ನೀಟ್ ಅಕ್ರಮ ಕುರಿತು ಸದನದಲ್ಲಿ ಗದ್ದಲ: ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಸರ್ಕಾರ
ಬೆಂಗಳೂರು: ನೀಟ್ ಪರೀಕ್ಷಾ ಅಕ್ರಮದ ವಿಚಾರ ವಿಧಾನ ಪರಿಷತ್‍ನಲ್ಲಿ ಸೋಮವಾರ ಪ್ರತಿಧ್ವನಿಸಿತು. ಚರ್ಚೆ ವೇಳೆ ಸರ್ಕಾರ ಕೇಂದ್ರದ ವಿರುದ್ಧ ತೀವ್ರವಾಗಿ ಕಿಡಿಕಾರಿತು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ನೀಟ್ ಅಕ್ರಮ ಕುರಿತು ಕೇಳಿದ ಪ್ರಶ್ನೆಗೆ ಸಚಿವ ಶರಣ ಪ್ರಕಾಶ್ ಪಾಟೀಲ್ ಉತ್ತರಿಸಿದರು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಇಡೀ ದೇಶದಲ್ಲಿ ನೀಟ್ ಪರೀಕ್ಷೆ ಬರೆದು ಕೇಂದ್ರದ ಯಡವಟ್ಟು ಅಕ್ರಮದಿಂದ 24 ಲಕ್ಷ ಮಕ್ಕಳು ಆತಂಕದಲ್ಲಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಕೇಂದ್ರ ಎಡವಿದೆ, ಈ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಗುಮಾನಿಯಾಯಿತು. ಸಿಬಿಐ ತನಿಖೆಗೆ ನಾವು ಆಗ್ರಹಿಸಿದೆವು, ಆದರೆ, ಅಕ್ರಮ ಆಗಿಲ್ಲ ಎಂದು ಕೇಂದ್ರ ಸಚಿವರು ಸಮರ್ಥಿಸಿಕೊಂಡರು. ನಂತರ ಸಿಬಿಐಗೆ ವಹಿಸಿದೆ, ಅನೇಕ ರಾಜ್ಯದಲ್ಲಿ ಎಫ್ಐಆರ್ ದಾಖಲಾಗಿದೆ. ಸುಪ್ರೀಂಕೋರ್ಟ್ನಲ್ಲಿ ವಿಷಯ ಇದೆ. ನೀಟ್ ಕೇಂದ್ರದ ಎನ್ಎಂಸಿ ಕಾಯ್ದೆಯ ಪ್ರಕಾರ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ತರಲಾಗಿದೆ. ಸಂಸತ್ ಕಾಯ್ದೆ ತಂದಿದೆ ಹಾಗಾಗಿ ನಾವು ನಮ್ಮ ಹಂತದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್ ಅಥವಾ ಸಂಸತ್ತು ಪರಿಹಾರ ನೀಡಬೇಕು ಎಂದರು.
ಪಿಜಿ ಎಂಟ್ರೆನ್ಸ್ ಸೇರಿ ನಾಲ್ಕೈದು ಪರೀಕ್ಷೆ ಮುಂದೂಡಿಕೆಯಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ ಎಂಬ ನಿರಂತರವಾಗಿ ಕೇಂದ್ರದ ಮೇಲೆ ಆರೋಪಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ಆರೋಪ ಪ್ರತ್ಯಾರೋಪ ಶುರುವಾಗಿ ಗದ್ದಲದ ವಾತಾವರಣ ಸೃಷ್ಟಿಯಾಯಿತು.
ಅಂತಿಮವಾಗಿ ಪತ್ರ ಕೊಡಿ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುತ್ತೇನೆ ಎನ್ನುವ ಭರವಸೆ ನೀಡಿದ ಉಪ ಸಭಾಪತಿ ಪ್ರಾಣೇಶ್ ಗದ್ದಲಕ್ಕೆ ತೆರೆ ಎಳೆದರು.
ಏಮ್ಸ್ ಸ್ಥಾಪಿಸದೆ ಕೇಂದ್ರದಿಂದ ಮಲತಾಯಿ ಧೋರಣೆ
ಹಿಂದುಳಿದ ಕಲ್ಯಾಣ ಕರ್ನಾಟಕದ ರಾಯಚೂರಿನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಸ್ಥಾಪನೆ ಮಾಡಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಸಿದ್ಧವಿದ್ದರೂ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಸಚಿವರು ಅಸಮಾಧಾನ ಹೊರ ಹಾಕಿದರು.
ವಿಧಾನ ಪರಿಷತ್‍ನಲ್ಲಿ ಜೆಡಿಎಸ್‍ನ ತಿಪ್ಪೇಸ್ವಾಮಿ ಅವರು ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆಯನ್ನು ಯಾವಾಗ ಸ್ಥಾಪನೆ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು, ಸಂಸದರು, ಕಲ್ಯಾಣ ಕರ್ನಾಟಕ ಭಾಗದ ಶಾಸಕರು, ಕೇಂದ್ರದ ಆರೋಗ್ಯ ಸಚಿವರನ್ನು ಎರಡು ಬಾರಿ ಭೇಟಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿಷಾದಿಸಿದರು.
ಏಮ್ಸ್ ಆಸ್ಪತ್ರೆ ಸ್ಥಾಪನೆ ಮಾಡಿದರೆ ಭೂಮಿ, ವಿದ್ಯುತ್, ನೀರು ಸೇರಿದಂತೆ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಕಲ್ಪಿಸಿ ಕೊಡುವುದಾಗಿ ಹೇಳಿದ್ದೆವು. ಆದರೂ ಕೇಂದ್ರ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ದೇಶದ ಎಲ್ಲ ರಾಜ್ಯಗಳಲ್ಲೂ ಏಮ್ಸ್ ಸ್ಥಾಪನೆ ಮಾಡಲು ಅವಕಾಶ ನೀಡಲಾಗಿದೆ. ಆದರೆ ಕರ್ನಾಟಕ ಮತ್ತು ಕೇರಳಕ್ಕೆ ಅವಕಾಶ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಸಚಿವರು ಆಕ್ಷೇಪಿಸಿದರು.
ಏಮ್ಸ್ ಸಂಸ್ಥೆಯನ್ನು ಕೇಂದ್ರ ಸರ್ಕಾರ ನಮಗೇನು ಉಚಿತವಾಗಿ ಕೊಡುವುದಿಲ್ಲ. ಬೇರೆ ರಾಜ್ಯಗಳಿಗೆ ಕೊಟ್ಟಂತೆ ನಮಗೂ ಕೊಡಬೇಕು ಎಂಬುದಷ್ಟೇ ನಮ್ಮ ಮನವಿ. ನಿಮ್ಮ ಸಂಸದರ ಮೂಲಕ ಒತ್ತಡ ಹಾಕಿಸಿ ಎಂದು ಬಿಜೆಪಿ ಸದಸ್ಯ ಸಿ. ಟಿ. ರವಿ ಅವರಿಗೆ ಶರಣ ಪ್ರಕಾಶ್ ತಿರುಗೇಟು ನೀಡಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ