
ಹಾಸನ: ಸಕಲೇಶಪುರ ಪಟ್ಟಣದ ಆಜಾದ್ ರಸ್ತೆಯಲ್ಲಿ ಹೇಮಾವತಿ ನದಿ ನೀರಿನಿಂದ ಸಂಪೂರ್ಣ ಜಲಾವೃತಗೊಂಡಿದ್ದರಿಂದ ನಿವಾಸಿಗಳು ಹಾಗೂ ಅಂಗಡಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲು ತಾಲೂಕು ಆಡಳಿತ ಕ್ರಮ ಕೈಗೊಳ್ಳುತ್ತಿದೆ.
ಸಕಲೇಶಪುರದ ಹೇಮಾವತಿ ನದಿ ತೀರದಲ್ಲಿರುವ ಶತಮಾನದಷ್ಟು ಹಳೆಯದಾದ ಹೊಳೆಮಲ್ಲೇಶ್ವರ ದೇವಸ್ಥಾನ ಭಾಗಶಃ ಮುಳುಗಡೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ದೇವಾಲಯದೊಳಗೆ ಭಕ್ತರ ಪ್ರವೇಶವನ್ನು ಅಧಿಕಾರಿಗಳು ನಿರ್ಬಂಧಿಸಿದ್ದಾರೆ.
ಹೊಳೆನರಸೀಪುರ-ಅರಕಲಗೂಡು ರಾಜ್ಯ ಹೆದ್ದಾರಿಯಲ್ಲಿ ಭಾರಿ ಮಳೆಯಿಂದಾಗಿ ರಸ್ತೆ ಕೆರೆಯಾಗಿ ಮಾರ್ಪಟ್ಟಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ಹಸೀನಾ ಬಾನು ಹಾಗೂ ಆಲೂರು ತಾಲೂಕಿನ ಚಿಕ್ಕಕನಗಲ್‌ನ ಗಂಗಾಧರ್ ಎಂಬುವವರಿಗೆ ಸೇರಿದ ಮನೆಗಳು ಭಾಗಶಃ ಹಾನಿಗೀಡಾಗಿವೆ. ಅತ್ನಿ ಸಮೀಪದ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದರಿಂದ ಹೊಳೆನರಸೀಪುರ ಪಟ್ಟಣದಿಂದ ಗೊರೂರು, ಮರಡಿ, ಹೆಬ್ಬಾಲೆ, ಅತ್ನಿ ಗ್ರಾಮ ಸಂಪರ್ಕ ಕಡಿತಗೊಂಡಿದೆ.
ಇದೇ ವೇಳೆ ಆಲೂರು ಮತ್ತು ಹೊಳೆನರಸೀಪುರ ತಾಲೂಕಿನಲ್ಲಿ ಹೇಮಾವತಿ ನೀರಿನಲ್ಲಿ 100 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದ ಬೆಳೆ ಸಂಪೂರ್ಣ ಮುಳುಗಡೆಯಾಗಿದೆ. ಭಾರೀ ಮಳೆಗೆ ಸಕಲೇಶಪುರ ತಾಲೂಕಿನ ಜಾಕನಹಳ್ಳಿ ಬಳಿ ಸೇತುವೆ ಕುಸಿದಿದೆ. ಸಿರಗೂರು, ಕೋಗೋಡು, ಚೀಕನಹಳ್ಳಿ ಗ್ರಾಮಗಳು ಬೇಲೂರು ಪಟ್ಟಣದೊಂದಿಗೆ ಸಂಪರ್ಕ ಕಳೆದುಕೊಂಡಿವೆ. ಕಂದಾಯ ಮತ್ತು ಪಿಡಬ್ಲ್ಯುಡಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಹೆಚ್ಚಿನ ಭೂಕುಸಿತಗಳು ವರದಿಯಾಗಿವೆ. ಘಾಟ್ ಭಾಗದಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಪೊಲೀಸರು ವಾಹನ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ 48 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಮತ್ತು ನಾಲ್ಕು ಜಾನುವಾರುಗಳು ಸಾವನ್ನಪ್ಪಿವೆ ಎಂದು ಲಭ್ಯವಿರುವ ಅಂಕಿಅಂಶಗಳು ಬಹಿರಂಗಪಡಿಸುತ್ತವೆ.
Advertisement