆ ಎದ್ದು, ಸಮಯ ಬಿಡುವು ಮಾಡಿಕೊಂಡು ನಾನು ಈಜುಕೊಳಕ್ಕೆ ಹೋಗಿದ್ದೆ. ಏಕೆಂದರೆ ಈಜುಕೊಳ್ಳಕ್ಕೆ ಭೇಟಿ ನೀಡುವುದು ನನ್ನ ಮಂಗಳೂರು ಪ್ರವಾಸದ ಒಂದು ಭಾಗವಾಗಿತ್ತು ಎಂದು ಸ್ಪಷ್ಟನೆ ನೀಡಿದರು.
Advertisement