
ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾದ ಹಣವನ್ನು (ಎಸ್‌ಸಿಎಸ್‌ಪಿ, ಟಿಎಸ್‌ಪಿ) ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿರುವ ಸರ್ಕಾರದ ನಡೆ ಖಂಡಿಸಿ ವಿಧಾನ ಪರಿಷತ್‌ನಲ್ಲಿ ಸೋಮವಾರ ಬಿಜೆಪಿ–ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.
ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಅವರು ಗ್ಯಾರಂಟಿ ಯೋಜನೆಗೆ ಎಸ್‌ಸಿಪಿ-ಟಿಎಸ್‌ಪಿ ಹಣ ಬಳಕೆ ಮಾಡುತ್ತಿರುವ ವಿಚಾರವನ್ನು ಪ್ರಸ್ತಾಪಿಸಿದರು. ಇದಕ್ಕೆ ಸಿ.ಟಿ. ರವಿ, ಕೇಶವ ಪ್ರಸಾದ್, ಸುನೀಲ್ ವಲ್ಯಾಪುರೆ, ಡಾ.ಧನಂಜಯ ಸರ್ಜಿ ಕೂಡ ಧ್ವನಿಗೂಡಿಸಿದರು.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಎಲ್ಲ ವರ್ಗದ ಜನರಿಗೂ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತಂದಿದೆ. ಆದರೆ, ಪರಿಶಿಷ್ಟರಿಗೆ ಮೀಸಲಾದ ಅನುದಾನವನ್ನು ಯೋಜನೆಗೆ ಬಳಕೆ ಮಾಡುತ್ತಿರುವುದು ಸರಿಯಲ್ಲ. ಅಷ್ಟು ಹಣವನ್ನು ಪರಿಶಿಷ್ಟರಿಗೆ ಬಳಸಿದರೆ ಸಮುದಾಯದ ಶಿಕ್ಷಣ, ಭೂಮಿ ಖರೀದಿ, ಕೊಳವೆ ಬಾವಿ ಸೇರಿದಂತೆ ಇತರೆ ಸೌಲಭ್ಯಗಳಲ್ಲಿ ಫಲಾನುಭವಿಗಳ ಸಂಖ್ಯೆ ಹೆಚ್ಚಿಸಬಹುದು ಎಂದು ಪ್ರತಿಪಾದಿಸಿದರು.
ವಿರೋಧ ಪಕ್ಷದ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದ ಸಮಾಜಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ‘ನಿಯಮದ ಪ್ರಕಾರವೇ ಹಣ ಬಳಕೆ ಮಾಡಲಾಗಿದೆ. ಕೇಂದ್ರದ ನೀತಿ ಆಯೋಗವೂ ಸಹ ಪರಿಶಿಷ್ಟರ ಹಣವನ್ನು ಅವರು ಫಲಾನುಭವಿಗಳಾಗಿರುವ ಯಾವುದೇ ಯೋಜನೆಗೆ ಬಳಕೆ ಮಾಡಬಹುದು ಎಂದು ಹೇಳಿದೆ. ಹಿಂದಿನ ಸರ್ಕಾರ ಬೇರೆ ಉದ್ದೇಶಗಳಿಗೂ ಪರಿಶಿಷ್ಟರಿಗೆ ಮೀಸಲಾದ ಹಣ ಖರ್ಚು ಮಾಡಿತ್ತು. ಅದಕ್ಕಾಗಿ ನಿಯಮಕ್ಕೆ ತಿದ್ದುಪಡಿಯನ್ನೂ ತಂದಿದ್ದೇವೆ. ದುರ್ಬಳಕೆ ತಡೆದಿದ್ದೇವೆ’ ಎಂದರು.
ಬಿಜೆಪಿಯ ಎನ್.ರವಿಕುಮಾರ್ ಮಾತನಾಡಿ, ಕಳೆದ ವರ್ಷ 11114 ಕೋಟಿ ರೂ ಹಣ, ಈ ವರ್ಷ 14582 ಕೋಟಿ ರೂ ಸೇರಿ ಒಟ್ಟು, 25396 ಕೋಟಿ ಹಣ ಎಸ್ಸಿ ಎಸ್ಟಿ ಹಣ ಅನ್ಯ ಉದ್ದೇಶಕ್ಕೆ ಬಳಸಲಾಗಿದೆ. 7ಸಿ, 7ಡಿ ಅಡಿಯಲ್ಲಿ ದುರ್ಬಳಕೆ ಆಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.ಆಡಳಿತ ಪಕ್ಷದ ಸದಸ್ಯರಿಗೆ ಸಿ.ಟಿ.ರವಿ ಮತ್ತು ನವೀನ್, ಡಿ.ಎಸ್.ಅರುಣ್ ತಿರುಗೇಟು ನೀಡಿದರು.
ಬಳಿಕ ಮಾತು ಮುಂದುವರಿಸಿದ ಸಚಿವರು, ಸಿದ್ದರಾಮಯ್ಯ ಸರ್ಕಾರದ ಮೂಲ ಉದ್ದೇಶವೇ ಸಾಮಾಜಿಕ ನ್ಯಾಯ, ಆ ನಿಟ್ಟಿನಲ್ಲೆ ಸರ್ಕಾರ ನಡೆಯುತ್ತಿದೆ. ಕೆಳವರ್ಗದ ಜನರನ್ನ ಮೇಲೆತ್ತುವುದೇ ಸರ್ಕಾರದ ಗುರಿ. ಮಾಸಿಕವಾಗಿ 4 ರಿಂದ 5 ಸಾವಿರ ಆದಾಯ ನೀಡುವ ಯೋಜನೆ ಇದಾಗಿದೆ. 14000 ಕೋಟಿ ಹಣ ಗ್ಯಾರಂಟಿಗೆ ಕೊಡ್ತಿದ್ದೇವೆಲ್ಲ ಇದು ಎಸ್ಸಿ ಎಸ್ಟಿ ಸಮುದಾಯಕ್ಕೆ ಹೋಗುತ್ತೆ. ಬೇರೆ ಸಮುದಾಯಕ್ಕೆ ಈ ಹಣ ಖರ್ಚಾಗಲು ನಾವು ಬಿಡುವುದಿಲ್ಲ ಎಂದರು.
ಸಚಿವರ ಉತ್ತರದಿಂದ ತೃಪ್ತರಾಗದ ವಿರೋಧ ಪಕ್ಷ್ವಆದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು, ಪರಿಶಿಷ್ಟ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದೀರಿ ಎಂದು ಘೋಷಣೆ ಕೂಗಿ ಸಭಾತ್ಯಾಗ ಮಾಡಿದರು.
Advertisement