
ಶಿವಮೊಗ್ಗ: ಹಾಲಿ ಲೋಕಸಭಾ ಚುನಾವಣೆಯಲ್ಲಿ ಪುತ್ರ ಕಾಂತೇಶ್ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದು ಸ್ವತಃ ತಾವೇ ಚುನಾವಣಾ ಅಖಾಡಕ್ಕೆ ಇಳಿದಿದ್ದ ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪಗೆ ತೀವ್ರ ಮುಖಭಂಗವಾಗಿದೆ.
ಹೌದು.. ಹಾಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪಗೆ ಹೀನಾಯ ಸೋಲಾಗಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಈಶ್ವರಪ್ಪ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನವಣಾ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ, ಹಾಲಿ ಸಂಸದ ಬಿವೈ ರಾಘವೇಂದ್ರ ಒಟ್ಟು 7,54,380 ಮತಗಳನ್ನು ಪಡೆದಿದ್ದು, ತಮ್ಮ ಸಮೀಪದ ಪ್ರತಿ ಸ್ಪರ್ಧಿ ಗೀತಾ ಶಿವರಾಜ್ ಕುಮಾರ್ ವಿರುದ್ಧ 2,31,706 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಒಟ್ಟು 5,22,674 ಮತಗಳನ್ನು ಪಡೆದಿದ್ದಾರೆ. ಇನ್ನು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವ ಕೆಎಸ್ ಈಶ್ವರಪ್ಪ ಅವರು 29,123 ಮತಗಳನ್ನು ಮಾತ್ರ ಪಡೆಯಲು ಶಕ್ತರಾಗಿದ್ದಾರೆ.
ಡಮ್ಮಿ ಕ್ಯಾಂಡಿಡೇಟ್ ಎನ್ನುತ್ತಿದ್ದ ಗೀತಾ 2ನೇ ಸ್ಥಾನಕ್ಕೆ
ಇನ್ನು ಗೀತಾ ಶಿವರಾಜ್ ಕುಮಾರ್ ಅವರನ್ನು ಡಮ್ಮಿ ಕ್ಯಾಂಡಿಡೇಟ್ ಎನ್ನುತ್ತಿದ್ದ ಈಶ್ವರಪ್ಪ ಇದೀಗ ತಾವೇ ಮುಖಭಂಗ ಅನುಭವಿಸುವಂತಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಎರಡನೇ ಸ್ಥಾನದಲ್ಲಿದ್ದು, ಖುದ್ದು, ಈಶ್ವರಪ್ಪ ಊಹಿಸಲೂ ಅಸಾಧ್ಯವಾದಂತಹ ಸೋಲು ಎದುರಾಗಿದೆ. ಈಶ್ವರಪ್ಪನವರ ಬಿರುಸಿನ ಪ್ರಚಾರ, ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಮೋದಿ ಅಲ್ಲ.. ಬ್ರಹ್ಮ ಬಂದ್ರೂ ನಿರ್ಧಾರ ಬದಲಿಸಲ್ಲ ಎಂದಿದ್ದ ಈಶ್ವರಪ್ಪ
ಇನ್ನು ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದರಿಂದ ಕೆ.ಎಸ್. ಈಶ್ವರಪ್ಪ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿತ್ತು. ಬಿಜೆಪಿ ಹೈಕಮಾಂಡ್ ಇವಾ ಮನವೊಲಿಕೆಯ ಕೆಲಸವನ್ನು ಮಾಡಿತ್ತು. ಸ್ವತಃ ಅಮಿತ್ ಶಾ ಈಶ್ವರಪ್ಪಗೆ ಕರೆ ಮಾಡಿ ಮನವೊಲಿಕೆಗೆ ಯತ್ನಿಸಿದ್ದರು ಎಂದು ಹೇಳಲಾಗಿದೆ.
ಆದರೆ "ಮೋದಿ ಅಲ್ಲ ಬ್ರಹ್ಮ ಬಂದರೂ ಚುನಾವಣೆಯಲ್ಲಿಸ್ಪರ್ಧೆ ಮಾಡುವುದು ಖಚಿತ " ಎಂದು ಹೇಳುತ್ತಾ ಬಂದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಡೆಗೂ ಚುನಾವಣೆ ಕಣದಲ್ಲಿ ಉಳಿದಿದ್ದರು. ಇವರ ಸ್ಪರ್ಧೆ, ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ತೊಡಕಾಗಬಹುದು ಎಂದು ನಿರೀಕ್ಷಿಸಲಾಗಿತ್ತು.
Advertisement