
ನವದೆಹಲಿ: ಕಳೆದ ವರ್ಷ ತೀವ್ರ ಬರಗಾಲದಿಂದ ಡೆತ್ ಸ್ಟೋರೇಜ್ ತಲುಪಿದ್ದ ಕೆಆರ್ ಎಸ್ ಗೆ ಈ ಬಾರಿ ಉತ್ತಮ ಮಳೆಯಿಂದ ನೀರು ಹರಿದುಬರುತ್ತಿದ್ದು, ಈ ಭಾಗದ ಜನರಲ್ಲಿ ಸಂತಸ ಮನೆ ಮಾಡಿದೆ. ಇದರ ಮಧ್ಯ ಕಾವೇರಿ ನೀರು ನಿರ್ವಹಣಾ ಸಮಿತಿ, ತಮಿಳುನಾಡಿಗೆ ಜುಲೈ 31 ರವರೆಗೆ ಪ್ರತಿನಿತ್ಯ 1 ಟಿಎಂಸಿ ನೀರು ಹರಿಸುವಂತೆ ಗುರುವಾರ ಸೂಚನೆ ನೀಡಿದೆ.
ಇಂದು ದೆಹಲಿಯಲ್ಲಿ ನಡೆದ CWRC ಯ 99ನೇ ಸಭೆಯಲ್ಲಿ, ಜುಲೈ 12 ರಿಂದ ಜುಲೈ 31ರ ವರೆಗೆ ಬಿಳಿಗುಂಡ್ಲುವಿನಲ್ಲಿ ಸಂಚಿತ ನೀರಿನ ಹರಿವನ್ನು ದಿನಕ್ಕೆ 1 ಟಿಎಂಸಿ (ಸರಾಸರಿ 11,500 ಕ್ಯುಸೆಕ್ಸ್ ಹರಿವು) ಇರುವಂತೆ ಕರ್ನಾಟಕವು ತನ್ನ ಜಲಾಶಯಗಳಿಂದ ನೀರಿನ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಶಿಫಾರಸು ಮಾಡಿದೆ.
ಕಳೆದ ಜಲವರ್ಷದಲ್ಲಿ ಕರ್ನಾಟಕ ನೀರು ಸರಿಯಾಗಿ ಹರಿಸಿಲ್ಲ. ಪ್ರಸಕ್ತ ಜಲವರ್ಷದಲ್ಲಿ ಮನ್ಸೂನ್ ಸಾಮಾನ್ಯವಾಗಿದೆ. ಕಾವೇರಿ ಕೊಳ್ಳದ ಡ್ಯಾಂಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ಹೀಗಾಗಿ ನೀರು ಹರಿಸುವಂತೆ ಶಿಫಾರಸು ಮಾಡಿ ಎಂದು ತಮಿಳುನಾಡು ಪರ ಅಧಿಕಾರಿಗಳು CWRC ಗೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಕರ್ನಾಟಕ ಸಹ ಕಾವೇರಿಯಲ್ಲಿ ನೀರಿನ ಕೊರತೆ ಇದೆ. ಈ ಮಾನ್ಸೂನ್ ಸಾಮಾನ್ಯವಾಗಿಲ್ಲ, ಶೇ, 28 ರಷ್ಟು ಮಳೆ ಕೊರತೆಯಾಗಿದೆ. ಹೀಗಾಗಿ ನೀರು ಬಿಡಲು ಆಗುವುದಿಲ್ಲ ಎಂದು ಕರ್ನಾಟಕದ ಪರ ಅಧಿಕಾರಿಗಳು ವಾದ ಮಂಡಿಸಿದ್ದಾರೆ.
ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿನ ನೀರಿನ ಸಂಗ್ರಹಣೆಯು 58.668 ಟಿಎಂಸಿ ಇದ್ದು, ಮೆಟ್ಟೂರಿನಿಂದ 4.905 ಟಿಎಂಸಿ ಮತ್ತು ಭವಾನಿಯಿಂದ 0.618 ಟಿಎಂಸಿ (ಒಟ್ಟು 5.542 ಟಿಎಂಸಿ) ನೀರು ನದಿಗೆ ಬಿಡುಗಡೆ ಮಾಡಿರುವುದಲ್ಲದೆ ತಮಿಳುನಾಡಿನ ಮೂರು ಜಲಾಶಯಗಳಲ್ಲಿ 24.705 ಟಿಎಂಸಿ ನೀರು ಇದೆ ಎಂದು ರಾಜ್ಯದ ಪರ ಅಧಿಕಾರಿಗಳು ವಿವರಣೆ ನೀಡಿದರು.
ಎರಡೂ ರಾಜ್ಯಗಳ ವಾದ-ಪ್ರತಿವಾದ ಆಲಿಸಿದ CWRC, ಪ್ರತಿನಿತ್ಯ 1 ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿದೆ.
ಇಂದಿನ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ ಆಣೆಕಟ್ಟು 124.80 ಅಡಿ ಗರಿಷ್ಠ ಮಟ್ಟದ ಸಾರ್ಮರ್ಥ ಹೊಂದಿದ್ದು, ಡ್ಯಾಂಗೆ 6,146 ಕ್ಯೂಸೆಕ್ ಒಳಹರಿವು ಬರುತ್ತಿದೆ. ಈ ಪೈಕಿ ಕುಡಿಯುವುದಕ್ಕಾಗಿ 1972 ಕ್ಯೂಸೆಕ್ ನೀರನ್ನು ನಾಲೆಗೆ ಹರಿಸಲಾಗುತ್ತಿದೆ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 26.372 ಟಿಎಂಸಿ ನೀರು ಸಂಗ್ರಹವಾಗಿದೆ.
Advertisement