
ಬೆಂಗಳೂರು: ನಗರದ ಹಾಸ್ಟೆಲ್‌ನಲ್ಲಿ 24 ವರ್ಷದ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿಯನ್ನು ಮಧ್ಯಪ್ರದೇಶದಲ್ಲಿ ಶನಿವಾರ ಬಂಧಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ನಗರಕ್ಕೆ ಕರೆತರಲಾಗುತ್ತಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಹತ್ಯೆಗೀಡಾದ ಯುವತಿ ಕೃತಿ ಕುಮಾರಿ, ಮೂಲತಃ ಬಿಹಾರ ಮೂಲದವರಾಗಿದ್ದು, ಬೆಂಗಳೂರಿನ ಕೋರಮಂಗಲದ ಪೇಯಿಂಗ್ ಗೆಸ್ಟ್ (ಪಿಜಿ)ನಲ್ಲಿ ವಾಸಿಸುತ್ತಿದ್ದರು. ಮೊನ್ನೆ ಮಂಗಳವಾರ ರಾತ್ರಿ, ವ್ಯಕ್ತಿಯೊಬ್ಬ, ಚಾಕು ಹಿಡಿದುಕೊಂಡು ಬಂದು ರಾತ್ರಿ 11 ಗಂಟೆಯ ಸುಮಾರಿಗೆ ಹಾಸ್ಟೆಲ್ ಗೆ ನುಗ್ಗಿ ಯುವತಿಯ ಕತ್ತು ಸೀಳಿ ಪರಾರಿಯಾಗಿದ್ದಾನೆ.
ಈ ವ್ಯಕ್ತಿ ಹಾಸ್ಟೆಲ್‌ನಲ್ಲಿ ಕುಮಾರಿ ಅವರ ರೂಮ್‌ಮೇಟ್‌ನ ಬಾಯ್ ಫ್ರೆಂಡ್ ಎಂದು ಹೇಳಲಾಗುತ್ತಿದೆ. ನಿರುದ್ಯೋಗಿ ಎಂಬ ಕಾರಣಕ್ಕೆ ಆರೋಪಿ ಮತ್ತು ರೂಮ್‌ಮೇಟ್ ಇಬ್ಬರೂ ಜಗಳವಾಡುತ್ತಿದ್ದರು. ಆಗಾಗ್ಗೆ, ಜಗಳ ಉಲ್ಭಣಗೊಂಡಾಗ ಕೃತಿ ಕುಮಾರಿ ಮಧ್ಯೆ ಪ್ರವೇಶಿಸಿ ಇಬ್ಬರನ್ನೂ ರಾಜಿ ಮಾಡಿಸುತ್ತಿದ್ದಳು. ಆ ವ್ಯಕ್ತಿಯಿಂದ ದೂರವಿರುವಂತೆ ತನ್ನ ರೂಮ್‌ಮೇಟ್‌ಗೆ ಕೃತಿ ಕುಮಾರಿ ಸಲಹೆ ನೀಡಿದ್ದಾಳೆ. ಇದು ಕೃತಿ ಕುಮಾರಿಯನ್ನು ಹತ್ಯೆ ಮಾಡಲು ವ್ಯಕ್ತಿಯನ್ನು ಪ್ರೇರೇಪಿಸಿತು ಎಂದು ಮೂಲಗಳು ಹೇಳುತ್ತವೆ.
ಹಾಸ್ಟೆಲ್ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಭೀಕರ ಕೊಲೆಯ ದೃಶ್ಯ ಸೆರೆಯಾಗಿದೆ.ಕೃತಿ ಕುಮಾರಿ ಇರುವ ರೂಮಿನ ಬಾಗಿಲನ್ನು ವ್ಯಕ್ತಿ ತಟ್ಟುತ್ತಿರುವುದು ಕಂಡುಬಂದಿದೆ. ಒಳಗೆ ನುಗ್ಗಿ ಆಕೆಯನ್ನು ಕಾರಿಡಾರ್ ಗೆ ಎಳೆದುತಂದು ಗೋಡೆಗೆ ತಲೆಯನ್ನು ಹೊಡೆದಿದ್ದಾನೆ. ಆಕೆ ಪ್ರಯತ್ನಪಟ್ಟು ಆತನಿಂದ ತಪ್ಪಿಸಿ ಓಡಿಹೋಗಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಆತ ಓಡಿಹೋಗುವ ಮೊದಲು ಅವಳ ಕುತ್ತಿಗೆಗೆ ಪದೇ ಪದೇ ಚಾಕುವಿನಿಂದ ಇರಿದಿದ್ದ. ಗದ್ದಲವನ್ನು ಕೇಳಿದ ಇತರ ನಿವಾಸಿಗಳು ಹೊರಗೆ ಧಾವಿಸಿದರು, ಒಬ್ಬರು ತಕ್ಷಣ ಪೊಲೀಸರಿಗೆ ಕರೆ ಮಾಡಿದರು.ಅಷ್ಟು ಹೊತ್ತಿಗೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ.
ಪ್ರಕರಣದ ತನಿಖೆ ಚುರುಕುಗೊಳಿಸಲಾಗುತ್ತಿದೆ ಎಂದು ಆಯುಕ್ತ ದಯಾನಂದ ತಿಳಿಸಿದ್ದಾರೆ. ಆರೋಪಿ ಬಂಧನಕ್ಕೆ ಬೆಂಗಳೂರು ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದರು.
Advertisement