
ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಮ್ಮ ಸಮಸ್ಯೆ ಹೇಳಿಕೊಂಡು ಸಾಮಾನ್ಯ ಜನರು ಮಾಡಿಕೊಂಡ ಮನವಿ ಪತ್ರ ಕಸದ ಬುಟ್ಟಿಗೆ ಸೇರಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದ್ದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಇತ್ತೀಚೆಗೆ, ಚಾಮರಾಜನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೇಟಿ ನೀಡಿದ್ದಾಗ, ಅವರಿಗೆ ಸಲ್ಲಿಸಲಾಗಿದ್ದ ಮನವಿ ಪತ್ರಗಳು ಕಸದ ರಾಶಿಯಲ್ಲಿ ಪತ್ತೆಯಾಗಿವೆ. ಅವು ರೈತರಿಂದ ಬಂದಿದ್ದ ಮನವಿ ಪತ್ರಗಳಾಗಿದ್ದು, ಅವುಗಳು ಕಸದ ರಾಶಿಯಲ್ಲಿ ಸಿಕ್ಕಿರುವುದು ಎಲ್ಲರ ಅಚ್ಚರಿ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯನವರು ಚಾಮರಾಜನಗರಕ್ಕೆ ಬಂದಿದ್ದು, ಅಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಮತದಾರರ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ಹಾಗೂ ವರುಣಾ ಕ್ಷೇತ್ರದ ಮತದಾರರ ನಂಟು 40 ವರ್ಷದ್ದು ಎಂದು ಭಾಷಣ ಮಾಡಿದ್ದರು. ಅಲ್ಲದೆ, ತಮ್ಮ ರಾಜಕೀಯದ ಏಳುಬೀಳುಗಳನ್ನು ನೆನಪಿಸಿಕೊಂಡು ತಮ್ಮನ್ನು ಬೆಳೆಸಿದ ಮತದಾರರಿಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದರು.
ಈ ವೇಳೆ ರೈತರು ಹಾಗೂ ಕೊರೊನಾ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಸರಬರಾಜು ಕೊರತೆಯಾಗಿ ಸಾವಿಗೀಡಾಗಿದ್ದ ಹಲವಾರು ರೋಗಿಗಳು ಸಂಬಂಧಿಕರು ಸೂಕ್ತ ಪರಿಹಾರಕ್ಕಾಗಿ ಮನವಿಗಳನ್ನು ಸಲ್ಲಿಸಿದ್ದರು. ಅದೆಲ್ಲವನ್ನೂ ಸಿದ್ದರಾಮಯ್ಯ ಸ್ವೀಕರಿಸಿದ್ದರು. ಆದರೆ ಮನವಿ ಪತ್ರಗಳು ಕಸದ ರಾಶಿಯಲ್ಲಿ ಸಿಕ್ಕಿದ್ದು, ಅವು ಸಿಎಂ ಕಾರ್ಯಕ್ರಮ ನಡೆದಿದ್ದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಒಟ್ಟುಮಾಡಲಾಗಿರುವ ಕಸದ ರಾಶಿಯಲ್ಲಿ ಸಿಕ್ಕಿವೆ ಎಂದು ಹೇಳಲಾಗಿದೆ.
ಭಾರೀ ಆಕ್ರೋಶ: ಸಿಎಂ ಸಿದ್ದರಾಮಯ್ಯನವರಿಗೆ ನೀಡಲಾಗಿರುವ ಮನವಿ ಪತ್ರಗಳು ಕಸದ ರಾಶಿಯಲ್ಲಿ ಸಿಕ್ಕಿರುವುದಕ್ಕೆ ರೈತ ಸಂಘಟನೆಗಳು ಹಾಗೂ ಅನೇಕ ಸಂಘ - ಸಂಸ್ಥೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವುದಕ್ಕಾಗಿ, ಅನೇಕ ಕುಟುಂಬಗಳು ದಿನಗಟ್ಟಲೆ ಕಾದು ಕುಳಿತಿದ್ದರು. ಜನಸಾಮಾನ್ಯರಿಗೆ ಮುಖ್ಯಮಂತ್ರಿಗಳನ್ನು ಹೋಗಿ ತಲುಪುವುದೇ ದೊಡ್ಡ ಕಷ್ಟ. ಅಂಥದ್ದರಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು, ಬಿಸಿಲಿನಲ್ಲಿ ಕಾಯ್ದು, ಸಮಯದ ಪರಿವೆಯಿಲ್ಲದೇ ಇದ್ದು ಸಲ್ಲಿಸಲಾಗಿರುವ ಮನವಿಗಳನ್ನು ಹೀಗೆ ಕಸದ ಬುಟ್ಟಿಗೆ ಎಸೆದಿರುವುದು ಮನವಿ ಸಲ್ಲಿಸಿದವರಿಗೆ ಅಪಮಾನ ಮಾಡಿದಂತೆ ಎಂದು ಆಕ್ಷೇಪಿಸಿದ್ದಾರೆ.
ತಮ್ಮ ಮನವಿ ಪತ್ರಗಳನ್ನು ಕಸದ ಬುಟ್ಟಿಗೆ ಎಸೆಯಬೇಕಿದ್ದರೆ ತಮ್ಮ ಮನವಿಗಳನ್ನು ಸ್ವೀಕರಿಸಿದ್ದಾದರು ಯಾಕೆ? ಯಾಕಿಷ್ಟೊಂದು ನಿರ್ಲಕ್ಷ್ಯ? ಸ್ವತಃ ಮುಖ್ಯಮಂತ್ರಿಯನ್ನೇ ಭೇಟಿ ಮಾಡಿ ಸಲ್ಲಿಸಿದ್ದ ಮನವಿ ಪತ್ರಗಳಿಗೆ ಈ ಗತಿಯಾದರೆ ಅಧಿಕಾರಿಗಳಿ ಸಲ್ಲಿಸುವ ಮನವಿ ಗಳ ಕಥೆ ಏನು? ಎಂದು ಆಕ್ರೋಶ ಹೊರ ಹಾಕಿದ್ದಾರೆ.
Advertisement