ಪಂಚೆ ಧರಿಸಿ ಬಂದ ರೈತನಿಗೆ ನೋ ಎಂಟ್ರಿ ಎಂದ GT ಮಾಲ್ ಗೆ 7 ದಿನ ಬೀಗ: ಸಚಿವ ಭೈರತಿ ಸುರೇಶ್ ಘೋಷಣೆ

ಎಲ್ಲ ಮಾಲ್ ಗಳಿಗೂ ಒಂದೇ ರೂಲ್ಸ್ ಮಾಡಬೇಕು. ಪಂಚೆ ನಮ್ಮ ಸಂಸ್ಕೃತಿ ಎಂದ ಸ್ಪೀಕರ್ ಮಾತಿಗೆ ಧ್ವನಿಗೂಡಿಸಿದ ಶಾಸಕ ಲಕ್ಷಣ ಸವದಿ, ಸರ್ಕಾರದಿಂದ ಒಂದು ಆದೇಶ ಹೊರಡಿಸಲಿ, ಆ ಮಾಲ್ ಗೆ ವಾರಗಳ ಕಾಲ ಪವರ್ ಕಟ್ ಮಾಡಲಿ ಎಂದು ಆಗ್ರಹಿಸಿದರು.
ಅವಮಾನಿತಗೊಂಡು ನಂತರ ಸನ್ಮಾನಿತರಾದ ರೈತ ಫಕೀರಪ್ಪ
ಅವಮಾನಿತಗೊಂಡು ನಂತರ ಸನ್ಮಾನಿತರಾದ ರೈತ ಫಕೀರಪ್ಪ
Updated on

ಬೆಂಗಳೂರು: ಹಾವೇರಿ ಮೂಲದ 60 ವರ್ಷ ವಯಸ್ಸಿನ ಫಕೀರಪ್ಪ ಎಂಬ ರೈತರು ಸಾಂಪ್ರದಾಯಿಕ ಪಂಚೆ ಧರಿಸಿ ಬಂದಿದ್ದರು ಎಂಬ ಕಾರಣಕ್ಕೆ ಒಳಗೆ ಬಿಡದೆ ಅವಮಾನಿಸಿದ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಜಿ ಟಿ ಮಾಲ್ ಗೆ 7 ದಿನ ಬೀಗ ಬಿದ್ದಿದೆ.

ವ್ಯಕ್ತಿಯ ಬಟ್ಟೆ ನೋಡಿ ಅವಮಾನಿಸಿದ ಜಿ ಟಿ ಮಾಲ್ ಗೆ ಏಳು ದಿನ ಬೀಗ ಜಡಿಯಲಾಗುವುದು. ಈ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆ ಮಾತನಾಡಿದ್ದೇವೆ. ಕಾನೂನಿನಲ್ಲಿ ಶಿಕ್ಷೆಗೆ ಅವಕಾಶವಿದೆ ಎಂದಿದ್ದಾರೆ. ಹೀಗಾಗಿ ಮಾಲ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ ಎಂದರು.

ಇಂದು ಬೆಳಗ್ಗೆ ಸದನದಲ್ಲಿ ಜಿ.ಟಿ ಮಾಲ್ ನಲ್ಲಿ ರೈತನಿಗೆ ಅವಮಾನ ಆದ ವಿಚಾರ ಚರ್ಚೆಗೆ ಕಾರಣವಾಯ್ತು. ಜಿಟಿ ಮಾಲ್ ಒಳಗೆ ಪಂಚೆ ಉಟ್ಟ ರೈತನನ್ನ ಬಿಡದೆ ಅವಮಾನಿಸಿದ ವಿಚಾರವಾಗಿ ಸ್ಪೀಕರ್ ಯು.ಟಿ.ಖಾದರ್ ಗರಂ ಆದರು. ಅವನು ಎಷ್ಟೇ ದೊಡ್ಡವನು ಇರಲಿ, ಅವನಿಗೆ ತೋರಿಸಬೇಕು. ಅವಮಾನ ಮಾಡಿದ್ದನ್ನು ಖಂಡಿಸಬೇಕು. ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದರು.

ಎಲ್ಲ ಮಾಲ್ ಗಳಿಗೂ ಒಂದೇ ರೂಲ್ಸ್ ಮಾಡಬೇಕು. ಪಂಚೆ ನಮ್ಮ ಸಂಸ್ಕೃತಿ ಎಂದ ಸ್ಪೀಕರ್ ಮಾತಿಗೆ ಧ್ವನಿಗೂಡಿಸಿದ ಶಾಸಕ ಲಕ್ಷಣ ಸವದಿ, ಸರ್ಕಾರದಿಂದ ಒಂದು ಆದೇಶ ಹೊರಡಿಸಲಿ, ಆ ಮಾಲ್ ಗೆ ವಾರಗಳ ಕಾಲ ಪವರ್ ಕಟ್ ಮಾಡಲಿ ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸದಸ್ಯ ಅಶೋಕ್ ಪಟ್ಟಣ ಮಾತನಾಡಿ, ರಾಜ್ಯದ ಎಲ್ಲ ಕ್ಲಬ್ ಗಳು, ಮಾಲ್ ಗಳಲ್ಲಿ ಒಂದೇ ರೂಲ್ಸ್ ತರಬೇಕು. ಪಂಚೆ ಸೇರಿದಂತೆ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸುವುದರಿಗೆ ಎಂಟ್ರಿ ಕೊಡಬೇಕು ಎಂದರು.

ದೇವೇಗೌಡರು, ಸಿದ್ದರಾಮಯ್ಯ ಅವರು ಪಂಚೆ ಉಡ್ತಾರೆ, ಅವರು ಕ್ಲಬ್ ಗಳಿಗೆ ಏನಾದ್ರೂ ಹೋದರೆ ಬಿಡ್ತಾರೆ. ಆದರೆ, ಬೇರೆಯವರಿಗೆ ಆ ರೂಲ್ಸ್ ಇಲ್ವಾ ಎಂದು ಸಚಿವ ಬೈರತಿ ಸುರೇಶ್ ಪ್ರಶ್ನಿಸಿದರು. ಅಲ್ಲದೆ, ಸಚಿವ ಬೈರತಿ ಸುರೇಶ್, 7 ದಿನಗಳ ಕಾಲ‌ ಮಾಲ್ ಮುಚ್ಚಿಸುತ್ತೇವೆ. ಈಗಾಗಲೇ ಬಿಬಿಎಂಪಿ ಆಯುಕ್ತರ ಹತ್ತಿರ ಮಾತಾಡಿದ್ದೇವೆ. ಕಾನೂನಿನಲ್ಲಿ ಅವಕಾಶ ಇದೆ, ಸರ್ಕಾರದ ಕ್ರಮ ಕೈಗೊಳ್ಳಬಹುದು ಎಂದರು.

ಆಗ ಸಚಿವ ಭೈರತಿ ಸುರೇಶ್, ರೈತ ಸಮುದಾಯಕ್ಕೆ ಸಂಪ್ರದಾಯಕ್ಕೆ ಮಾಡಿದ ಅವಮಾನವಾಗಿದೆ. ಇಂತಹ ಘಟನೆಗಳನ್ನು ಸರ್ಕಾರ ಸಹಿಸುವುದಿಲ್ಲ. ಮುಂದೆ ಇಂತಹ ಘಟನೆ ನಡೆಯಬಾರದು ಎಂಬುದಕ್ಕೆ ಈ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ ಎಂದರು.

ಈ ಘಟನೆ ಮೊನ್ನೆ ಮಂಗಳವಾರ ನಡೆದಿದ್ದು ಸುದ್ದಿ ಮಾಧ್ಯಮಗಳಲ್ಲಿ ಇಂದು ವ್ಯಾಪಕವಾಗಿ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತ ಮಾಲ್ ಮಾಲೀಕರು ಒಳಗೆ ಬಿಡದ ವಾಚ್ ಮೆನ್ ನ್ನು ಕೆಲಸದಿಂದ ವಜಾ ಮಾಡಿದ್ದಲ್ಲದೆ ರೈತ ಫಕೀರಪ್ಪನನ್ನು ಕರೆದು ಮಾಲ್ ನಲ್ಲಿ ಇಂದು ಸನ್ಮಾನಿಸಿದ್ದಾರೆ. ಮಾಲ್​ ಇನ್​​ಚಾರ್ಜ್ ಸುರೇಶ್​​​ ಅವರು ಫಕೀರಪ್ಪಗೆ ಕ್ಷಮೆಯಾಚಿಸಿದ್ದಾರೆ.

ಸಂಸ್ಕೃತಿ, ಸಂಪ್ರದಾಯ ಪ್ರತೀಕ: ಪಂಚೆ, ಧೋತಿ ಧರಿಸುವುದು ನಮ್ಮ ಭಾರತೀಯ ಅದರಲ್ಲೂ ದಕ್ಷಿಣ ಭಾರತೀಯರ ಕನ್ನಡಿಗರ ಸಂಸ್ಕೃತಿ, ಸಂಪ್ರದಾಯ ಪ್ರತೀಕವಾಗಿದೆ. ಧರಿಸಿದ ಬಟ್ಟೆ ನೋಡಿಕೊಂಡು ಜನರಿಗೆ ಮಣೆ ಹಾಕಬಾರದು, ಅದು ಕ್ರಮ ಸರಿಯಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಕೂಡ ಹೇಳಿದ್ದಾರೆ.

ಎಫ್ ಐಆರ್ ದಾಖಲು: ಜಿ.ಟಿ ಮಾಲ್‌ನಲ್ಲಿ ಪಂಚೆ ಧರಿಸಿ ಬಂದ ಫಕೀರಪ್ಪನಿಗೆ ಮಾಲ್ ಪ್ರವೇಶ ನಿರಾಕರಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲ್ ಮಾಲೀಕರು ಹಾಗೂ ಸೆಕ್ಯುರಿಟಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ರೈತ ಫಕೀರಪ್ಪಗೆ ಅವಮಾನ ಮಾಡಲಾಗಿದೆ ಎಂದು ಧರ್ಮರಾಜಗೌಡ ಎಂಬುವವರು ಕೆ.ಪಿ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಾಲ್ ಮಾಲೀಕರು ಹಾಗೂ ಸೆಕ್ಯುರಿಟಿ ಅರುಣ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ದೂರು ಪಡೆದು ಕೆ.ಪಿ ಅಗ್ರಹಾರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಬಿಎನ್ಎಸ್ 126(2) ಅಡಿಯಲ್ಲಿ ಕೇಸ್ ದಾಖಲಾಗಿದೆ.

ಅವಮಾನಿತಗೊಂಡು ನಂತರ ಸನ್ಮಾನಿತರಾದ ರೈತ ಫಕೀರಪ್ಪ
ಅವಮಾನಿತರಿಂದಲೇ ಸಮ್ಮಾನ: ರೈತನಿಗೆ ಕ್ಷಮೆ ಕೇಳಿ ಸನ್ಮಾನಿಸಿದ ಬೆಂಗಳೂರಿನ ಜಿ ಟಿ ಮಾಲ್!

ನಡೆದ ಘಟನೆಯೇನು?: ಮೊನ್ನೆ ಮಂಗಳವಾರ ಸಂಜೆ 6ಕ್ಕೆ ರೈತ ಫಕೀರಪ್ಪ, ಮಗ ನಾಗರಾಜ್ ಮತ್ತು ಕುಟುಂಬದವರ ಜೊತೆ ಜಿ.ಟಿ ಮಾಲ್ ಗೆ ಕಲ್ಕಿ ಸಿನಿಮಾ ವೀಕ್ಷಣೆಗೆ ಆಗಮಿಸಿದ್ದರು. ಈ ವೇಳೆ ಪಂಚೆ ಹಾಕಿದ ಕಾರಣಕ್ಕೆ ಒಳಬಿಡದೆ ಅವಮಾನ ಮಾಡಿದ್ದರು. ಈ ವೇಳೆ ಮಗ ನಾಗರಾಜ್ ಸ್ನೇಹಿತ ನವೀನ್ ಫೋನ್ ಮಾಡಿ ಕರೆದಿದ್ದಾರೆ. ಈ ವೇಳೆಯಲ್ಲಿಯೂ ಪಂಚೆ ಉಟ್ಟೋರು ಬಿಡೋದಿಲ್ಲ ಅಂತ ಜಿ ಟಿ ಮಾಲ್ ಹೇಳಿದೆ. ಇದರಿಂದ ರೈತನಿಗೆ ಒಳಬಿಡದೆ ಜಿ ಟಿ ಮಾಲ್ ಅಪಮಾನ ಮಾಡಿದೆ ಕೂಡಲೇ ಕ್ಷಮೆ ಕೇಳಲು ಆಗ್ರಹಿಸಿದ್ದಾರೆ. ಅಲ್ಲದೇ ಮಾಲ್ ಮುಂದೆ ಒಂದು ಗಂಟೆ ಕಾದರೂ ಜಿ ಟಿ ಮಾಲ್ ಆಡಳಿತ ಮಂಡಳಿ ಕ್ಷಮೆ ಕೇಳದ ಪರಿಣಾಮ ಬೇಸತ್ತು ವೀಡಿಯೋ ಮಾಡಿ ತಮಗಾದ ಅವಮಾನ ಕುರಿತು ನವೀನ್ ಹೇಳಿಕೊಂಡ ವೇಳೆ ಘಟನೆ ಬೆಳಕಿಗೆ ಬಂದಿತ್ತು.

ಘಟನೆ ಬಳಿಕ ಆಕ್ರೋಶ ವ್ಯಕ್ತವಾಗುತ್ತಿದಂತೆ ನಿನ್ನೆ ರೈತ ಫಕೀರಪ್ಪ ಕರೆಸಿ ಸನ್ಮಾನ ಮಾಡಿ ಜಿಟಿ ಮಾಲ್ ಆಡಳಿತ ಮಂಡಳಿ ಕ್ಷಮೆ ಕೇಳಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com