ಬೆಂಗಳೂರು 'ರೇವ್ ಪಾರ್ಟಿ ಪ್ರಕರಣ: ತೆಲುಗು ನಟಿ ಹೇಮಾ 24 ಗಂಟೆ ಸಿಸಿಬಿ ಕಸ್ಟಡಿಗೆ
ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ ಆರ್ ಫಾರ್ಮ್ ಹೌಸ್ ನಲ್ಲಿ ಇತ್ತೀಚಿಗೆ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗಿನ ನಟಿ ಹೇಮಾ ಅವರನ್ನು ಸಿಸಿಬಿ ಕಸ್ಟಡಿಗೆ ನೀಡಿ ಅನೇಕಲ್ ನ ಜಿಎಂಎಫ್ ಸಿ ಕೋರ್ಟ್ ಆದೇಶ ಹೊರಡಿಸಿದೆ. ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ವಶಕ್ಕೆ ನೀಡಬೇಕು ಎಂದು ಅಧಿಕಾರಿಗಳು ಕೋರ್ಟ್‍ಗೆ ಮನವಿ ಮಾಡಿದ್ದರು. ವಾದ ಆಲಿಸಿದ ನಾಲ್ಕನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ 24 ಗಂಟೆಗಳ ಕಾಲ ಸಿಸಿಬಿ ವಶಕ್ಕೆ ಹೇಮಾರನ್ನು ಕೊಟ್ಟಿದೆ.
ಹೆಚ್ಚಿನ ವಿಚಾರಣೆಗಾಗಿ ಹೇಮಾರನ್ನು ಸಿಸಿಬಿ ವಶಕ್ಕೆ ನೀಡುವಂತೆ ಸಿಸಿಬಿ ಪರ ವಕೀಲರು ಮನವಿ ಮಾಡಿಕೊಂಡರು. ಪಬ್ಲಿಕ್ ಪ್ರಾಸಿಕ್ಯೂಟರ್ ವಾದಕ್ಕೆ ಹೇಮಾ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಸಂತೋಷ ಎಂಬ ಖಾಸಗಿ ಆಸ್ಪತ್ರೆಯಲ್ಲಿ ಬ್ಲಡ್ ಟೆಸ್ಟ್ ಮಾಡಲಾಗಿದೆ. ನ್ಯಾಯಾಲಯ ಖಾಸಗಿ ಆಸ್ಪತ್ರೆ ವರದಿಗೆ ಮನ್ನಣೆ ನೀಡಬಾರದು. ಎಫ್ಎಸ್ಎಲ್ ವರದಿ ಇನ್ನೂ ಬಂದಿಲ್ಲ. ಹಾಗಾಗಿ ಸಿಸಿಬಿ ಕಸ್ಟಡಿಗೆ ನೀಡಬಾರದು ಎಂದು ಹೇಮಾ ಪರ ವಕೀಲರು ನ್ಯಾಯಾಧೀಶರಿಗೆ ಮನವಿ ಮಾಡಿದರು.
ವಾದ ಪ್ರತಿವಾದ ಅಲಿಸಿದ ನ್ಯಾಯಾಧೀಶರು ಮಧ್ಯಾಹ್ನ ಮೂರು ಗಂಟೆಗೆ ಆದೇಶ ಕಾಯ್ದಿರಿಸಿದ್ದರು. ಮೂರು ಗಂಟೆಯ ನಂತರ ಆನೇಕಲ್ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಎ.ಎಸ್ ಸಲ್ಮಾ ಅವರು 24 ಗಂಟೆಗಳ ಕಾಲ ಸಿಸಿಬಿ ವಶಕ್ಕೆ ನೀಡಿ ಆದೇಶ ಹೊರಡಿಸಿದರು. ಸಿಸಿಬಿ ವಶಕ್ಕೆ ಪಡೆದ ನಂತರ ಕೋರ್ಟ್‌ನಿಂದ ಹೊರಬಂದ ಹೇಮಾ ನ್ಯಾಯ ಸಿಗುವ ಭರವಸೆ ವ್ಯಕ್ತಪಡಿಸಿದರು.ವಿಶೇಷ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಹಾಕಲಾಗುವುದು ಎಂದರು.
ಹೇಮಾರನ್ನು ನಾಳೆ ಸಂಜೆ 6 ಗಂಟೆ ವರೆಗೆ ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಕಸ್ಟಡಿಗೆ ನೀಡಲಾಗಿದೆ. ನಾಳೆ ಸಂಜೆ 6 ಗಂಟೆ ವೇಳೆಗೆ ಮತ್ತೆ ನ್ಯಾಯಾಲಯದ ಮುಂದೆ ಸಿಸಿಬಿ ಅಧಿಕಾರಿಗಳು ಹಾಜರುಪಡಿಸಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ