ಶೀಘ್ರದಲ್ಲೇ 2,000 ಲೈನ್‌ಮನ್‌ಗಳ ನೇಮಕ: ಸಚಿವ ಕೆ ಜೆ ಜಾರ್ಜ್

ಈ ಬಾರಿ ಆರ್‌ ಟಿಪಿಎಸ್, ವೈಟಿಪಿಎಸ್, ಬಿಟಿಪಿಎಸ್ ಉಷ್ಣ ಸ್ಥಾವರದಲ್ಲಿ ದಾಖಲೆ ವಿದ್ಯುತ್ ಉತ್ಪಾದನೆ ಮಾಡಿದ್ದರಿಂದ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸಾಧ್ಯವಾಯಿತು. ಅಧಿಕಾರಿಗಳ ಶ್ರಮ ಪ್ರಶಂಸನೀಯ.
ಸಚಿವ ಕೆ.ಜೆ.ಜಾರ್ಜ್
ಸಚಿವ ಕೆ.ಜೆ.ಜಾರ್ಜ್
Updated on

ರಾಯಚೂರು: ಇಂಧನ ಇಲಾಖೆಗೆ ಸದ್ಯದಲ್ಲೇ 2 ಸಾವಿರ ಲೈನ್‍ಮೆನ್‍ಗಳ ನೇಮಕ ಆಗಲಿದ್ದು, ಈ ಸಂಬಂಧ 15 ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಬುಧವಾರ ಹೇಳಿದರು.

ಬುಧವಾರ ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಲಾಖೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ ಸಚಿವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಲೈನ್‍ಮೆನ್‍ಗಳ ಹುದ್ದೆಗೆ ರಾಜ್ಯಾದ್ಯಂತ ಒಂದೇ ದಿನ ನೇಮಕ ಪ್ರಕ್ರಿಯೆ ನಡೆಯಲಿದ್ದು, ಪಾರದರ್ಶಕತೆಗೆ ಒತ್ತು ನೀಡಲಾಗುತ್ತದೆ ಎಂದು ಹೇಳಿದರು.

ವೈಟಿಪಿಎಸ್ ಹುದ್ದೆಗಳನ್ನು ಭರ್ತಿ ಮಾಡುವಾಗ ಸ್ಥಳಿಯರಿಗೆ ಆದ್ಯತೆ ನೀಡಬೇಕು ಮತ್ತು 371 ಜೆ ಅನ್ವಯ ಮೀಸಲು ನೀಡಬೇಕು. ಆದರೆ ನುರಿತ ಕೆಲಸಗಾರರು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸ್ಥಳೀಯರ ನೇಮಕ ಆಗುತ್ತಿಲ್ಲ ಎಂಬ ಮಾತು ಕೇಳಿಬಂದಿದೆ. ಆದುದರಿಂದ ಎಷ್ಟು ಜನ ಬೇಕು ಅಂತ ನಿರ್ಧರಿಸಿ, ಅವರಿಗೆ ಕೆಪಿಸಿಎಲ್‍ನಿಂದ ಅಗತ್ಯ ತರಬೇತಿ ಕೊಡಿಸಲು ಅಗತ್ಯ ಕ್ರಮ ವಹಿಸಲಾಗುವುದು.

ನಮ್ಮ ರಾಜ್ಯದ ಯುವ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಜತೆಗೆ, ಆ ಉದ್ಯೋಗಕ್ಕೆ ಪೂರಕವಾದ ಕೌಶಲ್ಯ ತರಬೇತಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ತಿಳಿಸಿದರು.

ಸಚಿವ ಕೆ.ಜೆ.ಜಾರ್ಜ್
ಬೇಸಿಗೆಯಲ್ಲಿ ಬೇಡಿಕೆ ತೀವ್ರ ಹೆಚ್ಚಳದ ನಡುವೆಯೂ ಲೋಡ್ ಶೆಡ್ಡಿಂಗ್ ಇಲ್ಲದೆ ವಿದ್ಯುತ್ ಪೂರೈಕೆ: ಕೆಜೆ ಜಾರ್ಜ್

ಈಗಾಗಲೇ 1 ಸಾವಿರ ಸಹಾಯಕ ಇಂಜಿನಿಯರ್ ಗಳ (ಎಇ), ಕಿರಿಯ ಇಂಜಿನಿಯರ್ ಗಳ (ಜೆಇ) ನೇಮಕ ಮಾಡಿ ಕಾರ್ಯಾದೇಶವನ್ನೂ ನೀಡಿದ್ದೇವೆ. ಇಂಧನ ಇಲಾಖೆಗೆ ಹೊಸದಾಗಿ ನೇಮಕಗೊಂಡಿರುವ 400 ಸಹಾಯಕ ಇಂಜಿನಿಯರ್‌ ಗಳಿಗೆ ಇತ್ತೀಚೆಗೆ ಕಾರ್ಯಾನುಭವ ತರಬೇತಿ ನೀಡಲಾಗಿದೆ. ತ್ವರಿತ ನೇಮಕಾತಿಗಾಗಿ ಈ ಅಭ್ಯರ್ಥಿಗಳು ನನಗೆ ಮನವಿ ಸಲ್ಲಿಸಿದ್ದರು. ಇಲಾಖೆಯ ಹಿರಿಯ ಅಧಿಕಾರಿಗಳ ನಿರಂತರ ಪ್ರಯತ್ನದಿಂದ 6 ತಿಂಗಳೊಳಗೆ ನೇಮಕ ಆದೇಶ ನೀಡಲಾಗಿದೆ ಎಂದು ಹೇಳಿದರು.

ಈ ಬಾರಿ ಆರ್‌ ಟಿಪಿಎಸ್, ವೈಟಿಪಿಎಸ್, ಬಿಟಿಪಿಎಸ್ ಉಷ್ಣ ಸ್ಥಾವರದಲ್ಲಿ ದಾಖಲೆ ವಿದ್ಯುತ್ ಉತ್ಪಾದನೆ ಮಾಡಿದ್ದರಿಂದ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸಾಧ್ಯವಾಯಿತು. ಅಧಿಕಾರಿಗಳ ಶ್ರಮ ಪ್ರಶಂಸನೀಯ. ಅವರೆಲ್ಲನ್ನೂ ಅಭಿನಂದಿಸಲೆಂದೇ ಇಲ್ಲಿಗೆ ಬಂದಿದ್ದೇನೆ. ಕಳೆದ ಜನವರಿಯಿಂದ ಮೇ ಅಂತ್ಯದವರೆಗೆ ಪ್ರತಿನಿತ್ಯ ಸರಾಸರಿ 2 ಸಾವಿರ ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಅದರಲ್ಲೂ ಎಪ್ರಿಲ್ ನಲ್ಲಿ 2,400 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿದ್ದು ದಾಖಲೆಯಾಗಿದೆ.

ಅದರಲ್ಲೂ ಆರ್‌ ಟಿಪಿಎಸ್ ವಿದ್ಯುತ್ ಘಟಕಗಳಿಂದ ನಿಗದಿತ ಗುರಿ ಮೀರಿ ಹೆಚ್ಚಿನ ವಿದ್ಯುತ್ ಉತ್ಪಾದನೆ ಆಗಿದೆ. ದಿನಕ್ಕೆ 210 ಮೆಗಾವ್ಯಾಟ್ ಸಾಮರ್ಥ್ಯದ 3ನೇ ವಿದ್ಯುತ್ ಘಟಕದಲ್ಲಿ ಎ.4ರಂದು 216 ಮೆಗಾವ್ಯಾಟ್ ಉತ್ಪಾದನೆ ಮಾಡಲಾಗಿದೆ. ತಾಂತ್ರಿಕ ಸಮಸ್ಯೆಗಳ ನಡುವೆಯೂ ಆರ್‌ ಟಿಪಿಎಸ್‍ನ ಏಳು ವಿದ್ಯುತ್ ಘಟಕಗಳು ಸೇರಿ ಶೇ.85ರಷ್ಟು ವಿದ್ಯುತ್ ಉತ್ಪಾದಿಸಿವೆ ಎಂದು ಮಾಹಿತಿ ನೀಡಿದರು.

ನಮ್ಮ ಸರಕಾರ ಬಂದ ಮೇಲೆ ಕಲ್ಲಿದ್ದಲು ಸಮಸ್ಯೆ ಇಲ್ಲದಂತೆ ನೋಡಿಕೊಂಡಿದ್ದೇವೆ. ಒಂದು ತಿಂಗಳಿಗೆ ಬೇಕಾದ ಕಲ್ಲಿದ್ದಲು ಸಂಗ್ರಹದಲ್ಲಿದೆ. ಕೇಂದ್ರ ಸರಕಾರದ ಸಹಭಾಗಿತ್ವದ 3 ಕಲ್ಲಿದ್ದಲು ಘಟಕಗಳಿಂದ ಕಲ್ಲಿದ್ದಲು ಬರುತ್ತಿದೆ. ಕ್ಯಾಪ್ಟಿವ್ ಮೈನಿಂಗ್‍ನಿಂದಲೂ ಕಲ್ಲಿದ್ದಲು ಬರುತ್ತಿದೆ. ಪ್ರಸಕ್ತ 14 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹವಿದೆ ಎಂದು ಸಚಿವರು ಮಾಹಿತಿ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com