ಬೆಂಗಳೂರು: ಪಲ್ಲಕ್ಕಿ ಉತ್ಸವ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಇಬ್ಬರು ವ್ಯಕ್ತಿಗಳು ವಿದ್ಯುತ್ ಸ್ಪರ್ಶಿಸಿ ಸಾವಿಗೀಡಾಗಿರುವ ದಾರುಣ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಮೃತರನ್ನು ಜಿಗಣಿಯ ಹರಿಬಾಬು (25) ಮತ್ತು ವೀರಸಂದ್ರದ ರಂಗನಾಥ (30) ಎಂದು ಗುರುತಿಸಲಾಗಿದೆ.
ಹೆಬ್ಬಗೋಡಿನಲ್ಲಿ ಪಲ್ಲಕ್ಕಿ ಉತ್ಸವದ ಮೆರವಣಿಗೆ ಮುಕ್ತಾಯಗೊಂಡ ಬಳಿಕ ಭಾನುವಾರ ಮುಂಜಾನೆ 5.30ರ ಸುಮಾರಿಗೆ ಪಲ್ಲಕ್ಕಿಯನ್ನು ಹೊತ್ತು ಟ್ರ್ಯಾಕ್ಟರ್‌ನಲ್ಲಿ ಇಬ್ಬರೂ ಮನೆಗೆ ತೆರಳುತ್ತಿದ್ದರು. ಈ ವೇಳೆ ಟ್ರ್ಯಾಕ್ಟರ್‌ಗೆ ದಾರಿ ಮಾಡಿಕೊಡಲು ಇಬ್ಬರು ಕೋಲನ್ನು ಬಳಸಿ ವಿದ್ಯುತ್ ತಂತಿಯನ್ನು ಮೇಲೆತ್ತಿದ್ದಾರೆ. ಮಳೆಯಿಂದಾಗಿ ಕೋಲು ಒದ್ದೆಯಾಗಿದ್ದರಿಂದ ವಿದ್ಯುತ್ ಸ್ಪರ್ಶಿಸಿ ಯುವಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಮತ್ತೋರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಟ್ರ್ಯಾಕ್ಟರ್‌ಗೂ ಬೆಂಕಿ ಹೊತ್ತಿಕೊಂಡಿದೆ.
ಬೆಸ್ಕಾಂ ಲೈನ್‌ಮ್ಯಾನ್ ನಿಧನ
ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ರಾಯಸಂದ್ರ ಬಳಿ ಶನಿವಾರ ವಿದ್ಯುತ್ ತಂತಿಯನ್ನು ಕಂಬಕ್ಕೆ ಜೋಡಿಸುವ ವೇಳೆ 28 ವರ್ಷದ ಬೆಸ್ಕಾಂ ಲೈನ್‌ಮ್ಯಾನ್ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಮೃತರನ್ನು ಹಾಲನಾಯಕನಹಳ್ಳಿ ನಿವಾಸಿ ನಾಗರಾಜ ಎಂದು ಗುರುತಿಸಲಾಗಿದ್ದು, ರಾಯಚೂರು ಮೂಲದವರಾಗಿದ್ದಾರೆ. ಅವರಿಗೆ ಒಂದೂವರೆ ವರ್ಷದ ಮಗುವಿದೆ.
ನಾಗರಾಜ ಅವರು ವಿದ್ಯುತ್ ತಂತಿಗಳನ್ನು ಸರಿಪಡಿಸಲು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ಕಂಬ ಏರಿದಾಗ ವಿದ್ಯುತ್ ಶಾಕ್ ತಗುಲಿ ಕೆಳಗೆ ಬಿದ್ದಿದ್ದು, ಗಾಯಗಳಾಗಿವೆ. ದಾರಿಹೋಕರು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement