Mekedatu project: ಸಿದ್ದರಾಮಯ್ಯ ತಮಿಳುನಾಡಿಗೆ ಭೇಟಿ ನೀಡಿ, ಸ್ಟಾಲಿನ್‌ ಮನವೊಲಿಸಬೇಕು- HDK

ಕೆಲವು ದಿನಗಳ ಹಿಂದೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ನಾನು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಕಾವೇರಿ ನದಿ ನೀರು ಹಂಚಿಕೆ ವಿವಾದ ಮತ್ತು ಕರ್ನಾಟಕಕ್ಕೆ ನ್ಯಾಯದ ಕುರಿತು ಚರ್ಚೆ ನಡೆಸಿದ್ದೇವೆ. ಜಲಶಕ್ತಿ ಸಚಿವಾಲಯವೂ ಕೆಲವೇ ದಿನಗಳಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ತೀರ್ಮಾನ ಕೈಗೊಳ್ಳಲು ಒಪ್ಪಿಗೆ ಸೂಚಿಸಿದೆ.
ಕುಮಾರಸ್ವಾಮಿ
ಕುಮಾರಸ್ವಾಮಿ
Updated on

ಬೆಂಗಳೂರು: ಸಚಿವರು ಮತ್ತು ತಜ್ಞರ ನಿಯೋಗದ ನೇತೃತ್ವದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡು ರಾಜ್ಯಕ್ಕೆ ಭೇಟಿ ನೀಡಿ, ಮೇಕೆದಾಟು ಯೋಜನೆ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಮನವೊಲಿಸಬೇಕು ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಭಾನುವಾರ ಹೇಳಿದರು.

ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೇ ರಾತ್ರಿಯಲ್ಲಿ ಮೇಕೆದಾಟು ಮಾಡೋಕೆ ಆಗುತ್ತಾ? ಎಂದು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.

ಕೆಲವು ದಿನಗಳ ಹಿಂದೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ನಾನು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಕಾವೇರಿ ನದಿ ನೀರು ಹಂಚಿಕೆ ವಿವಾದ ಮತ್ತು ಕರ್ನಾಟಕಕ್ಕೆ ನ್ಯಾಯದ ಕುರಿತು ಚರ್ಚೆ ನಡೆಸಿದ್ದೇವೆ. ಜಲಶಕ್ತಿ ಸಚಿವಾಲಯವೂ ಕೆಲವೇ ದಿನಗಳಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ತೀರ್ಮಾನ ಕೈಗೊಳ್ಳಲು ಒಪ್ಪಿಗೆ ಸೂಚಿಸಿದೆ.

ಕರ್ನಾಟಕದ 4 ಜಲಾಶಯಗಳನ್ನು ಕಟ್ಟಲು ಕೇಂದ್ರದಿಂದ ಒಂದು ಪೈಸೆ ಕೂಡ ಹಣ ಕೊಟ್ಟಿಲ್ಲ. ರಾಜ್ಯದ ಜಲಾಶಯಗಳನ್ನು ಕರ್ನಾಟಕದವರೇ ಕಟ್ಟಿರೋದು. ಮೇಕೆದಾಟು ವಿಚಾರವಾಗಿ ನೀವು ಎಂದಾದರೂ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಜತೆ ಚರ್ಚೆ ಮಾಡಿದ್ದೀರಾ? ಸರ್ವಪಕ್ಷಗಳ ಸಭೆ ನಡೆಸುವುದನ್ನು ಬಿಟ್ಟು, ನೀವು ಕೂಡ ನಿಯೋಗದಲ್ಲಿ ಸ್ಟಾಲಿನ್ ಹತ್ತಿರ ಹೋಗಿ ಚರ್ಚೆ ಮಾಡಿ ಎಂದು ರಾಜ್ಯ ಸರ್ಕಾರವನ್ನು ಕುಟುಕಿದರು.

ಕುಮಾರಸ್ವಾಮಿ
ಬೆಂಗಳೂರು ದಕ್ಷಿಣ ಜಿಲ್ಲೆ ಮರುನಾಮಕರಣ ಕುಮಾರಸ್ವಾಮಿ ಹಣೆಯಲ್ಲಿ ಬರೆದಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್

ಸೋಮವಾರ ರಾಜ್ಯಸಭೆಯಲ್ಲಿ ದೇವೇಗೌಡರು ವಿಷಯ ಪ್ರಸ್ತಾಪಿಸಲಿದ್ದಾರೆ. ನಾನು ಮಂಡ್ಯ ಕ್ಷೇತ್ರವನ್ನು ಪ್ರತಿನಿಧಿಸುವುದರಿಂದ ನಾನೂ ಹಾಜರಾಗುತ್ತೇನೆ. ತಮಿಳುನಾಡಿನ ಸಂಸದರು ಈ ವಿಷಯವನ್ನು ವಿರೋಧಿಸುತ್ತಾರೆ ಎಂಬ ನಿರೀಕ್ಷೆಯಿದೆ. ತಮಿಳುನಾಡಿನವರು 1 ಟಿಎಂಸಿ ‌ನೀರು ಕೇಳಿದ್ದರು. ಈಗ ಮಳೆಬಂದು ಹೆಚ್ಚು ನೀರು ಅಲ್ಲಿಗೆ ಹೋಗ್ತಾ ಇದೆ. ಈ ವಿಚಾರವನ್ನು ತಾಂತ್ರಿಕವಾಗಿ ಚರ್ಚೆ ಮಾಡಿದರೆ ಒಳ್ಳೆಯದು ಎಂದು ಹೇಳಿದರು.

ಇದೇ ವೇಳೆ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂಬ ಆರೋಪಕ್ಕೆ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ ಕೇವಲ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಾರೆ. ನಾನು ಎಲ್ಲಿಗಾದರೂ ಭೇಟಿ ನೀಡಿದರೆ, ಸಭೆ ಮಾಡಿದರೆ ಅಧಿಕಾರಿಗಳನ್ನು ಹೋಗಬೇಡಿ ಎಂದು ಸೂಚಿಸುತ್ತಾರೆ. ನನಗೆಕರ್ನಾಟಕ, ಮಂಡ್ಯಕ್ಕೆ ಬರಲೇಬೇಡಿ ಎನ್ನುತ್ತಾರೆ. ಇಂತಹವರಿಂದ ರಾಜ್ಯದ ಅಭಿವೃದ್ಧಿ ಆಗುತ್ತಾ? ಕೇವಲ ಕಾಟಾಚಾರಕ್ಕೆ ಪ್ರಧಾನಿಯನ್ನು ಭೇಟಿಯಾಗಿ ಬರೋದಲ್ಲ. ರಾಜ್ಯಕ್ಕೆ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪಟ್ಟಿ ಮಾಡಿ ಕೊಡಬೇಕು. ರಾಜ್ಯದ ಅಭಿವೃದ್ಧಿ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಕೊಡಬೇಕು ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಅಭಿವೃದ್ಧಿ ಬಗ್ಗೆ ಸಾಕಷ್ಟು ಕಾಳಜಿ ಇಟ್ಟಿದ್ದೇನೆ. ನಾನೀಗ ಸಚಿವನಾಗಿ ಕೇವಲ ಒಂದು ತಿಂಗಳಾಗಿದೆ ಅಷ್ಟೇ. ಕಾವೇರಿ ಸಮಸ್ಯೆ ಒಂದು ತಿಂಗಳೊಳಗೆ ಬಗೆಹರಿಸಿ ಎನ್ನುತ್ತಾರೆ. ಎಲ್ಲದಕ್ಕೂ ಕಾಲಾವಕಾಶ ಬೇಕಿದೆ ಎಂದರು.

ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆಗುತ್ತಿಲ್ಲ. ರಾಜ್ಯವೇ ಅನ್ಯಾಯ ಮಾಡಿಕೊಳ್ಳುತ್ತಿದೆ. ಕೇವಲ ಬೈದಾಡಿಕೊಂಡು ತಿರುಗಾಡುವುದರಿಂದ ಪ್ರಯೋಜನವಾಗುವುದಿಲ್ಲ. ಯೋಜನೆಗಳ ಅನುಷ್ಠಾನಕ್ಕೆ ರಾಜ್ಯದ ಪಾಲಿನ ಹಣವನ್ನೂ ಮೀಸಲಿಡಬೇಕು. ಆಗ ಮಾತ್ರ ಕೇಂದ್ರ ಸರ್ಕಾರ ತನ್ನ ಪಾಲಿನ ಹಣ ಬಿಡುಗಡೆ ಮಾಡುತ್ತದೆ. ಆದರೆ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯದ ಪಾಲಿನ ಹಣ ಮೀಸಲಿಡದೇ ಕೇಂದ್ರದ ವಿರುದ್ಧ ವಿನಾಕಾರಣ ಆರೋಪ ಮಾಡೋದು ಸರಿಯಲ್ಲ ಎಂದು ರಾಜ್ಯದ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತಳೆದಿದೆ ಎಂಬ ರಾಜ್ಯ ಸರ್ಕಾರದ ಆರೋಪಕ್ಕೆ ತಿರುಗೇಟು ನೀಡಿದರು.

ನಾನು ಈ ಹಿಂದೆ ಸಿಎಂ ಆಗಿ, ಇದೀಗ ಕೇಂದ್ರ ಸಚಿವನಾಗಿ ಸ್ವಲ್ಪ ಅನುಭವ ಪಡೆದಿದ್ದೇನೆ. ನಾನು ಸಿಎಂ ಆಗಿದ್ದಾಗ ಕೊಡಗಿನಲ್ಲಿ ಭೀಕರ ಪ್ರವಾಹ ಬಂದಿತ್ತು. ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿತ್ತು. ಸ್ವತಃ ಪ್ರಧಾನಿಯವರೇ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದರು. ಎಲ್ಲ ರೀತಿಯ ನೆರವು ಕೊಡುವ ಭರವಸೆ ನೀಡಿದರು. ಅಂತಹ ವಾತಾವರಣವನ್ನು ನೀವೇಕೆ ಸೃಷ್ಟಿಸಿಕೊಂಡಿಲ್ಲ? ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ಏಕೆ ದೂರುತ್ತೀರಿ?. ರಾಜ್ಯದ ಸಂಸದರ ಮೇಲೆ ಏಕೆ ಆರೋಪಗಳನ್ನು ಮಾಡುತ್ತೀರಿ? ಹಾಗಾದರೆ ರಾಜ್ಯ ಸರ್ಕಾರದ ಕೆಲಸವಾದರೂ ಏನು? ನೀವು ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಕೇಂದ್ರದ ಮುಂದೆ ಸಮರ್ಥವಾಗಿ ಇಡಬೇಕು. ಅದು ಬಿಟ್ಟು ಎಲ್ಲದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡೋದು ಸರಿಯಲ್ಲ" ಎಂದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com