
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸೋಮವಾರ ರಾತ್ರಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರದ ನೀಟ್ ಪರೀಕ್ಷೆ ಸೇರಿದಂತೆ ಮೂರು ತೀರ್ಮಾನಗಳ ವಿರುದ್ಧ ನಿರ್ಣಯ ಅಂಗೀಕರಿಸಲು ಅನುಮೋದನೆ ನೀಡಲಾಗಿದೆ.
ಇನ್ನೆರಡು ನಿರ್ಣಯಗಳು 'ಒಂದು ರಾಷ್ಟ್ರ, ಒಂದು ಚುನಾವಣೆ' ಮತ್ತು ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳ ಕ್ಷೇತ್ರಗಳ ವಿಂಗಡಣೆಯ ವಿರುದ್ಧವಾಗಿವೆ ಎಂದು ಹೇಳಲಾಗಿದೆ. ಈ ನಿರ್ಣಯಗಳನ್ನು ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಬಹುಶಃ ಮಂಗಳವಾರವೇ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
NEET ವಿವಾದ ನಡುವೆ ಇತ್ತೀಚೆಗೆ ರಾಷ್ಟ್ರೀಯ ಅರ್ಹತಾ-ಪ್ರವೇಶ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಮತ್ತು ರಾಜ್ಯಗಳು ತಮ್ಮದೇ ಆದ ಪ್ರವೇಶ ಪರೀಕ್ಷೆಗಳನ್ನು ನಡೆಸಲು ಅವಕಾಶ ಮಾಡಿಕೊಡುವಂತೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇತ್ತೀಚಿಗೆ ಕೇಂದ್ರವನ್ನು ಒತ್ತಾಯಿಸಿದ್ದರು.
ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಏಕಕಾಲದ ಚುನಾವಣೆಯ ಉನ್ನತ ಮಟ್ಟದ ಸಮಿತಿಯು 'ಒಂದು ರಾಷ್ಟ್ರ, ಒಂದು ಚುನಾವಣೆ' ಕುರಿತು ತನ್ನ ವರದಿಯನ್ನು ಮಾರ್ಚ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿತ್ತು. 2024 ರ ಲೋಕಸಭಾ ಚುನಾವಣೆಯ ನಂತರ ಜನಗಣತಿ ಮತ್ತು ಡಿಲಿಮಿಟೇಶನ್ ಪ್ರಕ್ರಿಯೆಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಹಿಂದೆ ಹೇಳಿದ್ದರು.
ಅಲ್ಲದೇ ಬಿಬಿಎಂಪಿ ವಿಭಜನೆಗೂ ಸಂಪುಟ ಸಭೆ ಅಸ್ತು ನೀಡಿದೆ. ಬೆಂಗಳೂರನ್ನು ಐದು ವಿಭಾಗಗಳಾಗಿ ವಿಂಗಡಿಸುವ ದಿ ಗ್ರೇಟರ್ ಬೆಂಗಳೂರು ಗೌವರ್ನೆನ್ಸ್ ಬಿಲ್ – 2024ಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ ಮಾಡುವ ಸಲಹೆಗೆ ಅನುಮೋದನೆ ನೀಡಲಾಗಿದೆ ಎನ್ನಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಿಎಂ ಅಧ್ಯಕ್ಷರಾಗಿರುತ್ತಾರೆ. 5-10 ಕಾರ್ಪೊರೇಷನ್‌ಗಳು ಇರಲಿದ್ದು, ಒಂದೊಂದು ಕಾರ್ಪೊರೇಷನ್‌ಗೆ ಒಬ್ಬ ಆಯುಕ್ತ ಇರಲಿದ್ದಾರೆ. ಜಲಮಂಡಳಿ, ಬಿಡಿಎ, ಬೆಸ್ಕಾಂ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಬರಲಿವೆ. ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ, ಕೇಂದ್ರ ಸೇರಿದಂತೆ ಇನ್ನಷ್ಟು ಬಿಬಿಎಂಪಿ ಆಗಿ ವಿಂಗಡಣೆ ಮಾಡಲಾಗುತ್ತದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯು ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ರಾಮನಗರ, ಕನಕಪುರ, ಆನೆಕಲ್, ಬೆಂಗಳೂರು ಗ್ರಾಮಾಂತರ ಪ್ರದೇಶದವರೆಗೆ ಇರಲಿದೆ.
Advertisement