
ಬೆಂಗಳೂರು: ನಗರದ ಖಾಸಗಿ ವಿಶ್ವವಿದ್ಯಾನಿಲಯದ ಕೌನ್ಸಿಲರ್ (24) ಹಾಗೂ ಆತನ ಸಹೋದರನ ಮೇಲೆ ಗುರುವಾರ 7 ಮಂದಿ ದುಷ್ಕರ್ಮಿಗಳು ಪಾನಮತ್ತರಾಗಿ ದಾಳಿ ನಡೆಸಿದ್ದಾರೆ.
ಟಿ ಇಮಾನ್ ಖಾನ್ ಮತ್ತು ಅವರ ಸಹೋದರ ಟಿ ಅಮಿನ್ ಖಾನ್, ಕೊತ್ತನೂರಿನಿಂದ ಬೆಳಗಿನ ಜಾವ 1.45 ರ ಸುಮಾರಿಗೆ ರೆಸ್ಟೋರೆಂಟ್ ನಿಂದ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಆರೋಪಿಗಳಲ್ಲಿ ಒಬ್ಬನಾದ ಮರಿಯಣ್ಣಪಾಳ್ಯದ ಮದರ್ ಥೆರೆಸಾ ಆಂಟನಿ ಚರ್ಚ್ ರಸ್ತೆಯಲ್ಲಿ ಕಾರಿನ ಮುಂದೆ ನಿಂತು ಅಡ್ಡಗಟ್ಟಿದ್ದಾನೆ. ಇಮಾನ್ ಮತ್ತು ಅಮೀನ್ ಕಾರಿನಿಂದ ಇಳಿದು ತಮ್ಮನ್ನು ಬಿಡುವಂತೆ ಮನವಿ ಮಾಡಿದಾಗ, ಇತರ ಆರೋಪಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಆರೋಪಿಗಳು ಕಾರಿನಲ್ಲಿದ್ದ ಜಾಕ್ ಮತ್ತು ಇತರ ಉಪಕರಣಗಳನ್ನು ತೆಗೆದುಕೊಂಡು ಇಮಾನ್ ಮತ್ತು ಅಮೀನ್ ಮೇಲೆ ಹಲ್ಲೆ ನಡೆಸಿದ್ದಾರೆ. ಕಾರಿನ ಗಾಜುಗಳನ್ನೂ ಒಡೆದಿದ್ದಾರೆ. ಯಾರೂ ಸಹಾಯಕ್ಕೆ ಬಾರದ ಕಾರಣ ಇಮಾನ್ ಮತ್ತು ಅಮೀನ್ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪೊಲೀಸರಿಗೆ ದೂರು ನೀಡಿದ್ದಾರೆ.
ನಾವು ಕೊತ್ತನೂರಿನಲ್ಲಿರುವ ನಮ್ಮ ರೆಸ್ಟೋರೆಂಟ್‌ನಿಂದ ಮನೆಗೆ ಹಿಂದಿರುಗುತ್ತಿದ್ದಾಗ ಆರೋಪಿಗಳಲ್ಲಿ ಒಬ್ಬರು ನಮ್ಮ ಕಾರನ್ನು ನಿಲ್ಲಿಸಿ ನಮ್ಮನ್ನು ಅಡ್ಡಗಟ್ಟಿ ನಿಲ್ಲಿಸಿದರು. ಶೀಘ್ರದಲ್ಲೇ ಇತರ ಆರೋಪಿಗಳು ಆತನೊಂದಿಗೆ ಸೇರಿಕೊಂಡು ನಮ್ಮ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು. ಅವರು ನಮ್ಮ ಕಾರಿನಲ್ಲಿದ್ದ ಉಪಕರಣಗಳನ್ನು ತೆಗೆದುಕೊಂಡು ನಮ್ಮ ಮೇಲೆ ಹಲ್ಲೆ ನಡೆಸಿದರು. ಅವರೆಲ್ಲರೂ ಕುಡಿದಿದ್ದರು ಎಂದು ಇಮಾನ್ ದಿನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಆರೋಪಿಗಳಲ್ಲಿ ಒಬ್ಬನನ್ನು ಅಕ್ಷಯ್ ರಿಚರ್ಡ್ ಎಂದು ಗುರುತಿಸಲಾಗಿದೆ. ನಮ್ಮ ಬಳಿ ಎಲ್ಲಾ ಆರೋಪಿಗಳ ವಿವರಗಳಿವೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement