ಹೊಸೂರು ರಸ್ತೆಯ ಸುರಂಗ ಮಾರ್ಗ, ಸ್ಕೈವಾಕ್'ಗಳು ದುಸ್ಥಿತಿಯಲ್ಲಿ: ಅಪಾಯಕ್ಕೆ ಆಹ್ವಾನ ನೀಡುತ್ತಿವೆ ಸೌಕರ್ಯ!

ಗಾರ್ವೆಬಾವಿಪಾಳ್ಯ, ಕೂಡ್ಲು ಗೇಟ್, ಸಿಂಗಸಂದ್ರ ಮತ್ತು ಹೊಸೂರಿನಿಂದ ಬೆಂಗಳೂರು ರಸ್ತೆಯ ಉದ್ದಕ್ಕೂ ಐದು ಸ್ಕೈವಾಕ್‌ಗಳು ಇದ್ದು, ಈ ಸ್ಕೈವಾಕ್ ಗಳು ದುಸ್ಥಿತಿಗೆ ತಲುಪಿವೆ.
ಹೊಸೂರು-ಬೆಂಗಳೂರು ರಸ್ತೆಯಲ್ಲಿನ ಸುರಂಗ ಮಾರ್ಗದಲ್ಲಿರುವ ದಯನೀಯ ಸ್ಥಿತಿ.
ಹೊಸೂರು-ಬೆಂಗಳೂರು ರಸ್ತೆಯಲ್ಲಿನ ಸುರಂಗ ಮಾರ್ಗದಲ್ಲಿರುವ ದಯನೀಯ ಸ್ಥಿತಿ.
Updated on

ಬೆಂಗಳೂರು: ಸುರಂಗಮಾರ್ಗಗಳು ಮತ್ತು ಸ್ಕೈವಾಕ್‌ಗಳು ಪಾದಚಾರಿಗಳಿಗೆ ರಸ್ತೆಗಳನ್ನು ಸುರಕ್ಷಿತವಾಗಿ ದಾಟಲು ಅನುವು ಮಾಡಿಕೊಡುವ ಗುರಿಯನ್ನು ಹೊಂದಿರುತ್ತವೆ. ಆದರೆ, ಬೆಂಗಳೂರು-ಹೊಸೂರು ರಸ್ತೆಯ ಆಡುಗೋಡಿಯಲ್ಲಿರುವ ನಿರ್ವಹಣೆ ಕೊರತೆಯಿಂದ ಜನರು ಓಡಾಡದ ಪರಿಸ್ಥಿತಿಗೆ ತಲುಪಿದೆ.

ಗಾರ್ವೆಬಾವಿಪಾಳ್ಯ, ಕೂಡ್ಲು ಗೇಟ್, ಸಿಂಗಸಂದ್ರ ಮತ್ತು ಹೊಸೂರಿನಿಂದ ಬೆಂಗಳೂರು ರಸ್ತೆಯ ಉದ್ದಕ್ಕೂ ಐದು ಸ್ಕೈವಾಕ್‌ಗಳು ಇದ್ದು, ಈ ಸ್ಕೈವಾಕ್ ಗಳು ದುಸ್ಥಿತಿಗೆ ತಲುಪಿವೆ. ನಿರ್ವಹಣೆ ಇಲ್ಲದೆ, ಈ ಸ್ಕೈವಾಕ್ ಗಳು ದುರ್ವಾಸನೆ, ಕಸ, ನೀರು ನಿಂತಿರುವುದು ಕಂಡು ಬಂದಿದೆ. ಅಲ್ಲದೆ, ಸ್ಕೈವಾಕ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳಿಲ್ಲದಿರುವುದು, ಕಾರ್ಯನಿರ್ವಹಿಸದ ಲಿಫ್ಟ್ ಸೇರಿದಂತೆ ಸಾಕಷ್ಟು ಸಮಸ್ಯೆಗಳಿರುವುದು ಕಂಡು ಬಂದಿದೆ.

ಸ್ಥಳೀಯ ಎಟಿಎಂ ಸೆಕ್ಯುರಿಟಿ ಗಾರ್ಡ್ ಪ್ರಕಾಶ್ ಎಂಬುವವರು ಮಾತನಾಡಿ, ಕುಡ್ಲು ಗೇಟ್ ಬಳಿಯ ಸುರಂಗಮಾರ್ಗ ಮೂತ್ರ ಮತ್ತು ಕಸದಿಂದ ಕೂಡಿದ್ದು, ಪ್ರವೇಶ ಮತ್ತು ನಿರ್ಗಮನ ಸ್ಥಳಗಳು ಜಲಾವೃತಗೊಂಡಿವೆ. ಹೀಗಾಗಿ ಪಾದಚಾರಿಗಳು ಪ್ರತೀನಿತ್ಯ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ ಎಂದು ಹೇಳಿದ್ದಾರೆ.

ರಾತ್ರಿ ವೇಳೆ ಈ ಸುರಂಗ ಮಾರ್ಗಗಳ ಮೂಲಕ ನಡೆಯುವುದು ಅಸುರಕ್ಷಿತವಾಗಿದೆ, ಕೆಲವರು ಸುರಂಗ ಮಾರ್ಗಗಳಲ್ಲಿ ಮಲಗುತ್ತಿದ್ದು, ಮದ್ಯಪಾನ ಮಾಡಿರುತ್ತಾರೆ, ದೀಪ, ಸಿಸಿಟಿವಿ ಕ್ಯಾಮೆರಾಗಳೂ ಇಲ್ಲದಿರುವುದರಿಂದ ಜನರಲ್ಲಿ ಆತಂಕವಿದೆ. ಹೀಗಾಗಿ ಸುರಂಗಮಾರ್ಗಗಳ ಬದಲಿಗೆ, ಸ್ಕೈವಾಕ್‌ಗಳು ಪಾದಚಾರಿಗಳಿಗೆ ಉತ್ತಮವಾಗಿದೆ, ಏಕೆಂದರೆ, ಮಹಿಳೆಯರಿಗೆ ಅದು ಸುರಕ್ಷಿತವಾಗಿವೆ. ಮೆಟ್ರೊ ಕಾಮಗಾರಿಯಿಂದಾಗಿ ಹೊಸ ಸ್ಕೈವಾಕ್ ನಿರ್ಮಿಸಲಾಗಿದೆ, ಆದರೆ ಇನ್ನೂ ಲಿಫ್ಟ್‌ಗಳನ್ನು ತೆರೆಯಲಾಗಿಲ್ಲ ಎಂದು ತಿಳಿಸಿದ್ದಾರೆ.

ಹೊಸೂರು-ಬೆಂಗಳೂರು ರಸ್ತೆಯಲ್ಲಿನ ಸುರಂಗ ಮಾರ್ಗದಲ್ಲಿರುವ ದಯನೀಯ ಸ್ಥಿತಿ.
'BBMP ಜಾಹೀರಾತು ನಿಯಮಗಳು 2024' ನೀತಿ ಪ್ರಕಟ: ಸರ್ಕಾರಿ, ಖಾಸಗಿ ಕಟ್ಟಡಗಳ ಮೇಲೆ ಜಾಹೀರಾತಿಗೆ ಅವಕಾಶ

ಸಿಂಗಸಂದ್ರದ ನಿವಾಸಿ 62 ವರ್ಷದ ರಾಜಮ್ಮ ಎಂಬುವವರು ಮಾತನಾಡಿ, ಹಲವಾರು ವರ್ಷಗಳಿಂದ ಸಿಂಗಸಂದ್ರದ ಸುರಂಗಮಾರ್ಗವನ್ನು ಸಾಕಷ್ಟು ಜನರು ಬಳಕೆ ಮಾಡುತ್ತಿದ್ದಾರೆ. ಆದರೂ, ಅಧಿಕಾರಿಗಳು ಸುರಂಗ ಮಾರ್ಗವನ್ನು ಸ್ವಚ್ಛವಾಗಿಡುವಲ್ಲಿ ವಿಫಲರಾಗಿದ್ದಾರೆ. ಪಾದಚಾರಿಗಳು ಸುರಂಗಮಾರ್ಗದ ಗೋಡೆಗಳು ಮತ್ತು ಮೆಟ್ಟಿಲುಗಳ ಮೇಲೆ ಪಾನ್ ಉಗುಳುತ್ತಾರೆ, ಮೂತ್ರ ವಿಸರ್ಜನೆ ಮಾಡುತ್ತಾರೆ. ಹೀಗಾಗಿ ನಡೆಯುವ ವೇಳೆ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ಸುರಂಗಮಾರ್ಗದೊಳಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ, ಆದರೆ, ಅವು ಬಹಳ ಸಮಯದಿಂದ ಕಾರ್ಯನಿರ್ವಹಿಸುತ್ತಿಲ್ಲ. ದೀಪಗಳನ್ನು ಅಳವಡಿಸದ ಕಾರಣ ಅಸುರಕ್ಷಿತ ಭಾವನೆ ಮೂಡುತ್ತದೆ ಎಂದು ಹೇಳಿದ್ದಾರೆ.

ಐಟಿ ವೃತ್ತಿಪರ ದಿವ್ಯಾ ಅವರು ಮಾತನಾಡಿ, ನನ್ನ ಸಹೋದರನಿಗೆ ಕಾಲು ಮುರಿತವಾಗಿದ್ದು, ಅವನಿಗೆ ನಡೆಯಲು ಸಾಧ್ಯವಾಗುತ್ತಿಲ್ಲ. ಎಸ್ಕಲೇಟರ್ ಕೆಲಸ ಮಾಡದ ಕಾರಣ ಮತ್ತು ಸ್ಕೈವಾಕ್‌ನಲ್ಲಿ ಲಿಫ್ಟ್ ಇಲ್ಲದ ಕಾರಣ ನಮಗೆ ರಸ್ತೆ ದಾಟಲು ಸಾಕಷ್ಟು ಕಷ್ಟವಾಗಿತ್ತು ಎಂದು ಹೇಳಿದ್ದಾರೆ.

ನಿವೃತ್ತ ಉಪನ್ಯಾಸಕ ರಮೇಶ್ ಮಾತನಾಡಿ, ಹೊಸೂರು ರಸ್ತೆಯಲ್ಲಿ ಕಾರ್ಯನಿರ್ವಹಿಸದ ನಾಲ್ಕು ಸ್ಕೈವಾಕ್ ಲಿಫ್ಟ್‌ಗಳನ್ನು ನೋಡಿದ್ದೇನೆ. ಹಿರಿಯ ನಾಗರಿಕರು ಮೆಟ್ಟಿಲು ಹತ್ತಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಲಯದ ಜಂಟಿ ಆಯುಕ್ತ ಅಜಿತ್ ಎಂ ಅವರು ಪ್ರತಿಕ್ರಿಯೆ ನೀಡಿ, ಸಮಸ್ಯೆಗಳನ್ನು ಪರಿಶೀಲಿಸಲಾಗುತ್ತಿದ್ದು, ಶೀಘ್ರಗತಿಯಲ್ಲಿ ಪರಿಹರಿಸಲಾಗುವುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com