
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿಎಲ್ ಆನಂದ್ ಸೇರಿದಂತೆ 13 ಮಂದಿ ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಕರ್ನಾಟಕದ 55 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.
ಆನಂದ್ ಅವರು ಹಿರಿಯ ದರ್ಜೆಯ ಕರ್ನಾಟಕ ಆಡಳಿತ ಸೇವೆಗಳ (ಕೆಎಎಸ್) ಅಧಿಕಾರಿಯಾಗಿದ್ದು, ಜೂನ್, 2023 ರಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿ ನೇಮಕಗೊಂಡಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದರ ವಿರುದ್ಧ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ ನಂತರ ಸರ್ಕಾರ ಜುಲೈ 4 ರಂದು ಅವರನ್ನು ವರ್ಗಾವಣೆ ಮಾಡಿತ್ತು. ಬಳಿಕ ಜುಲೈ 9 ರಂದು, ಅವರ ವರ್ಗಾವಣೆಯನ್ನು ರದ್ದುಗೊಳಿಸಲಾಯಿತು.
ಆನಂದ್ ಅವರಲ್ಲದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಬ್ಬಗೋಡಿ ನಗರ ಪಾಲಿಕೆ ಆಯುಕ್ತರು ಮತ್ತು ಕೆಎಎಸ್ ಅಧಿಕಾರಿ ಕೆ.ನರಸಿಂಹಮೂರ್ತಿ ಅವರ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ತುಮಕೂರಿನ ಕೆಐಎಡಿಬಿ ಅಪರ ನಿರ್ದೇಶಕ ಸಿ.ಟಿ ಮುದ್ದುಕುಮಾರ್ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಸಿ.ಟಿ ಮುದ್ದುಕುಮಾರ್ ಅವರಿಗೆ ಸೇರಿದ ಒಟ್ಟು ಏಳು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಸಿ.ಟಿ ಮುದ್ದುಕುಮಾರ್ ಬೆಂಗಳೂರಿನ ನಾಗರಭಾವಿಯ ಎರಡನೇ ಹಂತದಲ್ಲಿ ವಾಸವಾಗಿದ್ದಾರೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಖನಿಜ ಭವನದಲ್ಲಿ ಕಚೇರಿ ಇದೆ.
ತುಮಕೂರು ನಗರದ ಬನಶಂಕರಿ ನಗರದಲ್ಲಿ, ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿರುವ ಸಿ.ಟಿ ಮುದ್ದುಕುಮಾರ್ ಅವರಿಗೆ ಸೇರಿದ ಮನೆ ಇದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಹೋಬಳಿ ರಂಗನಾಥಪುರದಲ್ಲಿ ಸಿ.ಟಿ ಮುದ್ದುಕುಮಾರ್ ಅವರಿಗೆ ಸೇರಿದ ಫಾರಂಹೌಸ್ ಇದೆ. ಅಲ್ಲದೆ ತುಮಕೂರಿನ ಅಂತರಸನಹಳ್ಳಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಪ್ಲಾಸ್ಟಿಕ್ ಬಾಟಲ್ ತಯಾರಿಕಾ ಘಟಕವಿದೆ. ಈ ಎಲ್ಲ ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಯಾದಗಿರಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಲವಂತ ರಾಠೋಡ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಿರಿಯ ಪಶು ವೈದ್ಯಾಧಿಕಾರಿ ಆರ್ ಸಿದ್ದಪ್ಪ, ವಾಣಿಜ್ಯ ತೆರಿಗೆ ಜಂಟಿ ಆಯುಕ್ತ ರಮೇಶ್ ಕುಮಾರ್, ಕಾನೂನು ಮಾಪನ ಶಾಸ್ತ್ರ ಉಪ ನಿಯಂತ್ರಕ ಅಥರ್ ಅಲಿ, ಅಂತರಗಂಗೆ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗೇಶ್ ಬಿ ಗೌಡ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಪ್ರಕಾಶ್ ಮತ್ತು ಮಂಡ್ಯ ಕಾರ್ಮಿಕ ಅಧಿಕಾರಿ ಚೇತನ್ ಕುಮಾರ್ ಶುಕ್ರವಾರ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಬೆಂಗಳೂರು, ತುಮಕೂರು, ಶಿವಮೊಗ್ಗ, ಯಾದಗಿರಿ ಮತ್ತು ಕಲಬುರ್ಗಿಯಲ್ಲಿ ದಾಳಿ ನಡೆಸಲಾಗಿದೆ.
Advertisement