
ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ 33 ವರ್ಷದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ತಾವು ಏನೇ ಪ್ರಶ್ನೆಗಳನ್ನು ಕೇಳಿದರೂ ಅವುಗಳಿಗೆ ಯಾವುದೇ ಉತ್ತರ ನೀಡುತ್ತಿಲ್ಲ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ವಿಚಾರಣೆಯಲ್ಲಿ ಯಾವುದೇ ಪ್ರಗತಿ ಸಾಧಿಸಲು ಆಗುತ್ತಿಲ್ಲ. ಹೀಗಾಗಿ, ಆಪಾದಿತ ವಿಡಿಯೋಗಳಲ್ಲಿನ ಧ್ವನಿಯೊಂದಿಗೆ ಪ್ರಜ್ವಲ್ ಅವರ ಧ್ವನಿ ಹೊಂದಾಣಿಕೆಯಾಗುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಈಗ ಅವರ ಧ್ವನಿ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗಳಿಗೆ ಕಳುಹಿಸಲು ಮುಂದಾಗಿದ್ದಾರೆ.
ಸೋಮವಾರ ಬೆಳಗ್ಗೆ ಮತ್ತೆ ಪ್ರಜ್ವಲ್ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಎಸ್‌ಐಟಿ ಅಧಿಕಾರಿಗಳು ಬೆಳಗ್ಗೆ 11 ಗಂಟೆಯಿಂದ 11.30 ರ ನಡುವೆ ಪ್ರಜ್ವಲ್ ಅವರನ್ನು ಆಸ್ಪತ್ರೆಗೆ ಕರೆತಂದರು ಮತ್ತು ಮಧ್ಯಾಹ್ನ 1 ಗಂಟೆಗೆ ಅಲ್ಲಿಂದ ತೆರಳಿದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಪ್ರಜ್ವಲ್ ಅವರನ್ನು ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಹೃದಯದ ಆರೋಗ್ಯದ ಸಾಮಾನ್ಯ ಮೌಲ್ಯಮಾಪನ ಪರೀಕ್ಷೆಗಳಿಗೆ ಒಳಪಡಿಸಲಾಯಿತು. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.
ಹಾಸನ ಮತ್ತಿತರ ಕಡೆ ಸ್ಥಳ ಮಹಜರಿಗಾಗಿ ಪ್ರಜ್ವಲ್ ಅವರನ್ನು ಕರೆದೊಯ್ಯುವ ಸಾಧ್ಯತೆ ಇರುವುದರಿಂದ ಮತ್ತೆ ಸಾಮಾನ್ಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಅವರ ವಿರುದ್ಧ ದಾಖಲಾಗಿರುವ ಮೂರು ಎಫ್‌ಐಆರ್‌ಗಳಲ್ಲಿ, ಹಾಸನದ ಆರ್‌ಸಿ ರಸ್ತೆಯಲ್ಲಿರುವ ಸಂಸದರ ಅಧಿಕೃತ ಕ್ವಾರ್ಟರ್ಸ್‌ನಲ್ಲಿ ಮತ್ತು ಹೊಳೆನರಸೀಪುರದಲ್ಲಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಸಂತ್ರಸ್ತರು ಎಸ್‌ಐಟಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ತನಿಖೆಯ ಸಮಯದಲ್ಲಿ, ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ಬೆಂಗಳೂರಿಗೆ ಬಂದಿಳಿಯುವ ಮುನ್ನ 34 ದಿನ ಎಲ್ಲಿದ್ದರು ಎಂಬ ಬಗ್ಗೆಯೂ ಪ್ರಶ್ನಿಸಿದ್ದಾರೆ. ಆದರೆ, ಪ್ರಜ್ವಲ್ ನುಣುಚಿಕೊಳ್ಳುವ ಉತ್ತರವನ್ನು ನೀಡಿದ್ದು, ತನ್ನ ಮೊಬೈಲ್ ಫೋನ್ ಕಳ್ಳತನವಾಗಿದೆ ಎಂದು ಆರೋಪಿಸಿ ಕಳ್ಳತನದ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.
ಈಮಧ್ಯೆ, ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಿರದ ಪ್ರಜ್ವಲ್ ರೇವಣ್ಣ ಅವರ ತಾಯಿ ಭವಾನಿ ರೇವಣ್ಣಗಾಗಿ ಎಸ್‌ಐಟಿ ರಚಿಸಿದ್ದ ನಾಲ್ಕು ವಿಶೇಷ ತಂಡಗಳು ಶೋಧವನ್ನು ಮುಂದುವರೆಸಿವೆ. ಆಕೆಯನ್ನು ಹುಡುಕಿಕೊಂಡು ಮುಂಬೈಗೆ ತೆರಳಿದ ಅಧಿಕಾರಿಗಳ ತಂಡ ಬರಿಗೈಯಲ್ಲಿ ಮರಳಿದೆ.
Advertisement