ಬೆಂಗಳೂರು: ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲು ದಿನಗಣನೆ ಆರಂಭವಾಗಿದ್ದು, ಬಿಜೆಪಿ-ಜೆಡಿಎಸ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮತ ಎಣಿಕೆ ಕಾರ್ಯಕ್ಕೆ ಉಂಟಾಗುವ ಸಂಭಾವ್ಯ ಅಡೆತಡೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಹಿಂಸಾಚಾರ ತಡೆಯಲು ಹೆಚ್ಚುವರಿ ಭದ್ರತೆ ಒದಗಿಸುವಂತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಮತ ಎಣಿಕೆ ಕೇಂದ್ರದ ಸುತ್ತ ಅರೆಸೇನಾ ಪಡೆಗಳನ್ನು ನಿಯೋಜಿಸುವಂತೆ ಅವರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಅಳಿಯ ಡಾ. ಸಿಎನ್ ಮಂಜುನಾಥ್ ಅವರು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಸಹೋದರ, ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ವಿರುದ್ಧ ಕಣಕ್ಕಿಳಿದಿದ್ದಾರೆ.
ಶಾಂತಿಯುತ ಮತ್ತು ಪಾರದರ್ಶಕ ಮತ ಎಣಿಕೆ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕಾಂಗ್ರೆಸ್ ಅಭ್ಯರ್ಥಿ ಚುನಾವಣೆಯಲ್ಲಿ ಸೋಲನುಭವಿಸಿದರೆ, ಗಮನಾರ್ಹ ಹಿಂಸಾಚಾರ ಮತ್ತು ಮತ ಎಣಿಕೆ ಪ್ರಕ್ರಿಯೆಗೆ ಅಡ್ಡಿಪಡಿಸುವ ಪ್ರಯತ್ನಗಳು ನಡೆಯಬಹುದು ಎಂಬ ವಿಶ್ವಾಸಾರ್ಹ ಮಾಹಿತಿಯಿದೆ ಎಂದು ಆಯೋಗಕ್ಕೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ಡಿಕೆ ಶಿವಕುಮಾರ್ ಅವರ ಒಳಗೊಳ್ಳುವಿಕೆಯಿಂದ ಇಂತಹ ಅಡಚಣೆಗಳ ಸಾಧ್ಯತೆಯು ಹೆಚ್ಚಾಗುತ್ತದೆ. ಅವರು ವಿಚ್ಛಿದ್ರಕಾರಕ ಅಂಶಗಳಿಗೆ ಅನುಕೂಲವಾಗುವಂತೆ ಸರ್ಕಾರಿ ಯಂತ್ರಗಳ ಬಳಕೆಯ ಮೇಲೆ ಪ್ರಭಾವ ಬೀರಬಹುದು ಎಂದು ಅವರು ಹೇಳಿದ್ದಾರೆ.
‘ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯ ಸುರಕ್ಷತೆ ಮತ್ತು ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಸರ್ಕಾರಿ ಯಂತ್ರೋಪಕರಣಗಳ ದುರುಪಯೋಗದ ಸಾಧ್ಯತೆಯನ್ನು ಗಮನಿಸುವುದು ಅತ್ಯಗತ್ಯವಾಗಿದೆ' ಎಂದಿದ್ದಾರೆ.
Advertisement