
ಕಲಬುರಗಿ: ಪತ್ನಿಗೆ ಕೌಟುಂಬಿಕ ಹಿಂಸೆ ನೀಡಿ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದ ಪತಿಗೆ ಇಲ್ಲಿನ 5ನೇ ಹೆಚ್ಚುವರಿ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂ.ದಂಡ ವಿಧಿಸಿದೆ.
ರಾಮನಗರದ ಅಜೀಲಕುಮಾರ ಬಿರಾದಾರ ಶಿಕ್ಷೆಗೆ ಗುರಿಯಾದ ಆರೋಪಿ. ಪ್ರೀತಿಸಿ ಮದುವೆಯಾಗಿದ್ದ ಅನೀಲಕುಮಾರ ಒಂದು ಹೆಣ್ಣು ಮಗುವಾದ ನಂತರ ಪತ್ನಿಗೆ ಮನೆ ಕೆಲಸ ಸರಿಯಾಗಿ ಮಾಡಲು ಬರುವುದಿಲ್ಲ. ನೀನು ಅನ್ಯ ಜಾತಿಯವಳು ನಮ್ಮ ಮನೆಗೆ ಒಪ್ಪುವುದಿಲ್ಲ ಎಂದು ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಾರೆ.
ಇದರಂತೆ ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಈ ಸಂಬಂಧ ನೊಂದ ಮಹಿಳೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪಿಎಸ್‍ಐ ಚಂದ್ರಶೇಖರ್ ಅವರು ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ಅಭಿಯೋಜನೆಯು 10 ಜನ ಸಾಕ್ಷಿದಾರರನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಿದ್ದು, ಅಭಿಯೋಜನೆಯ ವಾದ ಪುರಸ್ಕರಿಸಿದ 5ನೇ ಹೆಚ್ಚುವರಿ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು ಆರೋಪಿಗೆ 2 ವರ್ಷ ಸಾಧಾ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
Advertisement