ಎಂಬಿ ಪಾಟೀಲ್
ಎಂಬಿ ಪಾಟೀಲ್

ಜಪಾನ್-ಕೊರಿಯಾ ಕಂಪನಿಗಳಿಂದ ರಾಜ್ಯದಲ್ಲಿ 6,450 ಕೋಟಿ ರೂ ಹೂಡಿಕೆ; ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ!

35 ಉದ್ಯಮಗಳ ಪ್ರಮುಖರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಮುಂದಿನ ವರ್ಷ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜನೆ ಮಾಡಲಾಗುತ್ತಿದ್ದು, ʼಇನ್ವೆಸ್ಟ್ ಕರ್ನಾಟಕ 2025’ರಲ್ಲಿ ಭಾಗವಹಿಸಲು ಟೋಕಿಯೊ ಮತ್ತು ಸೋಲ್‌ನಲ್ಲಿ ನಡೆದ ರೋಡ್‌ಷೋಗಳಲ್ಲಿ 200 ಕಂಪನಿಗಳಿಗೆ ಆಹ್ವಾನ ನೀಡಲಾಗಿದೆ.
Published on

ಬೆಂಗಳೂರು: ನಮ್ಮ ಇಲಾಖೆಯ ನಿಯೋಗ ಜಪಾನ್ ಮತ್ತು ದಕ್ಷಿಣ ಕೊರಿಯಾಗಳಲ್ಲಿ 2 ವಾರಗಳ ಕಾಲ ಪ್ರವಾಸ ಮಾಡಿದ್ದು, ಅಲ್ಲಿಂದ 6,450 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆಯ ಬದ್ಧತೆ ಪಡೆದುಕೊಂಡಿದೆ ಎಂದು ಬೃಹತ್ ಮತ್ತು ಮಧ್ಯಮ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ ಅವರು ಬುಧವಾರ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ನಿಯೋಗದ ಭೇಟಿಯಲ್ಲಿ ಜಪಾನ್ ಮತ್ತು ದಕ್ಷಿಣ ಕೊರಿಯಾದ 6 ಪ್ರಮುಖ ಕಂಪನಿಗಳಿಂದ ಹೂಡಿಕೆ ಬದ್ಧತೆಯಾಗಿದೆ. ಕರ್ನಾಟಕದ ಆರ್ಥಿಕ ಪ್ರಗತಿ ಉತ್ತೇಜಿಸಲಿರುವ ಪ್ರಮುಖ ವಲಯಗಳಲ್ಲಿ ಗಮನಾರ್ಹ ಹೂಡಿಕೆಯಾಗಲಿದ್ದು, ಭವಿಷ್ಯದಲ್ಲಿ 25,000 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಸಾಧ್ಯತೆಗಳು ಕಂಡುಬಂದಿವೆ ಎಂದು ಹೇಳಿದ್ದಾರೆ.

ಈ ಬದ್ಧತೆ ಹಾಗೂ ಒಪ್ಪಂದಗಳ ಫಲವಾಗಿ ರಾಜ್ಯದಲ್ಲಿ 1,000 ಉದ್ಯೋಗ ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಕರ್ನಾಟಕದ ನಿಯೋಗವು ಅಲ್ಲಿನ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗಾಗಿ (ಎಸ್‌ಎಂಇ) ಬಂಡವಾಳ ಹೂಡಿಕೆ ರೋಡ್‌ ಷೋಗಳನ್ನು ನಡೆಸಿದ್ದೇವೆ. ತಯಾರಿಕಾ ವಲಯಕ್ಕೆ ರಾಜ್ಯದಲ್ಲಿ ಇರುವ ಉತ್ತೇಜನಕಾರಿ ಪೂರಕ ಸೌಲಭ್ಯಗಳ ಮಾಹಿತಿ ವಿನಿಮಯ ಮಾಡಿಕೊಂಡಿದೆ.

35 ಉದ್ಯಮಗಳ ಪ್ರಮುಖರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಮುಂದಿನ ವರ್ಷ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜನೆ ಮಾಡಲಾಗುತ್ತಿದ್ದು, ʼಇನ್ವೆಸ್ಟ್ ಕರ್ನಾಟಕ 2025’ರಲ್ಲಿ ಭಾಗವಹಿಸಲು ಟೋಕಿಯೊ ಮತ್ತು ಸೋಲ್‌ನಲ್ಲಿ ನಡೆದ ರೋಡ್‌ಷೋಗಳಲ್ಲಿ 200 ಕಂಪನಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.

ಜಪಾನ್‌ನಲ್ಲಿ ನಡೆದ ಸಭೆಗಳಲ್ಲಿ ರೆನೆಸಾಸ್ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್, ಟೊಯೊಟಾ ಮೋಟರ್ ಕಾರ್ಪೊರೇಷನ್, ಯಮಹಾ ಮೋಟರ್ ಕಂಪನಿ, ಸುಮಿಟೊಮೊ ಹೆವಿ ಇಂಡಸ್ಟ್ರೀಸ್, ಪ್ಯಾನಾಸೋನಿಕ್ ಎನರ್ಜಿ, ನಿಡೆಕ್ ಕಾರ್ಪೊರೇಷನ್, ನಿಸಾನ್ ಮೋಟರ್ ಕಾರ್ಪೊರೇಷನ್, ಬ್ರದ‌ರ್ ಇಂಡಸ್ಟ್ರೀಸ್, ಶಿಮಾಡ್ಡು ಕಾರ್ಪೊರೇಷನ್, ಹಿಟಾಚಿ ಮತ್ತಿತರ ಕಂಪನಿಗಳನ್ನು ಸಂಪರ್ಕಿಸಲಾಗಿದೆ.

ಎಂಬಿ ಪಾಟೀಲ್
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 5 ಸಾವಿರ ಎಕರೆ ಭೂಮಿ ಅಗತ್ಯ- ಎಂ ಬಿ ಪಾಟೀಲ್

ದಕ್ಷಿಣ ಕೊರಿಯಾದಲ್ಲಿ ವ್ಯಾಪಾರ, ಕೈಗಾರಿಕೆ ಮತ್ತು ಇಂಧನ ಸಚಿವಾಲಯದ ಉಪ ಮಂತ್ರಿ, ಕೊರಿಯಾದ ಜಿಯೊಂಗಿ ಪ್ರಾಂತ್ಯದ ವೈಸ್ ಗವರ್ನರ್ ಮತ್ತು ಸೋಲ್ ಮೆಟ್ರೊಪಾಲಿಟನ್ ಸರ್ಕಾರದಲ್ಲಿ ಆರ್ಥಿಕ ನೀತಿಯ ಉಪ ಮೇಯರ್ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಜೊತೆಗೆ ಸಭೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ದಕ್ಷಿಣ ಕೊರಿಯಾದಲ್ಲಿ ನಡೆದ ಸಭೆಗಳಲ್ಲಿ ಸ್ಯಾಮ್ಸಂಗ್‌ ಎಲೆಕ್ಟ್ರಾನಿಕ್ಸ್‌, ಎಲ್‌ಜಿ ಎನರ್ಜಿ ಸೊಲ್ಯೂಷನ್ಸ್, ಎಲ್‌ಎಕ್ಸ್‌ ಎಲೆಕ್ಟ್ರಾನಿಕ್ಸ್, ನಿಫ್ಕೊ ಕೊರಿಯಾ, ಒಸಿಐ ಹೋಲ್ಡಿಂಗ್ಸ್, ಕ್ರಾಫ್ಟನ್‌, ಎಚ್‌ವೈಎಸಿ, ಹುಂಡೈ ಮೋಟರ್ಸ್‌, ವೈಜಿ-1, ಹೊಯ್ಸಂಗ್‌ ಅಡ್ವಾನ್ಸಡ್‌ ಮಟೇರಿಯಲ್ಸ್‌ ಮುಂತಾದವು ಸೇರಿವೆ ಎಂದು ಸಚಿವರು ವಿವರಿಸಿದರು.

ಜಪಾನಿನ ಪ್ರಮುಖ ಇಂಧನ ಕಂಪನಿಯಾಗಿರುವ ಒಸಾಕಾ ಗ್ಯಾಸ್, ಮುಂದಿನ 5 ವರ್ಷಗಳಲ್ಲಿ ಅನಿಲ ವಿತರಣಾ ಮೂಲಸೌಲಭ್ಯ ವಿಸ್ತರಿಸಲು ರೂ.5000 ಕೋಟಿ (600 ದಶಲಕ್ಷ ಡಾಲರ್) ಮೊತ್ತದ ಬಂಡವಾಳ ಹೂಡಿಕೆ ಮಾಡಲು ಬದ್ಧತೆ ತೋರಿದೆ. ಕೊರಿಯಾದ ಮಷಿನ್ ಟೂಲ್ಸ್ ಕಂಪನಿಯಾಗಿರುವ ಡಿಎನ್ ಸೊಲ್ಯೂಷನ್ಸ್, ಕೈಗಾರಿಕಾ ಯಂತ್ರೋಪಕರಣಗಳು ಮತ್ತು ಸ್ವಯಂಚಾಲಿತ ವ್ಯವಸ್ಥೆಗಳ ತಯಾರಿಕಾ ಘಟಕ ಸ್ಥಾಪಿಸಲು 1000 ಕೋಟಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ. ವಾಹನ ಬಿಡಿಭಾಗಗಳನ್ನು ಪೂರೈಸುವ ಜಪಾನಿನ ಅವೊಯಮಾ ಸೈಸಕುಶ್, ತುಮಕೂರು ಬಳಿಯ ಜಪಾನ್ ಕೈಗಾರಿಕಾ ಟೌನ್‌ಶಿಪ್‌ನಲ್ಲಿ ತಯಾರಿಕಾ ಘಟಕ ಸ್ಥಾಪಿಸಲು ರೂ. 210 ಕೋಟಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ.

ಬ್ಯಾಟರಿ ಸೆಲ್‌ಗಳ ಸಂಗ್ರಹ ಮತ್ತು ಪರೀಕ್ಷಾ ಕೇಂದ್ರ ಹಾಗೂ ಪರಿಸರ ಸಂರಕ್ಷಣೆ ಸಲಕರಣೆ ತಯಾರಿಸುವ ಘಟಕ ಸ್ಥಾಪಿಸಲು ಜಂಟಿಯಾಗಿ ರೂ.210 ಮೊತ್ತದ ಬಂಡವಾಳ ಹೂಡಿಕೆ ಮಾಡುವ ಒಪ್ಪಂದಕ್ಕೆ ಸಹಿ ಹಾಕಿವೆ. ಸುಮಿಟೊಮೊ ಹೆವಿ ಇಂಡಸ್ಟ್ರೀಸ್ (ಎಸ್‌ಎಚ್‌ಐ) ಬೆಂಗಳೂರಿನಲ್ಲಿ ತನ್ನ ಮುಖ್ಯ ಕಚೇರಿಯನ್ನು ತೆರೆಯಲು ಸಜ್ಜಾಗಿದ್ದು, 2024 ರ ಅಂತ್ಯಕ್ಕೆ ಉದ್ಘಾಟನೆ ನೆರವೇರಿಸಲು ಉದ್ದೇಶಿಸಿದೆ. ಈ ತಕ್ಷಣದ ಹೂಡಿಕೆಗಳನ್ನು ಹೊರತುಪಡಿಸಿ, ವಾಹನ ತಯಾರಿಕೆ, ಎಲೆಕ್ಟ್ರಾನಿಕ್ಸ್ ಮತ್ತು ಇಂಧನ ಪರಿಹಾರ ವಲಯಗಳಲ್ಲಿ ರೂ.25,000 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಸಾಧ್ಯತೆಗಳನ್ನೂ ರಾಜ್ಯದ ನಿಯೋಗವು ಗುರುತಿಸಿದೆ. ಕರ್ನಾಟಕವು ಜಾಗತಿಕ ಹೂಡಿಕೆದಾರರ ಪಾಲಿಗೆ ಆಕರ್ಷಕ ತಾಣವಾಗಿರುವುದರ ಮಹತ್ವವನ್ನು ಇದು ಸೂಚಿಸುತ್ತದೆ ಎಂದು ಹೇಳಿದರು.

ಕರ್ನಾಟಕದ ಕೈಗಾರಿಕಾ ಅಭಿವೃದ್ಧಿ ಕುರಿತು ದೂರವಾಣಿ ಮೂಲಕ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಶೀಘ್ರದಲ್ಲೇ ಖುದ್ದು ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಲಾಗುವುದು. ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳು ಸೇರಿದಂತೆ ಬೃಹತ್ ಕೈಗಾರಿಕೆಗಳನ್ನು ರಾಜ್ಯಕ್ಕೆ ತರಲು ಆಸಕ್ತಿ ವ್ಯಕ್ತಪಡಿಸಿದವರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com