
ತುಮಕೂರು: ತುಮಕೂರು ನಗರದ ಹೊರವಲಯದ ದಿಬ್ಬೂರು ಪ್ರದೇಶದಿಂದ ಹೊರರಾಜ್ಯಕ್ಕೆ ಮಾರಾಟವಾಗಿದ್ದ 11 ವರ್ಷದ ಬಾಲಕಿಯೊಬ್ಬಳನ್ನು ರಕ್ಷಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ದಿಬ್ಬೂರು ವಾಸಿಗಳಾದ ಚೌಡಯ್ಯ ದಂಪತಿ 11 ವರ್ಷದ ಹೆಣ್ಣು ಮಗುವನ್ನು ಆಂಧ್ರ ಪ್ರದೇಶದ ಬಾತುಕೋಳಿ ವ್ಯಾಪಾರಿಯೋರ್ವನಿಗೆ ಬಾಲಕಿಯ ಚಿಕ್ಕಮ್ಮನ ಮನೆಯವರು ಮಾರಾಟ ಮಾಡಿದ್ದರು.
ವಿಷಯ ತಿಳಿದ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಭೇದಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ. 35,000 ರೂ.ಗಳಿಗೆ ಬಾಲಕಿಯನ್ನು ಮಾರಾಟ ಮಾಡಲಾಗಿತ್ತು ಎಂದು ತಿಳಿದುಬಂದಿದೆ.
ಕಾರ್ಮಿಕ ಕಚೇರಿಗೆ ಬಂದಿದ್ದ ದೂರು ಆಧರಿಸಿ ತುಮಕೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಪತ್ರದ ಮೂಲಕ ಮಗುವಿನ ರಕ್ಷಣೆಗಾಗಿ ಕೋರಲಾಗಿತ್ತು.
ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ತುಮಕೂರು ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಮಗುವನ್ನು ರಕ್ಷಿಸಿ ಬಾಲಮಂದಿರಕ್ಕೆ ಹಾಜರುಪಡಿಸಿದ್ದಾರೆ.
ತುಮಕೂರಿನ ದಿಬ್ಬೂರಿನ ನಿವಾಸಿ ಕುಮಾರ್ ಹಾಗೂ ಚೌಡಮ್ಮ ದಂಪತಿಯ ಪುತ್ರಿ ಶಿವಮ್ಮಳನ್ನು ಬಾಣಂತನಕ್ಕೆಂದು ಚೌಡಮ್ಮ ತಂಗಿ ಸುಜಾತ ಕರೆದುಕೊಂಡು ಹೋಗಿದ್ದಳು. ಮನೆಗೆ ಕರೆತಂದಿದ್ದ ಬಾಲಕಿಯನ್ನು ಚೀಟಿ ಹಣಕ್ಕಾಗಿ ಬಾತುಕೋಳಿ ವ್ಯಾಪಾರಿ ಬಳಿ ಸುಜಾತ ಅತ್ತೆ-ಮಾವ ಜೀತಕ್ಕಿಟ್ಟಿದ್ದರು. ಮಗಳ ಬಗ್ಗೆ ಕೇಳಲು ಹಲವು ಬಾರಿ ಸುಜಾತ ಮನೆಗೆ ಬಾಲಕಿ ತಂದೆ-ತಾಯಿ ಕರೆ ಮಾಡಿದ್ದರು. ಈ ವೇಳೆ ಅಲ್ಲಿದ್ದಾಳೆ, ಇಲ್ಲಿದ್ದಾಳೆ ಎಂದು ಸುಜಾತ ಮನೆಯವರು ಸುಳ್ಳು ಹೇಳಿದ್ದರು. ಆದರೆ, ಮಗಳನ್ನ ಜೀತಕ್ಕಿಟ್ಟಿರುವ ಬಗ್ಗೆ ಪೋಷಕರಿಗೆ ಸಂಬಂಧಿ ಯುವಕ ಮಾಹಿತಿ ನೀಡಿದ್ದ. ಇದರಿಂದ ಬಾಲಕಿಯನ್ನು ಮಾರಾಟ ಮಾಡಿದ್ದ ವಿಷಯ ಬೆಳಕಿಗೆ ಬಂದಿತ್ತು.
ಬಳಿಕ ಚೌಡಮ್ಮ ವಿಚಾರಿಸಿದಾಗ ಶ್ರೀರಾಮುಲು ಎಂಬಾತನಿಗೆ ಬಾಲಕಿಯನ್ನು ಮಾರಾಟ ಮಾಡಿರುವ ಬಗ್ಗೆ ಸುಜಾತ ಹೇಳಿಕೊಂಡಿದ್ದಳು. ಬಾಲಕಿಯನ್ನ ಖರೀದಿಸಿದ್ದ ಶ್ರೀರಾಮುಲು ಬಾತುಕೋಳಿ ಮೇಯಿಸಲು ಒತ್ತೆಯಾಳಾಗಿ ಇರಿಸಿಕೊಂಡಿದ್ದ. ವಿಷಯ ತಿಳಿದ ಚೌಡಮ್ಮ, ಮಗಳನ್ನು ತನ್ನೊಂದಿಗೆ ಕಳುಹಿಸುವಂತೆ ಬೇಡಿಕೊಂಡಿದ್ದಳು. ಇದಕ್ಕೆ ಶ್ರೀರಾಮುಲು ಒಪ್ಪಿರಲಿಲ್ಲ. ಬಾಲಕಿಯನ್ನು ತಾನು ಖರೀದಿಸಿದ್ದು, ಸಾಲದ ಹಣ ಕೊಟ್ಟು ಕರೆದುಕೊಂಡು ಹೋಗುವಂತೆ ಹೇಳಿದ್ದ. ಹೀಗಾಗಿ ತುಮಕೂರಿಗೆ ಬಂದಿದ್ದ ಚೌಡಮ್ಮ ಮಗಳ ಸ್ಥಿತಿಯ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಬಾಲಕಿ ತಾಯಿಯ ದೂರು ಆಧರಿಸಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಿಂದ ತಕ್ಷಣ ಎಚ್ಚೆತ್ತ ಪೊಲೀಸರು ಬಾಲಕಿಯ ರಕ್ಷಣೆ ಮಾಡಿದ್ದು, ಸದ್ಯ ಬಾಲಕಿಯನ್ನು ಜಿಲ್ಲಾ ಬಾಲ ಮಂದಿರದಲ್ಲಿ ಇರಿಸಲಾಗಿದೆ.
ಈ ಬಗ್ಗೆ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್ಕೇಪ್ ಆಗಿರುವ ಆರೋಪಿಗಳಿಗಾಗಿ ಪೊಲೀಸರರು ಹುಡುಕಾಟ ನಡೆಸುತ್ತಿದ್ದಾರೆ.
Advertisement