ಅಪಾರ್ಟ್ಮೆಂಟ್'ಗಳಲ್ಲಿ ನಾಯಿ-ಬೆಕ್ಕು ಸಾಕುವುದಕ್ಕೆ ನಿರ್ಬಂಧ ವಿಧಿಸುವಂತಿಲ್ಲ; ಬೀದಿ ನಾಯಿಗಳಿಗೆ ಆಹಾರ ನೀಡಲು BBMP ಮಾರ್ಗಸೂಚಿ ಬಿಡುಗಡೆ

ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಸಲಹೆ, ಕರ್ನಾಟಕ ಸಾಕುಪ್ರಾಣಿಗಳ ಸುತ್ತೋಲೆ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960 ಆಧರಿಸಿ ಬಿಬಿಎಂಪಿಯು ಪ್ರತ್ಯೇಕ ಮಾರ್ಗಸೂಚಿ ರಚಿಸಿ ಬಿಡುಗಡೆ ಮಾಡಿದೆ.
ನಾಯಿ ಮರಿ(ಸಂಗ್ರಹ ಚಿತ್ರ)
ನಾಯಿ ಮರಿ(ಸಂಗ್ರಹ ಚಿತ್ರ)
Updated on

ಬೆಂಗಳೂರು: ಅಪಾರ್ಟ್'ಮೆಂಟ್'ಗಳಲ್ಲಿ ನಾಯಿ-ಬೆಕ್ಕು ಸಾಕುವುದಕ್ಕೆ ನಿರ್ಬಂಧ ವಿಧಿಸುವಂತಿಲ್ಲ, ಲಿಫ್ಟ್ ಪ್ರವೇಶಕ್ಕೆ, ನಾಯಿ ಬೊಗಳುವುದಕ್ಕೆ ಆಕ್ಷೇಪಿಸುವುದು ಸೇರಿದಂತೆ ಮೊದಲಾದ ನಿರ್ಬಂಧ ವಿಧಿಸುವಂತಿಲ್ಲ ಎಂದು ಬಿಬಿಎಂಪಿ ಪಶುಪಾಲನೆ ವಿಭಾಗವು ಅಪಾರ್ಟ್'ಮೆಂಟ್ ಮತ್ತು ನಿವಾಸಿ ಕ್ಷೇಮಾಭಿವೃದ್ಧಿ ಸಂಘ ಸಂಸ್ಥೆಗಳಿಗೆ ಸೂಚಿಸಿ ಮಾರ್ಗಸೂಚಿ ರೂಪಿಸಿದೆ.

ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಸಲಹೆ, ಕರ್ನಾಟಕ ಸಾಕುಪ್ರಾಣಿಗಳ ಸುತ್ತೋಲೆ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960 ಆಧರಿಸಿ ಬಿಬಿಎಂಪಿಯು ಪ್ರತ್ಯೇಕ ಮಾರ್ಗಸೂಚಿ ರಚಿಸಿ ಬಿಡುಗಡೆ ಮಾಡಿದೆ.

ಸಮುದಾಯ ಪ್ರಾಣಿಗಳಿಗೆ ಆಹಾರ ನೀಡುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಬಿಬಿಎಂಪಿ ತಿಳಿಸಿದೆ.

ನಾಯಿ, ಬೆಕ್ಕುಗಳಿಗೆ ಆಹಾರ ನೀಡುವಾಗ ಅಂತರವನ್ನು ಕಾಪಾಡಿಕೊಳ್ಳಬೇಕು. ನಾಯಿ, ಬೆಕ್ಕುಗಳು ಆಹಾರಕ್ಕಾಗಿ ಆಕ್ರಮಣ ಮಾಡದಂತೆ ನೋಡಿಕೊಳ್ಳಲು ಸಾಧ್ಯವಾದರೆ ಮಾತ್ರ ಸಾರ್ವಜನಿಕರು ಅವುಗಳಿಗೆ ಆಹಾರ ನೀಡಲು ಮುಂದಾಗಬೇಕು ಎಂದು ಸಲಹೆ ನೀಡಿದೆ.

ರಾತ್ರಿ 11.30ರ ನಂತರ, ಬೆಳಿಗ್ಗೆ 5ರ ಮೊದಲು ಆಹಾರ ನೀಡಬಾರದು. ಪ್ರಾಣಿಗಳಿಗೆ ಹಸಿ ಮಾಂಸ ಮತ್ತು ಹೆಚ್ಚಿನ ಸಕ್ಕರೆ ಅಂಶವಿರುವ ಬಿಸ್ಕತ್ತುಗಳನ್ನು ನೀಡಬಾರದು. ಈ ಆಹಾರ ತೀವ್ರ ಚುರುಕಿನ ಪ್ರಾಣಿಗಳನ್ನಾಗಿ ಮಾಡುತ್ತದೆ. ಆಹಾರವನ್ನು ಬೀದಿಯಲ್ಲಿ ಬಿಸಾಡಬಾರದು. ಇದರಿಂದ ಜನಸಂದಣಿ ಹೆಚ್ಚಿರುವ ಪ್ರದೇಶದಲ್ಲಿ ನಾಯಿಗಳಿಗೆ ಆಹಾರ ಸಿಗುವುದನ್ನು ತಪ್ಪಿಸಬಹುದು. ನಿಗದಿತ ಸ್ಥಳದಲ್ಲಿ ಮಾತ್ರ ಆಹಾರ ನೀಡಬೇಕು.

ನಾಯಿ ಮರಿ(ಸಂಗ್ರಹ ಚಿತ್ರ)
ರಾಜ್ಯದಲ್ಲಿ 10,000 ದಾಟಿದ ಡೆಂಘಿ ಪ್ರಕರಣ: ಬಿಬಿಎಂಪಿ ವ್ಯಾಪ್ತಿಯಲ್ಲಿ 3,770 ಕೇಸ್ ವರದಿ!

ಮಾಲೀಕರು ತಮ್ಮ ಒಡೆತನದ ಪ್ರಾಣಿಗಳಿಗೆ ನೋವು ಉಂಟು ಮಾಡುವ, ಅಸ್ವಸ್ಥಗೊಳಿಸುವ ಕೆಲಸ ಮಾಡದಂತೆ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ಸ್ ಮತ್ತು ಅಪಾರ್ಟ್‌ಮೆಂಟ್ ಮಾಲೀಕರಿಗೆ ಬೈ–ಲಾ ರೂಪಿಸಬೇಕು. ಪ್ರಾಣಿಗಳ ಸಂರಕ್ಷಣೆಗೆ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಪಾಲಿಸಬೇಕು. ಸಾರ್ವಜನಿಕ ಪ್ರದೇಶದಲ್ಲಿ ಸಾಕು ಪ್ರಾಣಿಗಳಿಗೆ ಅವಕಾಶ ನೀಡಬಾರದು ಎಂದು ಸೂಚಿಸಲಾಗಿದೆ.

ಪ್ರಾಣಿಗಳನ್ನು ಸಾಕುವುದನ್ನು ನಿಷೇಧಿಸಲು ಸಾಧ್ಯವಿಲ್ಲ. ಆದರೆ, ಆ ಪ್ರಾಣಿಗಳಿಂದ ನಾಗರಿಕರಿಗೆ, ಪರಿಸರಕ್ಕೆ ತೊಂದರೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಸಾಕು ಪ್ರಾಣಿಗಳನ್ನು ಸ್ವಚ್ಛವಾಗಿಡಬೇಕು. ಜಂತುಹುಳು ನಿರೋಧಕ, ಲಸಿಕೆ ಮತ್ತು ಸಂತಾನಹರಣ ಮಾಡಬೇಕು. ಆ ಮೂಲಕ ಸಾಕುಪ್ರಾಣಿಗಳ ಮಾಲೀಕರು ಜವಾಬ್ದಾರಿಯುತವಾಗಿ ವರ್ತಿಸಬೇಕು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ವಯಸ್ಕರ ಮೇಲ್ವಿಚಾರಣೆಯಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ನಡೆಯಲು ಅಥವಾ ಸಾಕುಪ್ರಾಣಿಗಳನ್ನು ನಿರ್ವಹಿಸಲು ಅನುಮತಿಸಬಾರದು.

ಸಾಕು ಪ್ರಾಣಿಗಳಿಗೆ ಅಪಾರ್ಟ್ಮೆಂಟ್ ಭದ್ರತಾ ಸಿಬ್ಬಂದಿ ಬೆತ್ತದಿಂದ ಹೊಡೆಯುವಂತಿಲ್ಲ. ಬೆದರಿಸುವಂತಿಲ್ಲ. ಸಾಕು ಪ್ರಾಣಿಗಳೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ಭದ್ರತಾ ಸಿಬ್ಬಂದಿಗೆ ತರಬೇತಿ ಕೊಡಿಸಬೇಕು.

ನಾಯಿ/ಬೆಕ್ಕುಗಳ ಸ್ಥಳಾಂತರ, ತಾಯಿ ಮತ್ತು ಮರಿಗಳನ್ನು ಬೇರ್ಪಡಿಸುವುದು, ಸಮುದಾಯದ ಪ್ರಾಣಿಗಳ ಆಹಾರ, ನೀರು ಅಥವಾ ಆಶ್ರಯವನ್ನು ಕಸಿದುಕೊಳ್ಳುವುದು, ಅವುಗಳನ್ನು ಕೊಲ್ಲುವುದು ಅಥವಾ ಅಂಗವಿಕಲಗೊಳಿಸುವುದು ಮತ್ತು ಅವುಗಳಿಗೆ ತೊಂದರೆ ಉಂಟುಮಾಡುವ ಯಾವುದೇ ಕಾರ್ಯವು ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಬಿಬಿಎಂಪಿ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com